More

    ವಿಜಯ್ ಹಜಾರೆ ಟ್ರೋಫಿ ; ಕರ್ನಾಟಕ-ಮುಂಬೈ ಹಣಾಹಣಿ

    ತಿರುವನಂತಪುರಂ: ತಮಿಳುನಾಡು ಎದುರು ಹೀನಾಯ ಸೋಲನುಭವಿಸಿರುವ ಕರ್ನಾಟಕ ಹಾಗೂ ಹಾಲಿ ಚಾಂಪಿಯನ್ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಎದುರಾಗಲಿವೆ. ಉಭಯ ತಂಡಗಳ ಪಾಲಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿಯಂತಿದೆ. ಈ ಹಣಾಹಣಿಯಲ್ಲಿ ಗೆದ್ದ ತಂಡಕ್ಕಷ್ಟೇ ಎಲೈಟ್ ಬಿ ಗುಂಪಿನಿಂದ ಎರಡನೇ ತಂಡವಾಗಿ ನಾಕೌಟ್ ಹಂತಕ್ಕೇರುವ ಅವಕಾಶವಿದೆ. ಮೊದಲ ಪಂದ್ಯದಲ್ಲಿ ಪುದುಚೇರಿ ಎದುರು ಭರ್ಜರಿ ಜಯ ದಾಖಲಿಸಿದ್ದ ಮನೀಷ್ ಪಾಂಡೆ ಬಳಗ ಗುರುವಾರ ನಡೆದ ಎರಡನೇ ಹಣಾಹಣಿಯಲ್ಲಿ ತಮಿಳುನಾಡು ಎದುರು ಹೀನಾಯವಾಗಿ ಸೋಲುಕಂಡಿತ್ತು.

    * ಪುಟಿದೇಳಬೇಕಿದೆ ಬ್ಯಾಟರ್‌ಗಳು
    ಕರ್ನಾಟಕ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳ ಪಡೆಯನ್ನೇ ಹೊಂದಿದ್ದರೂ ತಮಿಳುನಾಡು ಎದುರು ಮನೀಷ್ ಪಾಂಡೆ ಹೊರತುಪಡಿಸಿ ಇತರ ಬ್ಯಾಟರ್‌ಗಳು ನಿರಾಸೆ ಕಂಡಿದ್ದರು. ಅನುಭವಿ ಕರುಣ್ ನಾಯರ್ ಲಯಕ್ಕೆ ಮರಳಬೇಕಿದೆ. ಕಳೆದ ತಿಂಗಳು ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಅಭಿನವ್ ಮನೋಹರ್‌ಗೆ ಏಕದಿನ ಟೂರ್ನಿಯಲ್ಲ್ಲಿಲೂ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅಗ್ರಕ್ರಮಾಂಕ ಬ್ಯಾಟರ್‌ಗಳಾದ ಆರ್. ಸಮರ್ಥ್, ರೋಹನ್ ಕದಂ ಹಾಗೂ ಮೂರನೇ ಕ್ರಮಾಂಕದಲ್ಲಿ ಕೆವಿ ಸಿದ್ದಾರ್ಥ್ ಆರಂಭಿಕ ಹಂತದಲ್ಲಿ ರನ್‌ಗಳಿಸಬೇಕಿದೆ. ಮನೀಷ್ ಪಾಂಡೆ ಉತ್ತಮ ಲಯದಲ್ಲಿರುವುದು ತಂಡದ ವಿಶ್ವಾಸ ಹೆಚ್ಚಿಸಿದ್ದರೂ ಇತರ ಬ್ಯಾಟರ್‌ಗಳಿಂದ ಅವರಿಗೆ ಸೂಕ್ತ ಸಾಥ್ ಬೇಕಿದೆ. ಸ್ಪಿನ್ನರ್‌ಗಳಾದ ಜೆ.ಸುಚಿತ್ ಹಾಗೂ ಕೆಸಿ ಕಾರ್ಯಪ್ಪ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ವೇಗಿಗಳಾದ ವಿ.ಕೌಶಿಕ್, ವಿದ್ಯಾಧರ್ ಪಾಟೀಲ್ ಹಾಗೂ ಎಂ.ವೆಂಕಟೇಶ್ ತಂಡಕ್ಕೆ ಆಸರೆಯಾಗಿದೆ. ಮೈಸೂರಿನ ಎಂ.ವೆಂಕಟೇಶ್ ಹಾಗೂ ವಿದ್ಯಾಧರ್ ಪಾಟೀಲ್‌ಗೆ ಮೊದಲ ಏಕದಿನ ಟೂರ್ನಿ ಇದಾಗಿದೆ. ವೆಂಕಟೇಶ್ ವಿಕೆಟ್ ಕಬಳಿಸಲು ವಿಫಲರಾದರೂ ಉತ್ತಮ ದಾಳಿಯಿಂದ ಗಮನಸೆಳೆಯುತ್ತಿದ್ದಾರೆ.

    * ಮುಂಬೈಗೂ ನಿರ್ಣಾಯಕ
    ಹಾಲಿ ಚಾಂಪಿಯನ್ ಮುಂಬೈ ತಂಡ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡಕ್ಕೆ ಶರಣಾಗಿತ್ತು. ಕಳೆದ ಪಂದ್ಯದಲ್ಲಿ ವಿಜೆಡಿ ನಿಯಮದನ್ವಯ ಬರೋಡ ಎದುರು ಗೆಲುವು ದಾಖಲಿಸಿರುವ ಮುಂಬೈ ತಂಡ ಸ್ಟಾರ್ ಆಟಗಾರರನ್ನು ಹೊಂದಿದ್ದರೂ ನಿಸ್ತೇಜ ನಿರ್ವಹಣೆ ಕಾಡುತ್ತಿದೆ. ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶಮ್ಸ್ ಮುಲಾನಿ, ಶಿವಂ ದುಬೆ ಒಳಗೊಂಡ ಬ್ಯಾಟಿಂಗ್ ಕರ್ನಾಟಕ ಯುವ ವೇಗಿಗಳಿಗೆ ಸವಾಲಾಗಿದೆ. ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆರಂಥ ಅನುಭವಿ ವೇಗಿಗಳನ್ನು ಹೊಂದಿದೆ.

    ಪಂದ್ಯ ಆರಂಭ: ಬೆಳಗ್ಗೆ 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts