More

    ಸ್ವಚ್ಛತೆಗೆ 12 ಗಂಟೆ ಮೀಸಲು, ಯುವಜನರಿಂದ ಸ್ವಯಂಪ್ರೇರಣೆಯ ಶುಚಿತ್ವದ ಕೆಲಸ

    ಉಳ್ಳಾಲ: ಹಲವಾರು ಪ್ರಯತ್ನಗಳ ಮಧ್ಯೆ ಒಂದೆಡೆ ಸ್ವಚ್ಛತಾ ಜಾಗೃತಿ ಮೂಡುತ್ತಿದ್ದರೂ ಇನ್ನೊಂದೆಡೆ ತ್ಯಾಜ್ಯ ರಾಶಿ ಬೀಳುತ್ತಿರುವುದು ಎಗ್ಗಿಲ್ಲದಂತೆ ಸಾಗುತ್ತಿದೆ. ಅದರಲ್ಲೂ ನೇತ್ರಾವತಿ ನದಿ ತಟದಲ್ಲಂತೂ ತ್ಯಾಜ್ಯ ಎಸೆಯುವ ಕಿಡಿಗೇಡಿಗಳ ಅಟ್ಟಹಾಸ ಮಿತಿಮೀರುತ್ತಿದ್ದು, ಇದನ್ನು ತಡೆಗಟ್ಟಲು ಯುವಕರ ಪಡೆ ಪಣ ತೊಟ್ಟಿದ್ದು ದಿನದ 12 ಗಂಟೆ ಸ್ವಚ್ಛತೆಗೆಂದೇ ಮೀಸಲಿಟ್ಟಿದೆ.

    ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯಿತಿ, ಸೋಮೇಶ್ವರ ಪುರಸಭೆ ಸಹಿತ ಕೆಲವು ಗ್ರಾಮ ಪಂಚಾಯಿತಿಗಳೂ ಸ್ವಚ್ಛತೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಮನೆ ಬಾಗಿಲಿಗೇ ಬರುವ ವಾಹನ, ಕಾಲಬುಡಕ್ಕೇ ಬಂದು ಕಸ ಕೊಂಡೊಯ್ಯುವ ಕಾರ್ಮಿಕರನ್ನು ನೇಮಿಸಲಾಗಿದೆ. ಇಷ್ಟಾಗಿಯೂ ಈ ಭಾಗದಲ್ಲಿ ತ್ಯಾಜ್ಯ ರಾಶಿ ಬೀಳುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಜನ ಎಲ್ಲೆಂಲ್ಲಿಂದಲೋ ವಾಹನಗಳಲ್ಲಿ ತ್ಯಾಜ್ಯ ತಂದು ರಸ್ತೆ ಬದಿ ಎಸೆದು ಹೋಗುತ್ತಿದ್ದಾರೆ.

    ನೇತ್ರಾವತಿ ತಟಪ್ರದೇಶ ಆಡಂಕುದ್ರು ಪ್ರದೇಶದಲ್ಲಿ ಕೆಲವು ಮನೆ, ಹೋಟೆಲ್, ಮಾಂಸದಂಗಡಿ, ಕಾರ್ಯಕ್ರಮಗಳ ಅಳಿದುಳಿದ ತ್ಯಾಜ್ಯ ಮಾತ್ರವಲ್ಲದೆ ಇತರ ತ್ಯಾಜ್ಯಕ್ಕೆ ಮುಕ್ತಿಯಿಲ್ಲ. ವಾಹನದಿಂದಲೇ ಎಸೆಯಲ್ಪಡುವ ತ್ಯಾಜ್ಯ ಒಂದೋ ರಸ್ತೆ ಬದಿ ಬೀಳುತ್ತವೆ, ಇಲ್ಲವೇ ನೇರ ನದಿ ಸೇರುತ್ತದೆ. ಹೀಗೆ ನದಿ ಸೇರಿದ ತ್ಯಾಜ್ಯ ತೋಟಬೆಂಗ್ರೆಯಲ್ಲಿ ರಾಶಿ ಬೀಳುತ್ತಿವೆ. ಇಲ್ಲಿ ನೀರಿನ ಬಣ್ಣವೂ ಬದಲಾಗುತ್ತಿದೆ. ಪರಿಸರದಲ್ಲಿ ದುರ್ನಾತ ಹರಡಿ ಪ್ರಾಣಿ, ಪಕ್ಷಿಗಳು, ಜಲಚರಗಳಿಗೆ ಆಪತ್ತು ತಂದೊಡ್ಡುತ್ತಿದೆ.

    ನೇತ್ರಾವತಿ ತಟದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಸಿರು ದಳ ಮತ್ತು ಆ್ಯಂಟಿ ಪೊಲ್ಯೂಶನ್ ಡ್ರೈ ಫೌಂಡೇಶನ್(ಎಪಿಡಿ) ಸಂಸ್ಥೆ ಮುಂದೆ ಬಂದಿದೆ. ಸಾರ್ವಜನಿಕರು, ವಿದ್ಯಾರ್ಥಿ ಹಾಗೂ ವಿವಿಧ ಸಂಘಟನೆಗಳು, ಪರಿಸರ ಪ್ರೇಮಿಗಳ ಸಹಕಾರದಲ್ಲಿ ಆರು ದಿನ ನೇತ್ರಾವತಿ ತಟದಲ್ಲೇ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಯಾವ ಸಮಯದಲ್ಲಿ ತ್ಯಾಜ್ಯ ಎಸೆಯಲಾಗುತ್ತದೆ ಎಂಬ ಬಗ್ಗೆ ಎಪಿಡಿ ಸಂಸ್ಥೆಯ ವಾಣಿಶ್ರೀ ಮತ್ತು ನಾಗರಾಜ್ ಕೆಲವು ದಿನ ನೇತ್ರಾವತಿ ತಟದಲ್ಲಿ ಬೆಳಗ್ಗೆಯಿಂದಲೇ ನಿಂತು ವೀಕ್ಷಿಸಿದ್ದು, ಬೆಳಗ್ಗೆಯೇ ತ್ಯಾಜ್ಯ ಬಂದು ಬೀಳುವುದನ್ನು ಖಚಿತಪಡಿಸಿಕೊಂಡಿದ್ದಾರೆ.

    ಇದನ್ನು ತಡೆಯುವ ನಿಟ್ಟಿನಲ್ಲಿ ಮೂರು ದಿನಗಳಿಂದ ಬೆಳಗ್ಗೆಯಿಂದಲೇ ತ್ಯಾಜ್ಯ ರಾಶಿ ಬೀಳುವ ಸ್ಥಳದಲ್ಲೇ ಜಾಗೃತಿ ಮೂಡಿಸಲಾಗುತ್ತಿದೆ. ಸೋಮವಾರ ನದಿ ತಟದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಉಳ್ಳಾಲ ನಗರಸಭೆ ಸ್ವಚ್ಛ ಮಾಡಿದೆ. ಜಾಗೃತಿಯ ಪ್ರಭಾವ ಮುಂದಿನ ವಾರ ಅರಿವಿಗೆ ಬರಲಿದೆ.

    10 ದಿನಗಳ ಹಿಂದೆ ನೇತ್ರಾವತಿ ತಟದಲ್ಲಿ ನಿಂತು ತ್ಯಾಜ್ಯ ಎಸೆಯುವ ಸಮಯ ಮತ್ತು ವಾಹನಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ತ್ಯಾಜ್ಯ ಎಸೆಯದಂತೆ ಮನವಿ ಮಾಡಿದರೂ ಒಂದಷ್ಟು ದೂರ ಹೋಗಿ ಎಸೆಯುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಆರು ದಿನಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ವಾಣಿಶ್ರೀ
    ಎಪಿಡಿ ಕಾರ್ಯನಿರ್ವಹಣಾ ವಿಭಾಗದ ಕಾರ್ಯಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts