More

    ಶತಮಾನದ ಸುರಂಗ ಪುರುಷನ ಭಗೀರಥ ಸಾಧನೆ: 56 ವರ್ಷಗಳಲ್ಲಿ 1400 ಸುರಂಗ ಕೊರೆದ ಕುಂಞಂಬು ನಾಯರ್

    | ಪುರುಷೋತ್ತಮ ಭಟ್ ಬದಿಯಡ್ಕ

    ಕಾಸರಗೋಡು ಜಿಲ್ಲೆಯ ಗಡಿಭಾಗದಲ್ಲಿ ಜನಪ್ರಿಯವಾಗಿರುವ ಸುರಂಗ ರಚನೆಯಲ್ಲಿ ದೊಡ್ಡ ಹೆಸರು ಮಾಡಿದವರು ಕುಂಡಂಕುಳಿ ನೀರ್ಕಯದ ಸಿ.ಕುಂಞಂಬು ನಾಯರ್. 69 ವರ್ಷದ ಇವರು ಕಳೆದ 56 ವರ್ಷಗಳಲ್ಲಿ 1,400ಕ್ಕೂ ಹೆಚ್ಚು ಸುರಂಗಗಳನ್ನು ಕೊರೆದು ದಾಖಲೆ ನಿರ್ವಿುಸಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಕೃಷಿಗೆ, ಕುಡಿಯಲು ನೀರಿನ ಕೊರತೆಯಾದಾಗ ಸುರಂಗಗಳನ್ನು ಕೊರೆಯುವುದು ಸಾಮಾನ್ಯ. ಬೋಳುಗುಡ್ಡಕ್ಕೆ ಏಳು ಸುರಂಗಗಳನ್ನು ಕೊರೆದು ನೀರು ಪಡೆದು ಕೃಷಿ ಮಾಡಿದ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕರ ಸಾಧನೆಗೆ ಪದ್ಮಶ್ರೀ ಒಲಿದುಬಂದಿತ್ತು. ಅಂಥದ್ದೇ ಬೃಹತ್ ಸುರಂಗಗಳನ್ನು ಕೇರಳ, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಕೊರೆದವರು ಕುಂಞಂಬು.

    14ನೇ ವರ್ಷದಲ್ಲಿ ಆರಂಭ: ಕುಂಞಂಬು 14ನೇ ವಯಸ್ಸಿನಲ್ಲಿ ಸುರಂಗ ನಿರ್ವಣಕ್ಕೆ ಹಿರಿಯರೊಂದಿಗೆ ಸಹಾಯಕರಾಗಿ ಕೆಲಸ ಆರಂಭಿಸಿದರು. 16ನೇ ವಯಸ್ಸಿನಲ್ಲಿ ಮೊದಲ ಸುರಂಗ ನಿರ್ವಿುಸಿದರು. ಇದಕ್ಕೆ ಕಾರಣವಾಗಿದ್ದು ಗುರು ಕುಮಾರನ್ ನಾಯರ್. ಅವರು ಸುರಂಗ ಕೊರೆಯುತ್ತಿದ್ದಾಗ ಬೃಹತ್ ಬಂಡೆ ಎದುರಾಗಿತ್ತು, ಬಳಿಕ ಸುರಂಗ ಕೊರೆಯುವುದನ್ನು ನಿಲ್ಲಿಸಿದರು.

    ಆದರೆ, ಭೂಮಾಲೀಕರಿಂದ ಮುಂಗಡವಾಗಿ ಪಡೆದ ಹಣವನ್ನು ವಾಪಸ್ ನೀಡಲಾಗದೆ ಬಿಕ್ಕಟ್ಟಿಗೆ ಸಿಲುಕಿದ್ದರು. ಇದನ್ನು ನೋಡಿದ ಕುಂಞಂಬು ಸವಾಲಾಗಿ ಸ್ವೀಕರಿಸಿ ಆ ಸುರಂಗ ನಿರ್ವಣವನ್ನು ಪೂರ್ಣಗೊಳಿಸಿದರು. ಅಂದಿನಿಂದ ನೀರಿಗಾಗಿ ಕುಂಞಂಬು ಪಯಣ ನಿರಂತರವಾಗಿ ನಡೆಯುತ್ತಿದೆ.

    ನೀರಿಲ್ಲದೆ ಕೃಷಿ ಕಾರ್ಯ ಮಾಡಲಾಗದ ನೂರಾರು ಕುಟುಂಬಗಳಿಗೆ ‘ಭಗೀರಥ’ನಾಗಿದ್ದಾರೆ ಕುಂಞಂಬು. ಹಲವು ಬೋರ್​ವೆಲ್​ಗಳನ್ನು ಕೊರೆದರೂ ನೀರು ಸಿಗದೆ ಕಂಗಾಲಾದವರಿಗೆ ಆಸರೆಯಾಗಿ ಭೂಮಿಯಲ್ಲಿ ನೀರುಕ್ಕಿಸಿದ್ದಾರೆ. ಇದುವರೆಗೆ 1,400ಕ್ಕೂ ಅಧಿಕ ಸುರಂಗಗಳನ್ನು ನಿರ್ವಿುಸಿದ್ದು, ಅತಿ ಉದ್ದದ ಸುರಂಗವೆಂದರೆ 180 ಮೀಟರ್.

    ಸುರಂಗ ಕೊರೆಯುವ ವೇಳೆ ಹಲವು ಬಾರಿ ಜೀವಕ್ಕೆ ಅಪಾಯವಾಗುವ ಸನ್ನಿವೇಶಗಳು ಎದುರಾಗಿದ್ದೂ ಇದೆ. ಉಸಿರುಗಟ್ಟಿ ನೆಲಕ್ಕೆ ಕುಸಿದು ಬಿದ್ದ ಉದಾಹರಣೆಗಳಿವೆ. ಸಾಮಾನ್ಯವಾಗಿ ಅವರು ಸುರಂಗ ಕೊರೆಯುವ ವೇಳೆ ಉಸಿರಾಟಕ್ಕೆ ಗಾಳಿಯ ಕೊರತೆಯಾಗದಂತೆ ಫ್ಯಾನ್ ಮತ್ತು ಬೆಳಕಿಗೆ ಟಾರ್ಚ್ ಇಟ್ಟುಕೊಳ್ಳುತ್ತಾರೆ.

    ಬೀದರ್ ಭೂಕಾಲುವೆ ಅಭಿವೃದ್ಧಿ: ಆರು ಶತಮಾನಗಳ ಹಿಂದೆ ಬಹಮನಿ ಸುಲ್ತಾನರ ಕಾಲದಲ್ಲಿ ಕರ್ನಾಟಕದ ಬೀದರ್​ನಲ್ಲಿ ನಿರ್ವಣವಾಗಿದ್ದ ಭೂಕಾಲುವೆಯ (ವಾಟರ್ ಕರೇಜ್) ನೆಲಮಟ್ಟ ಅಧ್ಯಯನಕ್ಕೆ ಜಿಲ್ಲಾಡಳಿತವು 2015ರಲ್ಲಿ ಕುಂಞಂಬು ಅವರನ್ನು ಕರೆದೊಯ್ದಿತ್ತು. ಅಂದಾಜು 35 ಬಾವಿಗಳಿಗೆ ಸಂಪರ್ಕ ಹೊಂದಿರುವ ಸುರಂಗ ಮಾರ್ಗವು ಇಂಗ್ಲಿಷಿನ ವೈ ಆಕಾರದಲ್ಲಿ ಸುಮಾರು 3.5 ಕಿ.ಮೀ. ಉದ್ದಕ್ಕೆ ವ್ಯಾಪಿಸಿದೆ. ಈ ಭೂಕಾಲುವೆ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿತ್ತು. ಗತವೈಭವ ಮರುಕಳಿಸುವ ಕರ್ನಾಟಕ ಸರ್ಕಾರದ ಪ್ರಯತ್ನಕ್ಕೆ ಕುಂಞಂಬು ಕೈಜೋಡಿಸಿದ್ದರು. ಜಲತಜ್ಞ ಶ್ರೀಪಡ್ರೆಯವರ ಮೂಲಕ ಮಾಹಿತಿ ಪಡೆದ ಪಾಲಕ್ಕಾಡ್​ನ ಚಿತ್ತೂರು ಕಾಲೇಜಿನ ಭೂಗೋಳಶಾಸ್ತ್ರ› ಅಧ್ಯಾಪಕ ಡಾ.ಗೋವಿಂದನ್ ಕುಟ್ಟಿಯವರು ಕುಂಞ್ಂಬು ಬಗ್ಗೆ ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಅಲ್ಲಿ ಕುಂಞ್ಂಬು 40 ಕಾರ್ವಿುಕರಿಗೆ ಸುರಂಗ ಕುರಿತು ತರಬೇತಿಯನ್ನೂ ನೀಡಿದ್ದರು. ಮಾಜಿ ರಾಷ್ಟ್ರಪತಿ ಡಾ.ಕೆ.ಅಬ್ದುಲ್ ಕಲಾಂ ಅವರೂ ಕುಂಞಂಬು ಸಾಧನೆಯನ್ನು ಕೊಂಡಾಡಿದ್ದರು.

    ಕುಂಞಂಬು ನಾಯರ್ ಅವರ ಸಾಧನೆಯನ್ನು ಹೊರಜಗತ್ತಿಗೆ ಮೊದಲು ತಿಳಿಸಿದವನು ನಾನು. ಆದರೆ ಅವರು ಯಾವತ್ತೂ ಪ್ರಚಾರ ಬಯಸಿದವರಲ್ಲ. ಸುರಂಗ ತೋಡುತ್ತಲೇ ಹೋದರು. ಇತ್ತೀಚೆಗೆ ಅವರ ಸಾಧನೆಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳೂ ಗುರುತಿಸಿವೆ. ಬೀದರ್​ಗೆ ತೆರಳಿ ಅಲ್ಲಿನ ಪುರಾತನ ಕರೇಜ್ ನೋಡಿ ಅದನ್ನು ಹೇಗೆ ದುರಸ್ತಿ ಮಾಡಬಹುದು ಎಂದು ತೋರಿಸಿಕೊಟ್ಟಾಗ ಅಲ್ಲಿನವರು ಕುಂಞಂಬು ಅವರನ್ನು ದೇವರಂತೆ ನೋಡಿದ್ದಾರೆ.

    | ಶ್ರೀಪಡ್ರೆ ಜಲತಜ್ಞ

    50 ಕಿ.ಮೀ. ಸುರಂಗ!: ಕುಂಞಂಬು ನಾಯರ್ ಇದುವರೆಗೆ ತೋಡಿದ ಸುರಂಗಗಳನ್ನು ಜೋಡಿಸುತ್ತ ಲೆಕ್ಕ ಹಾಕಿದರೆ 50 ಕಿಲೋಮೀಟರ್ ಉದ್ದಕ್ಕೆ ಬರಬಹುದು ಎನ್ನುತ್ತಾರೆ ಜಲತಜ್ಞ ಶ್ರೀಪಡ್ರೆ. ಅರ್ಧ ಶತಮಾನಗಳಿಗೂ ಅಧಿಕ ಕಾಲ ಸುರಂಗ ತೋಡುವುದನ್ನು ಪೂರ್ಣ ಪ್ರಮಾಣದಲ್ಲಿ ವೃತ್ತಿಯಾಗಿಯೇ ಸ್ವೀಕರಿಸಿದವರು ಕುಂಞಂಬು. ಅವರಷ್ಟು ಸುರಂಗ ಇದುವರೆಗೆ ಬೇರೆ ಯಾರೂ ತೋಡಿದವರು ಜಗತ್ತಿನಲ್ಲೇ ಇರಲಿಕ್ಕಿಲ್ಲ, ಮುಂದೆಯೂ ಈ ದಾಖಲೆಯನ್ನು ಯಾರೂ ಮುರಿಯುವವರು ಇರಲಿಕ್ಕಿಲ್ಲ. ಗುಡ್ಡಗಳಿಗೆ ಮಾತ್ರವಲ್ಲ, ನೂರಾರು ಬಾವಿಯೊಳಗೆ ಸುರಂಗಗಳನ್ನು (ಇನ್​ವೆಲ್) ಕುಂಞಂಬು ತೋಡಿದ್ದಾರೆ. ಅವರೊಬ್ಬ ಅದ್ಭುತ ವ್ಯಕ್ತಿ ಎಂದು ಬಣ್ಣಿಸುತ್ತಾರೆ ಶ್ರೀಪಡ್ರೆ.

    ಹಿರಿಯ ನಾಗರಿಕರಿಗೊಂದು ಸಂತಸದ ಸಂಗತಿ; ಮತ್ತೊಮ್ಮೆ ಆದೇಶ ಹೊರಡಿಸಿತು ಸರ್ಕಾರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts