More

    ಸಾಮಾಜಿಕ ಜಾಲತಾಣದಲ್ಲಿ ಪಿವಿ ಸಿಂಧು ಕೋಚ್ ಹಿಂಬಾಲಕರ ಸಂಖ್ಯೆ ಬರೋಬ್ಬರಿ ಏರಿಕೆ!

    ನವದೆಹಲಿ: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿವಿ ಸಿಂಧು ಸತತ 2ನೇ ಒಲಿಂಪಿಕ್ಸ್ ಪದಕ ಜಯಿಸುತ್ತಿದ್ದಂತೆ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಇದೇ ರೀತಿ ಅವರ ಹಾಲಿ ಕೋಚ್ ಆಗಿರುವ ದಕ್ಷಿಣ ಕೊರಿಯಾದ ಪಾರ್ಕ್ ಟೀ-ಸ್ಯಾಂಗ್ ಜನಪ್ರಿಯತೆ ಕೂಡ ಸಾಕಷ್ಟು ಹೆಚ್ಚಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ಪಾರ್ಕ್ ಇನ್‌ಸ್ಟಾಗ್ರಾಂನಲ್ಲಿ ಕೇವಲ 328 ಹಿಂಬಾಲಕರನ್ನು ಹೊಂದಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ಒಟ್ಟು ಹಿಂಬಾಲಕರ ಸಂಖ್ಯೆ 18 ಸಾವಿರಕ್ಕೂ ಅಧಿಕ ಆಗಿದೆ! ಈ ಪೈಕಿ ಬಹುಪಾಲು ಭಾರತೀಯರೇ ಆಗಿದ್ದಾರೆ.

    ಸಿಂಧು ಪದಕ ಗೆಲುವಿಗೆ ನೆರವಾಗುವ ವೇಳೆ 42 ವರ್ಷದ ಪಾರ್ಕ್ ಟೀ-ಸ್ಯಾಂಗ್ ಕೂಡ ತ್ಯಾಗಗಳನ್ನು ಮಾಡಿದ್ದಾರೆ. ಕಳೆದ ಫೆಬ್ರವರಿಯಿಂದ ಕುಟುಂಬದ ಜತೆಗೆ 13 ದಿನಗಳನ್ನಷ್ಟೇ ಕಳೆದಿರುವೆ. ನನ್ನ 4 ವರ್ಷದ ಮಗಳು (ಸೋಯು) ಪ್ರತಿದಿನ ನನಗೆ ಕರೆ ಮಾಡಿ, ಪಾಪಾ ನೀನು ಯಾವಾಗ ಮನೆಗೆ ಬರುವೆ? ಎಂದು ಕೇಳುತ್ತಿರುತ್ತಾಳೆ. ಆಗ ನನಗೆ ಭಾರಿ ಬೇಸರವಾಗುತ್ತದೆ. ಕರೊನಾ ಹಾವಳಿ ಶುರುವಾದ ಬಳಿಕ ಸಿಂಧು ಮತ್ತು ನಾನು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಕರೊನಾದ ಆರಂಭದಲ್ಲಿ ನಾವು 2 ತಿಂಗಳ ಕಾಲ ಅಭ್ಯಾಸದಿಂದ ದೂರ ಉಳಿದಿದ್ದೆವು. ಬಳಿಕ ತರಬೇತಿ ಆರಂಭಿಸಿದಾಗ ನಾನು ಸದ್ಯಕ್ಕೆ ಕೊರಿಯಾಗೆ ಮರಳದಿರಲು ನಿರ್ಧರಿಸಿದೆ. ಇಲ್ಲದಿದ್ದರೆ ಸಿಂಧು ಅಭ್ಯಾಸಕ್ಕೆ ಇನ್ನಷ್ಟು ತೊಡಕಾಗುತ್ತಿತ್ತು ಎಂದು ಪಾರ್ಕ್ ಟೀ-ಸ್ಯಾಂಗ್ ವಿವರಿಸಿದ್ದಾರೆ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13 ವರ್ಷ ಪೂರೈಸಿದ ವಿರಾಟ್ ಕೊಹ್ಲಿ

    ಪಾರ್ಕ್ ಟೀ-ಸ್ಯಾಂಗ್‌ಗೆ ಮೊದಲ ಒಲಿಂಪಿಕ್ಸ್ ಪದಕ: ಪಿವಿ ಸಿಂಧು ಕಂಚು ಗೆಲುವಿನೊಂದಿಗೆ ಪಾರ್ಕ್ ಟೀ-ಸ್ಯಾಂಗ್ ಅವರ ಒಲಿಂಪಿಕ್ಸ್ ಪದಕ ಗೆಲುವಿನ ಕನಸು ನನಸಾಗಿದೆ. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಅವರು ಕ್ವಾರ್ಟರ್​ಫೈನಲ್‌ನಲ್ಲಿ ಸೋತು ಪದಕವಂಚಿತರಾಗಿದ್ದರು. ಬಳಿಕ ದಕ್ಷಿಣ ಕೊರಿಯಾ ತಂಡದ ಕೋಚ್ ಆಗಿದ್ದ ವೇಳೆ ಅವರ ಶಿಷ್ಯೆ ಆಗಿದ್ದ ಇಬ್ಬರು ಆಟಗಾರರು ಕೂಡ ಒಲಿಂಪಿಕ್ಸ್‌ನ ಕ್ವಾರ್ಟರ್​ಫೈನಲ್‌ನಲ್ಲೇ ಎಡವಿದ್ದರು. ಹೀಗಾಗಿ ಸಿಂಧು ಪದಕ ಗೆದ್ದಾಗ ನನಗೂ ಸ್ವಲ್ಪ ಅಳು ಬಂತು ಎಂದು ಪಾರ್ಕ್ ಹೇಳಿದ್ದಾರೆ. ಸಿಂಧು ಅವರ ಆಕ್ರಮಣ ಬಲಿಷ್ಠವಾಗಿದ್ದರೂ, ರಕ್ಷಣಾ ವಿಭಾಗದಲ್ಲಿ ಇನ್ನೂ ಸ್ವಲ್ಪ ಸುಧಾರಿಸಬೇಕಾಗಿದೆ ಎಂದಿರುವ ಪಾರ್ಕ್, ಟೋಕಿಯೊದಲ್ಲಿ ರಕ್ಷಣಾ ವಿಭಾಗದಲ್ಲಿನ ಎಡವಟ್ಟುಗಳಿಂದಲೇ ಸಿಂಧುಗೆ ಸೆಮಿಫೈನಲ್‌ನಲ್ಲಿ ಚೀನಾ ತೈಪೆಯ ತೈ ಜು ಯಿಂಗ್ ವಿರುದ್ಧ ಸೋಲು ಎದುರಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts