More

    1350 ಕೋಟಿ ರೂ. ವೆಚ್ಚದ ಗೋಂಧಿ ಹಳ್ಳ ಯೋಜನೆ ಸಿದ್ಧ

    ಚಿಕ್ಕಮಗಳೂರು: ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ಸೇರಿ ಗೋಂಧಿಯಿಂದ ನಾಲ್ಕು ಹಂತಗಳಲ್ಲಿ ಕೆರೆ ತುಂಬಿಸುವ 1350 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ದೇವಿಕೆರೆಯಿಂದ ಮೋಟಾರು ಪಂಪ್ ಮಾಡಿ ತುಂಬಿಸಿದ ತಾಲೂಕಿನ ಕಳಸಾಪುರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು. ಗೋಂಧಿ ಹಳ್ಳ ನಾಲ್ಕು ಹಂತದ ಯೋಜನೆಯಾಗಿದ್ದು ವಿಧಾನಸಭೆ ಅಧಿವೇಶನದ ನಂತರ ಮಂಜೂರಾತಿಗೆ ಸಂಪುಟಕ್ಕೆ ಬರಲಿದೆ. ಹಳೇಬೀಡು ಮತ್ತು ಬೆಳವಾಡಿ ಕೆರೆ ತುಂಬಿಸುವ ರಣಘಟ್ಟ ಯೋಜನೆಗೆ ಮೂರು ಹಂತಗಳಲ್ಲಿ ಪ್ರಯತ್ನ ನಡೆಸಿದ್ದು 125 ಕೋಟಿ ರೂ. ಯೋಜನೆಗೆ ಸಂಪುಟದ ಅನುಮೋದನೆಯಾಗಬೇಕಿದೆ ಎಂದರು.

    ದಾಸಹಳ್ಳಿಕೆರೆ ಮತ್ತು ಲಕ್ಯಾದ ಮಾದರಸನ ಕೆರೆ ತುಂಬಿಸುವ 28 ಕೋಟಿ ರೂ. ವೆಚ್ಚದ ಬೈರಾಪುರ ಪಿಕಪ್ ಯೋಜನೆಗೆ ಅನುಮೋದನೆ ದೊರೆತಿದ್ದು ಟೆಂಡರ್ ಹಂತದಲ್ಲಿದೆ. ಎರಡನೇ ಹಂತದ ಕರಗಡ ನೀರಾವರಿ ಯೋಜನೆಗೆ 9.5 ಕೋಟಿ ರೂ. ಮಂಜೂರಾತಿ ದೊರೆತು ಟೆಂಡರ್ ಹಂತವೂ ಮುಗಿದಿದ್ದು ಹಣಕಾಸು ಇಲಾಖೆ ಅನುಮೋದನೆ ನಂತರ ಒಡಂಬಡಿಕೆಯಾಗಿ ಕೆಲಸ ಆರಂಭವಾಗುತ್ತದೆ ಎಂದರು.

    ಕಳೆದ ವರ್ಷ ಮೋಟಾರು ಪಂಪ್ ಮಾಡಿ ಕಳಸಾಪುರ ಕೆರೆಗೆ ನೀರು ತುಂಬಿಸಲಾಗಿತ್ತು. ಈ ವರ್ಷ ಮುನ್ನೆಚ್ಚರಿಕೆ ವಹಿಸಿ 280 ಎಚ್​ಪಿ ಮೋಟಾರು ಅಳವಡಿಸಿ ನೀರು ಹರಿಸಿದ ಕಾರಣ ಕಳೆದ ವರ್ಷಕ್ಕಿಂತ ತಿಂಗಳ ಮುನ್ನವೇ ಕೆರೆ ತುಂಬಿ ಬಾಗಿನ ಸಮರ್ಪಿಸಿದ್ದೇನೆ. ಮೂರ್ನಾಲ್ಕು ಮಳೆಗಳು ಬಂದರೆ ಈಶ್ವರಹಳ್ಳಿಕೆರೆ ತುಂಬಿ ಬೆಳವಾಡಿ ಕೆರೆವರೆಗೂ ನೀರು ತಲುಪಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಭದ್ರಾ ಡ್ಯಾಂನಿಂದ ಬಯಲು ಪ್ರದೇಶಕ್ಕೆ ಕುಡಿಯುವ ನೀರು ಒದಗಿಸಲು ಬಹುಗ್ರಾಮ ನೀರು ಸರಬರಾಜು ಯೋಜನೆ ಕುರಿತಂತೆ ನಬಾರ್ಡ್​ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತರೆ ಎಲ್ಲ ಹಳ್ಳಿಗಳಿಗೆ ಶುದ್ಧ ನದಿ ನೀರು ಒದಗಿಸಲು ಕೇಂದ್ರ ಸರ್ಕಾರದ ಜಲಧಾರೆ ಯೋಜನೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

    ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಹಳೇಬೀಡು ಕೆರೆ ತುಂಬಿದ್ದು ಆ ಕೆರೆಯ ನೀರನ್ನು ಬೆಳವಾಡಿಕೆರೆಗೆ ಹರಿಸುವ ರಣಘಟ್ಟ ಯೋಜನೆಗೆ ಶೀಘ್ರದಲ್ಲಿ ಚಾಲನೆ ದೊರೆತರೆ ಆ ಭಾಗದ ಹತ್ತಾರು ಗ್ರಾಮಗಳಿಗೆ ಅನುಕೂಲವಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts