More

    13 ದಿನಗಳ ನಂತರ ಮೀನುಗಾರಿಕೆ ಪ್ರಾರಂಭ

    ಕಾರವಾರ: ಕಳೆದ 13 ದಿನಗಳಿಂದ ಬಂದಾಗಿದ್ದ ಮೀನುಗಾರಿಕೆ ಭಾನುವಾರದಿಂದ ಮರು ಪ್ರಾರಂಭವಾಗಿದೆ. ಟ್ಯಾಗೋರ್ ಕಡಲ ತೀರದಲ್ಲಿ ಮೀನುಗಾರರು ಏಂಡಿ ಬಲೆ ಹಾಕಿದ್ದಾರೆ. ಕೆಲವು ಬೋಟ್​ಗಳು ಕಡಲಿಗೆ ಇಳಿದಿವೆ.

    ಮೀನು ಮಾರುಕಟ್ಟೆಯ ಎದುರು ಭಾನುವಾರ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡುವ ಮೂಲಕ ಮೀನು ಮಾರಾಟ ಪ್ರಾರಂಭಿಸಲಾಯಿತು. ಮೀನು ಮಾರಾಟಗಾರ ಮಹಿಳೆಯರ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಧ್ವಜಾರೋಹಣ ಮಾಡಿದರು.

    ಬಿಜೆಪಿ ಜನಪ್ರತಿನಿಧಿಗಳ ನಡುವೆಯೇ ಗೊಂದಲ: ಸಾಗರ ಮಾಲಾ ಯೋಜನೆಯ ಕುರಿತು ಬಿಜೆಪಿ ಜನಪ್ರತಿನಿಧಿಗಳ ನಡುವೆಯೇ ಗೊಂದಲ ಇರುವುದು ಬಹಿರಂಗವಾಗಿದೆ. ಯೋಜನೆಗೆ ಹೈಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಜ.31 ರಂದು ಆಯೋಜಿಸಿದ್ದ ಮೀನುಗಾರರ ಸಭೆಯನ್ನು ರದ್ದು ಮಾಡಿರುವುದಾಗಿ ಶಾಸಕಿ ರೂಪಾಲಿ ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ, ಭಾನುವಾರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಮೀನುಗಾರರ ಸಭೆಯನ್ನು ರದ್ದು ಮಾಡಿಲ್ಲ. ಶಾಸಕಿ ನೀಡಿದ ಹೇಳಿಕೆಯ ಬಗ್ಗೆ ಮಾಹಿತಿ ಇಲ್ಲ ಎಂದಿದ್ದರು. ಯೋಜನೆಯಿಂದ ಮೀನುಗಾರರಿಗೆ ಹಾಗೂ ಕಡಲ ತೀರಕ್ಕೆ ಯಾವುದೇ ಹಾನಿ ಇಲ್ಲ. ಕಾಂಗ್ರೆಸ್ ಮುಖಂಡರು ತಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆಯನ್ನು ಸ್ವಾಗತಿಸಿ, ಈಗ ಅದನ್ನು ವಿರೋಧಿಸುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದರೆ, ಹೈಕೋರ್ಟ್ ಕಾಮಗಾರಿಗೆ ತಡೆ ನೀಡಿದೆ. ಕೋರ್ಟ್ ಆದೇಶಕ್ಕೆ ಗೌರವ ನೀಡುತ್ತೇವೆ. ಕೋರ್ಟ್​ನಲ್ಲಿ ತೀರ್ವನವಾಗುವವರೆಗೂ ಸರ್ಕಾರದ ಯಾವುದೇ ನಿಲುವು ಪ್ರಕಟಿಸುವುದಿಲ್ಲ ಎಂದರು. ಕೆಲ ಹೊತ್ತಿನಲ್ಲಿ ಸಚಿವರ ಕಚೇರಿಯಿಂದ ಪತ್ರಿಕಾ ಹೇಳಿಕೆಯೊಂದನ್ನು ಕಳಿಸಿ ಸಭೆ ರದ್ದು ಮಾಡಲಾಗಿದೆ ಎಂದು ತಿಳಿಸಲಾಯಿತು. ಉಸ್ತುವಾರಿ ಸಚಿವರ ಗಮನಕ್ಕೆ ತರದೇ ಶಾಸಕರೇ ಸಭೆಯನ್ನು ರದ್ದು ಮಾಡಿಸಿದರೇ ಎಂಬ ಅನುಮಾನ ಮೂಡಿದೆ.

    ಮನವೊಲಿಸಿ ಯೋಜನೆ ಅನುಷ್ಠಾನ ಮಾಡಲಿ: ಸಾಗರಮಾಲಾ ವಿರೋಧಿಸಿ ನಡೆದ ಹೋರಾಟ ಹತ್ತಿಕ್ಕುವ ಬದಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಸಾಗರಮಾಲಾ ಯೋಜನೆ ಕಾಂಗ್ರೆಸ್ ಅವಧಿಯಲ್ಲಿ ಶಂಕು ಸ್ಥಾಪನೆ ಆಗಿದ್ದರೂ ಅದರ ಕುರಿತು ರಾಜ್ಯ ಅಥವಾ ಕೇಂದ್ರದ ಅಧಿಕಾರಿಗಳು ನನ್ನೊಂದಿಗೆ ಚರ್ಚೆ ನಡೆಸಿಲ್ಲ. ಅದರ ಕುರಿತು ನನಗೆ ಮಾಹಿತಿಯಿಲ್ಲ. ಯೋಜನೆಯ ಕುರಿತಂತೆ ಸಂಬಂಧಿಸಿದ ಸಚಿವರು ಜಿಲ್ಲೆಗೆ ಆಗಮಿಸಿ ಜನರ ಕಷ್ಟನಷ್ಟಗಳನ್ನು ಕೇಳಿ, ಅವರಿಗೆ ಸ್ಪಂದಿಸಿ, ಅವರ ಮನವೊಲಿಸಿ ಅನುಷ್ಠಾನ ಮಾಡಬೇಕು. | ಆರ್.ವಿ. ದೇಶಪಾಂಡೆ ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts