More

    14 ದಿನ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮುಂದುವರಿಯಲಿ

    ಕಾರವಾರ: ಮಹಾರಾಷ್ಟ್ರದಿಂದ ಬಂದವರಿಗೆ 14 ದಿನ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಯನ್ನು ಮುಂದುವರಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಸಂಬಂಧ ತಾಪಂ ಸಭೆಯಲ್ಲಿ ಚರ್ಚೆ ನಡೆಯಿತು.

    ಶುಕ್ರವಾರ ಆಯೋಜಿಸಿದ್ದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಸದಸ್ಯ ಮಾರುತಿ ನಾಯ್ಕ ವಿಷಯ ಪ್ರಸ್ತಾಪಿಸಿ, ಏಳು ದಿನದ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ಹೋದವರಿಗೆ ಕರೊನಾ ಸೋಂಕು ಇರುವುದು ಖಚಿತವಾದ ಉದಾಹರಣೆಗಳಿವೆ. ಅಲ್ಲದೆ, ಹಲವರ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಿಲ್ಲದ ಕಾರಣ ಹೋಂ ಕ್ವಾರಂಟೈನ್ ಕಷ್ಟ. ಹೊರಗಿನಿಂದ ಬಂದವರು ಅಥವಾ ಅವರ ಮನೆಯವರು ಹೊರಗಡೆ ಓಡಾಡುತ್ತಾರೆ ಎಂದು ದೂರಿದರು.

    ತಾಪಂ ಇಒ ಆನಂದಕುಮಾರ ಸರ್ಕಾರದ ಸ್ಟ್ಯಾಂಡರ್ಡ್ ಆಪರೇಟಿಂಗ್ ಸಿಸ್ಟ್ಂ ಆಗಾಗ ಬದಲಾಗುವುದರಿಂದ ಅದನ್ನು ನಾವು ಅನುಸರಿಸಬೇಕಿದೆ ಎಂದು ಸ್ಪಷ್ಟನೆ ನೀಡಿದರು.

    ರಸ್ತೆ ಕಾಮಗಾರಿ ಸ್ಥಗಿತ: ಹಳಗಾ-ಉಳಗಾ ರಸ್ತೆ ಕಳೆದ ವರ್ಷ ನೆರೆಯ ಸಂದರ್ಭದಲ್ಲಿ ಕುಸಿದಿದೆ. ಆದರೆ, ಇದುವರೆಗೂ ರಿಪೇರಿ ಮಾಡಿಲ್ಲ ಎಂದು ಅಧ್ಯಕ್ಷೆ ಪ್ರಮಿಳಾ ನಾಯ್ಕ ಆಕ್ಷೇಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ಪಿ.ಎನ್. ರಾಣೆ, ನಾವು ತಾತ್ಕಾಲಿಕವಾಗಿ ರಿಪೇರಿಗೆ ತೆರಳಿದ್ದೆವು. ಆದರೆ, ಅದಕ್ಕೆ ಸ್ಥಳೀಯರು ಅವಕಾಶ ನೀಡಲಿಲ್ಲ. ಶಾಶ್ವತ ಕಾಮಗಾರಿ ಮಾಡುವಂತೆ ಒತ್ತಾಯಿಸಿದರು. ಶಾಶ್ವತ ಕಾಮಗಾರಿಗೆ ಅನುದಾನ ಮಂಜೂರಾಗಬೇಕಿದೆ ಎಂದು ಸ್ಪಷ್ಟಪಡಿಸಿದರು.

    ಮಾಹಿತಿ ನೀಡಿ: ಗ್ರಾಮೀಣ ಭಾಗದಲ್ಲಿ ನಿರ್ವಿುತಿ ಕೇಂದ್ರ, ಕೆಆರ್​ಡಿಸಿಎಲ್ ನಡೆಸುವ ಕಾಮಗಾರಿಗಳ ಬಗ್ಗೆ ಸ್ಥಳೀಯ ತಾಪಂ ಅಥವಾ ಗ್ರಾಪಂಗೆ ಮಾಹಿತಿ ನೀಡುವುದಿಲ್ಲ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಕೊನೆಯ ಕ್ಷಣದಲ್ಲಿ ಕ್ರಿಯಾಯೋಜನೆಯನ್ನು ಬದಲಿಸಬೇಕಾಗಿ ಬರುತ್ತದೆ. ನೆರೆ ನಿರ್ವಹಣೆ ಯೋಜನೆಯ 2 ಲಕ್ಷದ ಕಾಮಗಾರಿಗೆ 50 ಸಾವಿರ ರೂ. ಖರ್ಚು ಮಾಡಿ ಮುಗಿಸಲಾಗುತ್ತದೆ. ಅತಿ ಅವಶ್ಯವಿರುವ ಶಾಲೆ, ಅಂಗನವಾಡಿಗಳನ್ನು ಈ ಬಾರಿ ನಿರ್ವಹಣೆ ಮಾಡುವ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

    ಗೋವಾ ವಿದ್ಯಾರ್ಥಿಗಳನ್ನು ಕರೆತರಲು ವಿರೋಧ: ಜೂನ್ 24ರಿಂದ ನಡೆಯುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಗೋವಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಉಳಗಾದಲ್ಲಿ ವ್ಯವಸ್ಥೆ ಮಾಡುವ ಪ್ರಸ್ತಾಪವಿದೆ. ಅವರ ವಾಸ್ತವ್ಯಕ್ಕೆ ಹಾಸ್ಟೆಲ್ ನೀಡಲು ಶಿಕ್ಷಣ ಇಲಾಖೆ ಬೇಡಿಕೆ ಸಲ್ಲಿಸಿದೆ. ಆದರೆ, ಗೋವಾದವರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲು ಸ್ಥಳೀಯರಿಂದ ವಿರೋಧವಿದೆ ಎಂದು ಬಿಸಿಎಂ ಅಧಿಕಾರಿ ಮನೋಜ ಸಭೆಗೆ ತಿಳಿಸಿದರು. ಗೋವಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗೋವಾದಲ್ಲೇ ಪರೀಕ್ಷ್ಷೆ ಕೇಂದ್ರ ತೆರೆಯುವ ಬಗ್ಗೆ ಮೊದಲು ನಿರ್ಣಯಿಸಲಾಗಿತ್ತು. ಆದರೆ, ಆ ಯೋಜನೆಯನ್ನು ಕೈಬಿಡಲಾಗಿದ್ದು, ಅವರಿಗೆ ಎಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಶಿಕ್ಷಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts