More

    15ರಂದು ರೈತ ಸಂಘದಿಂದ ಪ್ರತಿಭಟನೆ

    ಮೈಸೂರು: ಕನ್ನಡಿಗರ ಅಸ್ಮಿತೆ ಆಗಿರುವ ಕೆಎಂಎಫ್ ನಂದಿನಿ ಬ್ರಾೃಂಡ್ ಉಳಿವಿಗಾಗಿ ಹಾಗೂ ಅಮೂಲ್ ತಡೆಯಲು ಏ.15ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
    ಸಹಕಾರ ತತ್ವದ ಆಧಾರದಲ್ಲಿ ನಡೆಯುತ್ತಾ ರಾಜ್ಯದ ಕೋಟ್ಯಂತರ ಜನರ ಜೀವನಾಧಾರವಾಗಿರುವ ಕೆಎಂಎಫ್ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳನ್ನು ನಾಶ ಮಾಡುವ ಹುನ್ನಾರದಿಂದ ಅಮೂಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಗೆ ಬಿಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
    ಈ ಹಿಂದೆ ಬ್ರಿಟಿಷರು ವ್ಯಾಪಾರಕ್ಕಾಗಿ ಲಗ್ಗೆ ಇಟ್ಟು ಇಡೀ ದೇಶವನ್ನೇ ಕೊಳ್ಳೆ ಹೊಡೆದರು. ಹಾಗೆಯೇ ಈಗ ಗುಜರಾತಿನ ಮಾರ್ವಾಡಿ ಅಮಿತ್ ಷಾ, ನರೇಂದ್ರಮೋದಿ ಅವರು ವ್ಯಾಪಾರಿ ಅಂಬಾನಿಗೆ ಮಾರಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
    ಕನ್ನಡದ ನೆಲದ ನಂದಿನಿ ಉತ್ಪನ್ನಗಳನ್ನು ಕೊಳ್ಳುವ ಮೂಲಕ ನಂದಿನಿ ಅಸ್ಮಿತೆಯನ್ನು ಉಳಿಸಬೇಕು ಎಂದು ಎಲ್ಲ ಗ್ರಾಹಕರಲ್ಲಿ ಮನವಿ ಮಾಡಲಾಗುವುದು. ಸಹಕಾರ ತತ್ವದಡಿ ನಂದಿನಿ ಉತ್ಪನ್ನಗಳು ಉತ್ಪಾದನೆಯಾದರೆ, ಅಮೂಲ್ ಕಾರ್ಪೋರೇಟ್ ಕಂಪನಿಯ ಅಣತಿಯಂತೆ ನಡೆಯುತ್ತಿದೆ ಎಂದು ದೂರಿದರು.
    ರಾಜ್ಯದ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನಿಂದ ಭೂಮಿಯನ್ನು ಕಿತ್ತು ಬಂಡವಾಳಶಾಹಿಗಳ ವಶಕ್ಕೆ ಒಪ್ಪಿಸಲು ಹೊರಟಿದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಎಪಿಎಂಸಿ ಅಸ್ತಿತ್ವವನ್ನೇ ಇಲ್ಲದಾಗಿಸಿ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ಮಾರುಕಟ್ಟೆಯನ್ನು ಒಪ್ಪಿಸಿದೆ. ಈಗ ಕೆಎಂಎಫ್ ನಂದಿನಿಯನ್ನು ಮುಳುಗಿಸಲು ಹೊರಟಿದೆ ಎಂದು ಆರೋಪಿಸಿದರು.
    ಜಾನುವಾರು ಹತ್ಯೆ ಮತ್ತು ಸಂರಕ್ಷಣೆ ಕಾಯ್ದೆ ತಂದು ಪಶುಸಂಗೋಪನೆಯನ್ನೇ ನಾಶ ಮಾಡುತ್ತಿದೆ, ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡದೆ ಹಣ ಲೂಟಿ ಮಾಡುತ್ತಿದೆ. ಕಬ್ಬು ಬೆಳೆಗಾರರ ಹೊರಾಟವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿ, ರೈತರನ್ನು ನಿರ್ಲಕ್ಷಿಸಿ ಆಡಳಿತ ನಡೆಸಿದೆ ಎಂದು ಆರೋಪಿಸಿದರು.
    ಜನ ಸಾಮಾನ್ಯರ ಸಮಸ್ಯೆಗಳನ್ನು ಬಿಟ್ಟು ಮಂದಿರ, ಮಸೀದಿ ವಿಚಾರ ಮಾತನಾಡುತ್ತಾ ಬಿಜೆಪಿ ರಾಜನೀತಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ವಿರೋಧಿ ಆಡಳಿತ ನಡೆಸುತ್ತಿದೆ. ಆದ್ದರಿಂದ ಇಂತಹ ಜನ ವಿರೋಧಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಜನ ಸಾಮಾನ್ಯರು ಮತ್ತಷ್ಟು ಸಂಕಷ್ಟಗಳ ಸುಳಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಹೀಗಾಗಿ ರೈತ ಸಂಘದಿಂದ ಜನ ಜಾಗೃತಿ ಅಭಿಯಾನ ನಡೆಯಲಿದೆ ಎಂದರು.
    ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಮತ್ತು ಸಮಾನ ಮನಸ್ಕ ಪಕ್ಷಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಸಂಘವು ಬಿಜೆಪಿ ವಿರುದ್ಧ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
    ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ರೈತ ಸಂಘದ ಮೈಸೂರು ತಾಲೂಕು ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಮಹದೇವನಾಯಕ, ಮುಖಂಡ ಸಿಂಗ್ರೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts