More

    ಪ್ರತಿದಿನ ರಾಮನಗರ ವಿಭಾಗದ ಕೆಎಸ್​ಆರ್​ಟಿಸಿಗೆ ಆಗುತ್ತಿದೆ ಭಾರಿ ನಷ್ಟ!

    ರಾಮನಗರ: ಕೋವಿಡ್ ಅನ್​ಲಾಕ್ ಪ್ರಕ್ರಿಯೆ ಆರಂಭಗೊಂಡು 3 ತಿಂಗಳು ಕಳೆದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಆಗುತ್ತಿರುವ ನಷ್ಟ ಮಾತ್ರ ಕಡಿಮೆ ಆಗುತ್ತಿಲ್ಲ.

    ಕರೊನಾದಿಂದಾಗಿ ಬಹುತೇಕ ಸ್ಥಗಿತಗೊಂಡಿದ್ದ ಸಾರಿಗೆ ಸಂಚಾರ ಜಿಲ್ಲೆಯಲ್ಲಿ ಹಂತ ಹಂತವಾಗಿ ಆರಂಭಗೊಂಡಿದೆ. ಆದರೆ, ಚೇತರಿಕೆ ನಿರೀಕ್ಷೆಯಲ್ಲಿದ್ದ ರಾಮನಗರ ವಿಭಾಗಕ್ಕೆ ಪ್ರತಿದಿನ ಲಕ್ಷಾಂತರ ರೂ. ನಷ್ಟವಾಗುತ್ತಿದ್ದು, ಅಧಿಕಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.

    ಲಕ್ಷಾಂತರ ನಷ್ಟ: ರಾಮನಗರ ವಿಭಾಗಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಘಟಕ ಸೇರಿ ಒಟ್ಟು 6 ಘಟಕಗಳು ಸೇರಿದ್ದು. ಸಾಮಾನ್ಯ ದಿನಗಳಲ್ಲಿ 504 ಮಾರ್ಗಗಳಲ್ಲಿ ಬಸ್​ಗಳು ಸಂಚರಿಸುತ್ತಿದ್ದವು. ಕರೊನಾದಿಂದಾಗಿ ಈ ಎಲ್ಲ ಮಾರ್ಗಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ವಿಭಾಗದ ಎಲ್ಲ ಘಟಕಗಳಿಂದ ಹಂತ ಹಂತವಾಗಿ ಎಲ್ಲ ಮಾರ್ಗಗಳ ಬಸ್ ಸೇವೆ ಆರಂಭಿಸಲಾಗಿದೆ. ಪ್ರಸ್ತುತ 400 ಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸಂಸ್ಥೆಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗುತ್ತಿದೆ. ಹಿಂದೆ ಪ್ರತಿದಿನ 52-55 ಲಕ್ಷ ರೂ. ಸಂಗ್ರಹವಾಗುತ್ತಿತ್ತು. ಈಗ ಇದು 40-45 ಲಕ್ಷ ರೂ.ಗಳಿಗೆ ಕುಸಿದಿದ್ದು, ಪ್ರತಿದಿನ ಕನಿಷ್ಠ 12-15 ಲಕ್ಷ ರೂ. ನಷ್ಟ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ನಷ್ಟದ ಪ್ರಮಾಣ ಸೋಮವಾರ ಮಾತ್ರ ಕಡಿಮೆ ಆಗುತ್ತಿದ್ದು, ಉಳಿದಂತೆ ವಾರದ 6 ದಿನಗಳು ನಷ್ಟ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ.

    ಜನರೇ ಬರುತ್ತಿಲ್ಲ: ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಸಂಚರಿಸುವ ಬಸ್​ಗಳಲ್ಲಿ ಯಾವಾಗಲೂ ಜನರು ತುಂಬಿದಂತೆ ಕಾಣುತ್ತದೆ. ಆದರೆ ಕೆಲವೇ ಬಸ್​ಗಳಲ್ಲಿ ಮಾತ್ರ ಈ ರೀತಿ ಕಾಣಬಹುದಾಗಿದ್ದು, ವಾಸ್ತವದಲ್ಲಿ ಜನರು ಬಸ್​ಗಳಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ ಎನ್ನುವುದು ನಿಗಮದ ಸಿಬ್ಬಂದಿ ಅಭಿಪ್ರಾಯ. ಇನ್ನು ಗ್ರಾಮೀಣ ಭಾಗದ ಬಸ್​ಗಳಲ್ಲಿ ಕೇಳುವಂತೆಯೇ ಇಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಬಸ್​ಗಳು ಸಂಚರಿಸಿದರೂ ಜನರಿಲ್ಲದೆ ನಿರೀಕ್ಷಿತ ಲಾಭ ಗಳಿಸಲು ಆಗುತ್ತಿಲ್ಲ ಎನ್ನುತ್ತಾರೆ. ಈಗಾಗಲೇ ಹೊರ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಗೆ ಸೇವೆ ಆರಂಭಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರಿಂದ ಸ್ಪಂದನೆ ದೊರೆಯುತ್ತಿಲ್ಲ.

    ಸ್ಪಂದನೆ ಇಲ್ಲದಿದ್ದರೆ ಬಂದ್

    ಮತ್ತೊಂದೆಡೆ ಹಂತ ಹಂತವಾಗಿ ಬಸ್​ಗಳ ಸೇವೆ ಆರಂಭಿಸಿದ್ದರೂ, ಪ್ರಯಾಣಿಕರಿಂದ ಸ್ಪಂದನೆ ದೊರೆಯದೇ ಇರುವ ಮಾರ್ಗಗಳ ಸೇವೆಯನ್ನು ಬಂದ್ ಮಾಡಿ ಹೊಸ ಮಾರ್ಗಗಳಲ್ಲಿ ಬಸ್ ಓಡಿಸುವ ಕೆಲಸವನ್ನು ರಾಮನಗರ ವಿಭಾಗದಲ್ಲಿ ಮಾಡಲಾಗುತ್ತಿದೆ. ಒಟ್ಟಾರೆ ಸದ್ಯದ ಮಟ್ಟಿಗೆ ಸಾರಿಗೆ ನಿಗಮಕ್ಕೆ ಲಾಭ ಎನ್ನುವುದು ಮರೀಚಿಕೆ ಆಗಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಜನತೆ ಬಸ್​ಗಳ ಸೇವೆ ಬಳಸಿಕೊಳ್ಳದೇ ಇರುವುದು ನಿಗಮದ ಅಧಿಕಾರಿಗಳ ನಿದ್ದೆಗೆಡಿಸಿದೆ. ಇದರ ಹೊರತಾಗಿಯೂ ಮುಂದಿನ ದಿನಗಳಲ್ಲಿ ಸಾರಿಗೆ ಕ್ಷೇತ್ರದ ಬಳಕೆ ಹೆಚ್ಚಾಗಿ ಲಾಭವೂ ಎಂದಿನಂತೆ ಆಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

    ರಾಮನಗರ ವಿಭಾಗದಲ್ಲಿ ಸುಮಾರು 400 ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಆದರೆ ಲಾಭದ ನಿರೀಕ್ಷೆ ಹುಸಿಯಾಗಿದೆ. ಪ್ರತಿದಿನ 12-15 ಲಕ್ಷ ರೂ. ನಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಸರಿಹೋಗುತ್ತದೆ ಎನ್ನುವ ವಿಶ್ವಾಸವಿದೆ.

    | ಎನ್.ಮಹೇಶ್ ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ರಾಮನಗರ ವಿಭಾಗ,

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts