More

    ಶಾಂತಿ-ನೆಮ್ಮದಿಗೆ ಪರಮಾತ್ಮನ ಚಿಂತನೆ ಅಗತ್ಯ

    ಭಾಲ್ಕಿ: ಮನುಷ್ಯ ಶಾಂತಿ, ನೆಮ್ಮದಿ ಪಡೆಯಲು ಪರಮಾತ್ಮನ ಚಿಂತನೆ ಅತ್ಯಗತ್ಯವಾಗಿದೆ ಎಂದು ಬೀದರ್‌ನ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದ ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮೀಜಿ ನುಡಿದರು.

    ಚಳಕಾಪುರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಸದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ೧೮೮ನೇ ಜಯಂತಿ ಮಹೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ಜಗತ್ತಿನ ಸಮಸ್ತ ಪ್ರಶ್ನೆಗಳಿಗೆ ಒಂದೇ ಉತ್ತರ ಶಾಂತಿ, ನೆಮ್ಮದಿ ಪಡೆಯುವುದಾಗಿದೆ. ಶಾಂತಿ ಪಡೆಯಲು ಮನುಷ್ಯ ಹಲವು ಮಾರ್ಗಗಳನ್ನು ಹುಡುಕಿ ತೊಂದರೆಗೆ ಒಳಗಾಗುತ್ತಾನೆ. ಶಾಂತಿ ಬೇರೆಲ್ಲೂ ಇಲ್ಲ, ಅದು ನಮ್ಮಲ್ಲಿಯೇ ಇದೆ ಅನ್ನುವ ಸತ್ಯ ಅರಿಯಬೇಕು ಎಂದು ಹೇಳಿದರು.

    ಕೊಡದಲ್ಲಿರುವ ನೀರು ಮಹತ್ವದ್ದಾಗಿದೆ ಹೊರತು ಕೊಡ ಮಹತ್ವದಲ್ಲ, ಹಾಗೆಯೇ ಮನುಷ್ಯನ ಜಾತಿ, ಮತ ಮಹತ್ವದಲ್ಲ, ಅವನಲ್ಲಿರುವ ಪರಿಶುದ್ಧ ಮನಸ್ಸು ಮಹತ್ವದ್ದಾಗಿದೆ. ಗಾಳಿ, ಬೆಂಕಿಗಿಂತಲೂ ಮನಸ್ಸು ಚಂಚಲ, ಅದರ ನಿಯಂತ್ರಣಕ್ಕೆ ಗುರು ಕರುಣೆ ಬೇಕು. ನಮ್ಮ ಶರೀರ ಸಂಸಾರದಲ್ಲಿರು ಮನಸ್ಸು ಮಾತ್ರ ಚಿಂತನೆಯಲ್ಲಿರಬೇಕು. ಸುಖ, ದುಃಖಗಳು ಸಮನಾಗಿ ಕಂಡುಕೊಳ್ಳುವವರು ಧೀರರಾಗಿರುತ್ತಾರೆ. ಎಲ್ಲರ ಹೃದಯಲ್ಲಿರುವ ಪರಮಾತ್ಮ ಒಬ್ಬನೇ. ಆ ಪರಮಾತ್ಮನನ್ನು ಪ್ರೀತಿಸಿದಾಗ ಭೇದ ಬರುವುದಿಲ್ಲ ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿ ಮಾತನಾಡಿದ ಬೆಂಗಳೂರಿನ ಗವಿಪುರಂನ ಗೋಸಾಯಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಮಂಜುನಾಥ ಭಾರತಿ ಮಹಾಸ್ವಾಮೀಜಿ, ಅಧಿಕಾರಿ ವಾಣಿಯಿಂದ ಕೇಳಿದ ಮಾತುಗಳು ಹೃದಯಕ್ಕೆ ತಟ್ಟುತ್ತವೆ. ಬೀದರ್‌ನ ಶಿವಕುಮಾರ ಮಹಾಸ್ವಾಮಿಗಳದ್ದು ಅಧಿಕಾರವಾಣಿಯಾಗಿದೆ. ಅವರ ವಾಣಿಗಳು ನಮ್ಮೆಲ್ಲರ ಹೃದಯ ತಟ್ಟುವವು ಎಂದು ಹೇಳಿದರು.

    ಕಲಬುರಗಿ ಶ್ರೀ ಸಿದ್ಧಾರೂಢ ಮಠದ ಮಾತೆ ಲಕ್ಷ್ಮೀದೇವಿ, ಬೀದರ್ ಹಾಗೂ ಬಬಚ್ಛಡಿ ಆಶ್ರಮದ ಶ್ರೀ ಗಣೇಶಾನಂದ ಮಹಾರಾಜರು ಮಾತನಾಡಿದರು.
    ಗುರುದೇವಾಶ್ರಮ ಬೀದರ್‌ನ ಮಾತೆ ಸಿದ್ದೇಶ್ವರಿ ತಾಯಿ, ಮಳಚಾಪುರದ ಶ್ರೀ ಸದ್ರೂಪಾನಂದ ಸ್ವಾಮೀಜಿ, ಗೋಪಾಲ ಶಾಸ್ತ್ರಿ ಕಲ್ಲಹಂಗರಗಾ, ಮಾತೋಶ್ರೀ ಸಂಗೀತಾ ತಾಯಿ, ಶಶಿಕಲಾ ತಾಯಿ ಇತರರಿದ್ದರು.

    ಪ್ರಭು ಮಾಸುಲ್ದಾರ, ಸೋಮನಾಥ ಶೀಲವಂತ, ಗುಂಡಪ್ಪ, ಬಸವರಾಜ ಹುಲೆಪ್ಪನೋರ ಅವರಿಂದ ಸಂಗೀತ ಸೇವೆ ನಡೆಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಶಂಕರಾನಂದ ಸ್ವಾಮೀಜಿ ಸ್ವಾಗತಿಸಿದರು. ಶ್ರೀ ಶಿವಾನಂದ ಸ್ವಾಮೀಜಿ, ಉಪನ್ಯಾಸಕ ನರೇಂದ್ರ ಪಾಟೀಲ್ ನಿರೂಪಣೆ ಮಾಡಿದರು. ವಿನಾಯಕ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts