More

    ಮೂರು ಶಾಲೆಗಳ ಅಭಿವೃದ್ಧಿಗೆ 15 ಲಕ್ಷ ರೂ. ಮಂಜೂರು

    ಎನ್.ಆರ್.ಪುರ: ಸೀತೂರು ಗ್ರಾಮ ಪಂಚಾಯಿತಿ ಮಲ್ಲಂದೂರು ಶಾಲೆ, ಬೆಳ್ಳೂರು ಪ್ರೌಢಶಾಲೆ ಹಾಗೂ ಬೆಳ್ಳೂರು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹೈಟೆಕ್ ಶೌಚಗೃಹ ನಿರ್ಮಿಸಲು ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 15 ಲಕ್ಷ ರೂ. ಮಂಜೂರಾಗಿದೆ ಎಂದು ಗ್ರಾಪಂ ಸದಸ್ಯ ಎಚ್.ಇ.ದಿವಾಕರ ತಿಳಿಸಿದರು.

    ಬುಧವಾರ ಸೀತೂರು ಶಾಲಾ ಆವರಣದ ರಂಗ ಮಂದಿರದಲ್ಲಿ ಗ್ರಾಪಂ ಆಶ್ರಯದಲ್ಲಿ ನಡೆದ ಮಕ್ಕಳ, ಮಹಿಳೆಯರ ಹಾಗೂ ಅಂಗವಿಕಲರ ಗ್ರಾಮ ಸಭೆಯಲ್ಲಿ ಮಾತನಾಡಿ, ಮೂರೂ ಶಾಲೆಗಳಿಗೆ ತಾಪಂ ಎನ್‌ಆರ್‌ಇಜಿಯಿಂದ 2.80 ಲಕ್ಷ ಹಾಗೂ ಶಿಕ್ಷಣ ಇಲಾಖೆಯಿಂದ 2.20 ಲಕ್ಷ ರೂ. ಬಿಡುಗಡೆಯಾಗಲಿದೆ. ಮಲ್ಲಂದೂರು ಶಾಲೆಗೆ ಎನ್‌ಆರ್‌ಇಜಿಯಿಂದ ಆವರಣ ಗೋಡೆ ನಿರ್ಮಿಸಲು 3 ಲಕ್ಷ, ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣಗೋಡೆ ನಿರ್ಮಿಸಲು 3 ಲಕ್ಷ ಮಂಜೂರಾಗಿದೆ ಎಂದರು.
    ಗ್ರಾಪಂ ಸದಸ್ಯ ಎಸ್.ಉಪೇಂದ್ರ ಮಾತನಾಡಿ, ಎಲ್ಲ ಸರ್ಕಾರಿ ಶಾಲೆಗಳಿಗೂ ಸರ್ಕಾರ ಮೂಲ ಸೌಕರ್ಯ ಒದಗಿಸಿಕೊಟ್ಟಿದೆ. ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಶಾಲೆ ಮುಚ್ಟುವ ಪರಿಸ್ಥಿತಿ ಬಂದಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು ಎಂದು ಹೇಳಿದರು.
    ಗ್ರಾಪಂ ಅಧ್ಯಕ್ಷೆ ರೇಖಾ ಮಾತನಾಡಿ, ಮಕ್ಕಳ ಗ್ರಾಮ ಸಭೆಯಲ್ಲಿ ಹಲವು ಶಾಲೆಯ ಮಕ್ಕಳು ಶಾಲೆಗಳಿಗೆ ಬೇಕಾದ ಸೌಕರ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಗ್ರಾಪಂನಿಂದ ಹಂತ ಹಂತವಾಗಿ ಮೂಲಭೂತ ಸೌಕರ್ಯ ಹಾಗೂ ಮಕ್ಕಳ ಇತರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
    ಗ್ರಾಮ ಸಭೆಯಲ್ಲಿ ಸೀತೂರು ಗ್ರಾಪಂ ವ್ಯಾಪ್ತಿಯ 9 ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಸೀತೂರು ಶಾಲೆಗೆ ಕಾಂಪೌಂಡು, ಶೌಚಗೃಹ, ಕೈತೋಟದ ಪರಿಕರಗಳನ್ನು ಒದಗಿಸಬೇಕು ಎಂದು ಮಕ್ಕಳು ಮನವಿ ಮಾಡಿದರು. ಕಮಲಾಪುರ ಶಾಲೆಯ ಗೋಡೆ ಹಾಗೂ ನೆಲ ಹಾಳಾಗಿದ್ದು ದುರಸ್ತಿ ಮಾಡಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಕೋರಿದರು. ಮಲ್ಲಂದೂರು ಶಾಲೆಗೆ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಗ್ರಾಮ ಪಂಚಾಯಿತಿಯಿಂದ ಧನ ಸಹಾಯ ಮಾಡಬೇಕು ಎಂದು ಮಕ್ಕಳು ವಿನಂತಿಸಿದರು. ಬೆಳ್ಳೂರು ಪ್ರೌಢಶಾಲೆ ಛಾವಣಿ ಹಾಳಾಗಿದೆ. ನೆಲಕ್ಕೆ ಹಾಕಿದ್ದ ಸಿಮೆಂಟು ಸಹ ಹಾಳಾಗಿದ್ದು ದುರಸ್ತಿ ಮಾಡಿಸಿಕೊಡಬೇಕು ಎಂದು ಬೇಡಿಕೆ ಇರಿಸಿದರು.
    ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಕವಿತಾ, ಸುಜಾತಾ, ದಾಮಿನಿ, ವಿಜಯಾ, ಸಿದ್ದಪ್ಪಗೌಡ, ಪಿಡಿಒ ಶ್ರೀನಿವಾಸ್, ಸೀತೂರು ಶಾಲೆ ಮುಖ್ಯಶಿಕ್ಷಕ ಸುರೇಶ್, ಗ್ರಾಪಂ ಕಾರ್ಯದರ್ಶಿ ನವೀನ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts