More

    18ಕ್ಕೇರಿದ ಸೋಂಕಿತರ ಸಂಖ್ಯೆ

    ಹಾವೇರಿ: ಮಹಾರಾಷ್ಟ್ರದಿಂದ ಬಂದಿದ್ದ ಶಿಗ್ಗಾಂವಿಯ 46 ವರ್ಷದ ಮಹಿಳೆ ಹಾಗೂ ಬಂಕಾಪುರದ ಚಾಲಕನ ಸಂಪರ್ಕದಿಂದ 63 ವರ್ಷದ ವೃದ್ಧ ಸೇರಿ ಗುರುವಾರ ಜಿಲ್ಲೆಯ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18ಕ್ಕೇರಿದೆ.

    ಮುಂಬೈನಿಂದ ಪತಿಯೊಂದಿಗೆ ಬಂದು ಶಿಗ್ಗಾಂವಿ ತಾಲೂಕು ಜಕ್ಕಿನಕಟ್ಟಿಯಲ್ಲಿನ ರಾಣಿ ಚನ್ನಮ್ಮ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಉಳಿದಿದ್ದ ಶಿಗ್ಗಾಂವಿ ಪಟ್ಟಣದ 46 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮುಂಬೈಗೆ ಹೋಗಿ ಬಂದಿದ್ದ ಚಾಲಕ ಪಿ-1691ನ ಸಂಬಂಧಿ ಬಂಕಾಪುರದ ಕೊಟ್ಟಿಗೇರಿಯ ವೃದ್ಧನಿಗೆ ಸೋಂಕು ತಗುಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದ್ದಾರೆ.

    ಟ್ರಾವೆಲ್ ಹಿಸ್ಟರಿ: ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿಯಾಗಿರುವ ಮಹಿಳೆ ತನ್ನ ಪತಿ ಹಾಗೂ ಮಗಳೊಂದಿಗೆ ಶಿಗ್ಗಾಂವಿಗೆ ಆಗಮಿಸಿದ್ದರು. ವೈದ್ಯಕೀಯ ತಪಾಸಣೆ ನಂತರ ಕ್ವಾರಂಟೈನ್ ಮಾಡಿ, ಮೇ 24ರಂದು ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. ಮೇ 31ರಂದು ಪತಿ (ಪಿ-3271) ಹಾಗೂ ಜೂನ್ 2ರಂದು ಮಗಳಿಗೆ (ಪಿ-3668) ಸೋಂಕು ದೃಢಪಟ್ಟಿತ್ತು. ಮಹಿಳೆಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಬಂಕಾಪುರದ ವೃದ್ಧ ಕೊಟ್ಟಿಗೇರಿಯಲ್ಲಿರುವ ಮನೆಯಲ್ಲಿಯೇ ಇದ್ದು ಎಲ್ಲಿಯೂ ಸಂಚರಿಸಿಲ್ಲ. ವೃದ್ಧ ವಾಸಿಸುತ್ತಿರುವ ಬೀದಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಬಂಕಾಪುರ ಪಟ್ಟಣವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ.

    ಲಾಕ್​ಡೌನ್ 3.0ವರೆಗೆ ಗ್ರೀನ್ ಜೋನ್​ನಲ್ಲಿಯೇ ಇದ್ದ ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈನಿಂದ ಬಂದವರಿಬ್ಬರು ಸೋಂಕು ತಂದರು. ಅವರ ಸಂಪರ್ಕಕ್ಕೆ ಬಂದ ಸವಣೂರನ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲೆಯ 18ಸೋಂಕಿತರಲ್ಲಿ 16ಜನ ಮಹಾರಾಷ್ಟ್ರದಿಂದ ಬಂದವರು. ಈಗಾಗಲೇ ಆರು ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಗೊಂದಲ ಮೂಡಿಸಿದ ಹೆಲ್ತ್ ಬುಲೆಟಿನ್

    ಜಿಲ್ಲೆಯಲ್ಲಿ ಗುರುವಾರ ಇಬ್ಬರಲ್ಲಿ ಕರೊನಾ ಪಾಸಿಟಿವ್ ಬಂದಿರುವುದನ್ನು ಜಿಲ್ಲಾಡಳಿತ ಸಂಜೆಯ ವೇಳೆಗೆ ಖಚಿತಪಡಿಸಿತ್ತು. ಆದರೆ ರಾಜ್ಯ ಬುಲೆಟಿನ್​ನಲ್ಲಿ ಈ ಇಬ್ಬರು ರೋಗಿಗಳ ಮಾಹಿತಿಯೇ ನಮೂದಾಗಿರಲಿಲ್ಲ. ಅಲ್ಲದೆ, ಬುಲೆಟಿನ್​ನಲ್ಲಿ ಹಾವೇರಿಯ ವ್ಯಕ್ತಿಗೆ (ಪಿ-4081) ಸೋಂಕು ತಗುಲಿದೆ ಎಂದು ನಮೂದಾಗಿದೆ. ಇದು ಗೊಂದಲಕ್ಕೆ ಕಾರಣವಾಗಿತ್ತು. ವಾಸ್ತವದಲ್ಲಿ ಈ ವ್ಯಕ್ತಿ ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಯೇ ಕ್ವಾರಂಟೈನ್ ಆಗಿದ್ದ. ಅಲ್ಲಿಯೇ ಪಾಸಿಟಿವ್ ಬಂದಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರ ಮೂಲ ಮಾತ್ರ ಹಾವೇರಿ. ಇವರು ಹಾವೇರಿಗೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸ್ಪಷ್ಟಪಡಿಸಿದ್ದಾರೆ.

    264 ಮಾದರಿ ಪರೀಕ್ಷೆಗೆ

    ಜಿಲ್ಲೆಯಲ್ಲಿ ಗುರುವಾರ 94 ಜನರ ಲ್ಯಾಬ್ ವರದಿ ನೆಗೆಟಿವ್ ಬಂದಿದೆ. 264 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪ್ರಭಾರ ಡಿಎಚ್​ಒ ಡಾ. ಎಂ. ಜಯಾನಂದ ತಿಳಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದವರ ಒಟ್ಟು 7,319ಜನರ ರಕ್ತ, ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 6,652ವರದಿಗಳು ನೆಗೆಟಿವ್ ಬಂದಿವೆ. 607ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts