More

    15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 21 ರಿಂದ

    ಚಿಕ್ಕೋಡಿ ಗ್ರಾಮೀಣ: ಪಟ್ಟಣದ ಸಿಎಲ್‌ಇ ಸಂಸ್ಥೆಯ ಸುವರ್ಣ ಮಹೋತ್ಸವ ಕಟ್ಟದಲ್ಲಿ ಡಿ.21, 22 ರಂದು 15ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ತಿಳಿಸಿದರು.

    ಇಲ್ಲಿನ ಸಾಯಿ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ವಹಿಸಲಿದ್ದಾರೆ ಎಂದು ತಿಳಿಸಿದರು.

    ಡಿ.21 ರಂದು ಬೆಳಗ್ಗೆ 8ಕ್ಕೆ ನಿವೃತ್ತ ಯೋಧ ಬಾಳಾಸಾಹೇಬ ಸಂಗ್ರೊಳ್ಳಿ ರಾಷ್ಟ್ರಧ್ವಜಾರೋಹರಣ ನೆರವೇರಿಸಲಿದ್ದಾರೆ. ಪರಿಷತ್ ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನೆರವೇರಿಸಲಿದ್ದು, ನಾಡ ಧ್ವಜವನ್ನು ಕಸಾಪ ಚಿಕ್ಕೋಡಿ ಘಟಕದ ಅಧ್ಯಕ್ಷ ಡಾ. ಸುರೇಶ ಉಕ್ಕಲಿ ನೆರವೇರಿಸಲಿದ್ದಾರೆ ಎಂದರು.

    ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿರುವ ಸಮ್ಮೇಳನ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನ ಸ್ವಾಮೀಜಿ ವಹಿಸಲಿದ್ದಾರೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ಸಮ್ಮೇಳ ಉದ್ಘಾಟಿಸಲಿದ್ದಾರೆ. ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸಲಿದ್ದು, ಸಚಿವೆ ಶಶಿಕಲಾ ಜೊಲ್ಲೆ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
    ಸಂಸದ ಅಣ್ಣಾಸಾಹೇಬ ಜೊಲ್ಲೆ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಿದ್ದು, ಸಂಸದ ಅನಂತಕುಮಾರ ಹೆಗಡೆ ಸಮ್ಮೇಳನ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದು, ಸಾಹಿತಿ ಚಂದ್ರಶೇಖರ ಅಕ್ಕಿ ಸೇರಿ ಜಿಲ್ಲೆಯ ವಿವಿಧ ಶಾಸಕರು, ಸಂಸದರು ಹಾಗೂ ವಿಪ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

    ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ: ಡಿ.21 ರಂದು ಬೆಳಗ್ಗೆ 9ಕ್ಕೆ ಹಮ್ಮಿಕೊಂಡಿರುವ ಸಮ್ಮೇಳನಾಧ್ಯಕ್ಷ ಅಲ್ಲಮಪ್ರಭು ಸ್ವಾಮೀಜಿ ಮೆರವಣಿಗೆಗೆ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಚಾಲನೆ ನೀಡಲಿದ್ದು, ನವದೆಹಲಿ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ರಿಂದ ವಿವಿಧ ಗೋಷ್ಠಿಗಳು ಜರುಗಲಿವೆ. 22 ರಂದು ಬೆಳಗ್ಗೆ 9ಕ್ಕೆ ಕವಿಗೋಷ್ಠಿ, ಮಧ್ಯಾಹ್ನ 2ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 4ಕ್ಕೆ ಸಾಧಕರ ಸನ್ಮಾನ, ಸಂಜೆ 5ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ಜಗದೀಶ ತಿಳಿಸಿದರು.
    ಸಂಪಾದನ ಸ್ವಾಮೀಜಿ, ಎಸ್.ಎಸ್.ಕವಲಾಪುರೆ, ಎನ್.ಎಸ್.ವಂಟಮುತ್ತೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಉಕ್ಕಲಿ, ಗೌರವ ಕಾರ್ಯದರ್ಶಿ ಸಚಿನ ಮೆಕ್ಕಳಕಿ, ನಾಗೇಶ ಮಾಳಿ, ಸಂಜು ಬಡಿಗೇರ, ಬಾಬು ಮಿರ್ಜೆ, ವಿಶ್ವನಾಥ ಕಾಮಗೌಡ, ನಾಗರಾಜ ಮೇದಾರ, ಸಿದ್ದಪ್ಪ ಡಂಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts