More

    ಬೇಕಾಬಿಟ್ಟಿ ದರ ವಿಧಿಸಿದರೆ ಆಟೋ ಸೀಜ್

    ಬೆಳಗಾವಿ: ಮಹಾನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳಲ್ಲಿ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ಆಟೋಗಳನ್ನು ತಕ್ಷಣ ಸೀಜ್ ಮಾಡಬೇಕು ಎಂದು ಪೊಲೀಸರಿಗೆ, ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಟೋ ಮೀಟರ್ ಅಳವಡಿಸಿದ ಬಳಿಕವಷ್ಟೇ ಬಾಡಿಗೆ ದರ ಪರಿಷ್ಕರಣೆ ಮಾಡಿ ಸೂಕ್ತ ದರ ನಿಗದಿ ಮಾಡಲಾಗುವುದು ಎಂದರು.

    ಆಟೋರಿಕ್ಷಾಗಳ ಪ್ರಸ್ತುತ ಬಾಡಿಗೆ ದರ 1.5 ಕಿ.ಮೀಗೆ 25 ರೂಪಾಯಿ ಇದೆ. ಆದರೆ ಕೆಲ ಆಟೋರಿಕ್ಷಾಗಳು ಬೇಕಾಬಿಟ್ಟಿ ದರ ಹೇಳಿ ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿವೆ. ಅಂತಹ ಆಟೋರಿಕ್ಷಾಗಳನ್ನು ಸೀಜ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದಿನನಿತ್ಯ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಆಟೋರಿಕ್ಷಾ ಚಾಲಕರು ಕೇವಲ 1.5 ಕಿಲೋ ಮೀಟರ್‌ಗೆ 150 ರಿಂದ 200 ರೂ. ತೆಗೆದುಕೊಳ್ಳುತ್ತಿದ್ದಾರೆ. ಪ್ರತಿ ಆಟೋರಿಕ್ಷಾಗಳು ಕೂಡಲೇ ಮೀಟರ್ ಅಳವಡಿಸಬೇಕು ಎಂದು ತಿಳಿಸಿದರು.

    ವಿವಿಧ ಊರುಗಳಿಂದ ನಗರಕ್ಕೆ ರಾತ್ರಿ ಸಮಯದಲ್ಲಿ ಬರುವ ಸಾರ್ವಜನಿಕರು ಆಟೋರಿಕ್ಷಾ ಬಾಡಿಗೆ ದರ ಕೇಳಿ ಬೇಸತ್ತು ಹೋಗಿದ್ದಾರೆ. ಈ ರೀತಿ ಸುಲಿಗೆ ಮಾಡುವುದು ಕಂಡುಬಂದಲ್ಲಿ, ಆಟೋ ಸೀಜ್‌ಮಾಡಿ, ಚಾಲಕರ ವಾಹನ ಚಾಲನಾ ಪರವಾನಗಿ ರದ್ದುಪಡಿಸಬೇಕು. ಬೇಕಾಬಿಟ್ಟಿ ಸಂಚರಿಸುತ್ತಿರುವ ಆಟೋ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

    ನಗರದಲ್ಲಿ ಸಂಚರಿಸುವ ಆಟೋರಿಕ್ಷಾ ಸಂಘಗಳ ಪದಾಧಿಕಾರಿಗಳು ಮೀಟರ್ ಅಳವಡಿಕೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ನೀಡಿದರೆ ಮಾತ್ರ ಪರಿಷ್ಕರಣೆ ದರ ನಿಗದಿ ಮಾಡಲಾಗುವುದು. ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆಟೋ ಚಾಲಕರಿಗೆ ಡಿಸಿ ಎಚ್ಚರಿಕೆ ನೀಡಿದರು. ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಸ್ನೇಹಾ ಪಿ.ವಿ, ರಸ್ತೆ ಸಾರಿಗೆ ಅಧಿಕಾರಿ ಎಸ್.ಬಿ ಮಗದುಮ್ಮ, ಆಟೋ ರಿಕ್ಷಾ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts