More

    ಜಾರಕಿಹೊಳಿ ಸಹೋದರರಿಗೆ ಧರ್ಮ ಸಂಕಟ: ಲಖನ್ ಹಿಂದೆ ಸರಿಸಲು ಕೈ-ಕಮಲ ವರಿಷ್ಠರ ಒತ್ತಡ; ಕುಟುಂಬ ಗೌರವಕ್ಕಾಗಿ ಗೆಲ್ಲಿಸುವುದು ಅನಿವಾರ್ಯ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಗೆ ಲಖನ್ ಜಾರಕಿಹೊಳಿ ಪಕ್ಷೇತರನಾಗಿ ರಣಾಂಗಣಕ್ಕೆ ಇಳಿದಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಈ ಚುನಾವಣೆಯಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸಬೇಕಿದೆ. ಅತ್ತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ ಜಾರಕಿಹೊಳಿಗೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಹೊರಿಸಲಾಗಿದೆ. ಮತ್ತೊಂದೆಡೆ, ಪಕ್ಷೇತರನಾಗಿ ಸ್ಪರ್ಧಿಸಿರುವ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಕುಟುಂಬದ ಗೌರವಕ್ಕಾದರೂ ಗೆಲ್ಲಿಸಬೇಕಾದ ಅನಿವಾರ್ಯ ಸ್ಥಿತಿ ಮೂವರು ಸಹೋದರರ ಅಂತರಾಳದೊಳಗಿದೆ. ಒಂದು ವೇಳೆ ಲಖನ್ ಸೋತರೆ ಭವಿಷ್ಯದ ರಾಜಕೀಯದಲ್ಲಿ ಸಮಸ್ಯೆ ಎದುರಾಗುವ ಆತಂಕವೂ ಕಾಡುತ್ತಿದೆ.

    ನ. 23ರಂದು ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸ್ಥಳೀಯ ಸಂಸ್ಥೆಗಳ 4 ಸಾವಿರಕ್ಕೂ ಅಧಿಕ ಪ್ರತಿನಿಧಿಗಳನ್ನು ಕರೆತಂದು ಜನಶಕ್ತಿ ಪ್ರದರ್ಶಿಸಿದ್ದಾರೆ. ಲಖನ್ ಪಕ್ಷೇತರನಾಗಿ ಸ್ಪರ್ಧಿಸುತ್ತಿರುವುದರಿಂದ ಮತ ವಿಭಜನೆಯಾಗಿ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬ ಆತಂಕ ಕಾಂಗ್ರೆಸ್ ಹಾಗೂ ಬಿಜೆಪಿ ವರಿಷ್ಠರನ್ನು ಕಾಡುತ್ತಿದೆ. ಹೀಗಾಗಿ ಲಖನ್ ಅವರನ್ನು ಕಣದಿಂದ ಹಿಂದೆ ಸರಿಸುವಂತೆ ಜಾರಕಿಹೊಳಿ ಸಹೋದರರ ಮೇಲೆ ಎರಡೂ ಪಕ್ಷಗಳು ಒತ್ತಡ ಹಾಕಿದೆ.

    ಬುಧವಾರದಿಂದ ಎಂಎಲ್​ಸಿ ಚುನಾವಣೆ ಪ್ರಚಾರ ಆರಂಭಿಸಲಾಗಿದೆ. ಶಿಕಾರಿಪುರ, ಶಿರಾಳಕೊಪ್ಪ ಸೇರಿ 3-4 ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ವಿಧಾನಪರಿಷತ್ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ 15 ಸ್ಥಾನ ಗೆಲ್ಲುವುದು ನಿಶ್ಚಿತ.

    | ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

    ವಿಧಾನ ಪರಿಷತ್ ಚುನಾವಣೆ ಯಲ್ಲಿ ಸ್ಪರ್ಧಿಸಲು ನಾನು ಯಾವುದೇ ಪಕ್ಷದಿಂದ ಟಿಕೆಟ್ ಕೇಳಿಲ್ಲ. ಆದರೆ, ಸ್ಥಳೀಯ ಸಂಸ್ಥೆಯ ಸದಸ್ಯರು, ನಮ್ಮ ಕುಟುಂಬದ ಅಭಿಮಾನಿಗಳು, ಬೆಂಬಲಿಗರ ಒತ್ತಾಯಕ್ಕಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ, ಯಾರದೇ ಒತ್ತಡಕ್ಕೂ ನಾಮಪತ್ರ ವಾಪಸ್ ಪಡೆದುಕೊಳ್ಳುವುದಿಲ್ಲ.

    | ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ

    ಮೇಲ್ಮನೆಯಲ್ಲಿ ಬಿಜೆಪಿ ಬಹುಮತಕ್ಕೆ 12 ಸೀಟು ಕೊರತೆ ಇದೆ. ಈ ಚುನಾವಣೆಯಲ್ಲಿ ಬಹುಮತ ಪಡೆಯುತ್ತೇವೆ. ಜೆಡಿಎಸ್​ನಿಂದ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಉಳಿದ ಕಡೆ ಬೆಂಬಲ ಪಡೆಯುವಂತೆ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾಗಂತ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

    | ರವಿಕುಮಾರ್ ಬಿಜೆಪಿ ರಾಜ್ಯ ಪ್ರ. ಕಾರ್ಯದರ್ಶಿ

    ಕಾಂಗ್ರೆಸ್ ನಿರಾಳ

    ಮೈಸೂರು-ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ದ್ವಿಸದಸ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರ ನಾಮಪತ್ರ ಪುರಸ್ಕೃತವಾಗಿದೆ. ಇದರೊಂದಿಗೆ ಎರಡು ದಿನಗಳಿಂದ ಉಂಟಾಗಿದ್ದ ನಾಮಪತ್ರ ಗೊಂದಲಕ್ಕೆ ತೆರೆಬಿದ್ದಿದ್ದು, ಕೈ ಅಭ್ಯರ್ಥಿ ನಿಟ್ಟುಸಿರು ಬಿಟ್ಟಿದ್ದರೆ, ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ನಿರಾಳರಾದರು. ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ದೋಷವಿದೆ ಎಂದು ಬಿಜೆಪಿ ಅಭ್ಯರ್ಥಿ ಆರ್.ರಘು ಆಕ್ಷೇಪಣೆ ಸಲ್ಲಿಸಿದ್ದರು. ಇದು ಉಭಯ ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿತ್ತು. ಬುಧವಾರವೇ ಜೆಡಿಎಸ್ ಅಭ್ಯರ್ಥಿ ಪೂರಕ ದಾಖಲೆಗಳೊಂದಿಗೆ ಮಾಹಿತಿ ಸಲ್ಲಿಸಿದ್ದರು. ಅದನ್ನು ಪರಿಶೀಲನೆ ಮಾಡಿದ ಚುನಾವಣಾಧಿಕಾರಿ ಅವರ ನಾಮಪತ್ರವನ್ನು ಸ್ವೀಕೃತಗೊಳಿಸಿದ್ದರು. ಪೂರಕ ದಾಖಲೆ ಸಲ್ಲಿಸಲು ಕಾಂಗ್ರೆಸ್ ಅಭ್ಯರ್ಥಿ ಸಮಯಾವಕಾಶ ಕೋರಿದ್ದರು.

    ಪ್ರತಿಪಕ್ಷ ನಾಯಕ ಯಾರಾಗ್ತಾರೆ?

    ಬೆಂಗಳೂರು: ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರಿಗೆ ಮರು ಸ್ಪರ್ಧೆಗೆ ಕಾಂಗ್ರೆಸ್ ಅವಕಾಶ ನಿರಾಕರಿಸಿರುವುದರಿಂದ ಹೊಸ ವಿರೋಧ ಪಕ್ಷದ ನಾಯಕನ ಹುಡುಕಾಟದಲ್ಲಿ ಪಕ್ಷವಿದೆ. ಡಿ.13ರಿಂದ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಎಸ್.ಆರ್.ಪಾಟೀಲ್ ತಮ್ಮ ಜವಾಬ್ದಾರಿ ನಿಭಾಯಿಸುವರು. ಜನವರಿಯಲ್ಲಿ ನಡೆಯುವ ಜಂಟಿ ಅಧಿವೇಶನದ ವೇಳೆಗೆ ಹೊಸ ಪ್ರತಿಪಕ್ಷನಾಯಕನ ಆಯ್ಕೆ ಆಗಬೇಕಾಗುತ್ತದೆ. ಪ್ರಸ್ತುತ ಕಾಂಗ್ರೆಸ್ ಬತ್ತಳಿಕೆಯಲ್ಲಿ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೆಸರಿದೆ. ಹೈಕಮಾಂಡ್ ಸಂಪರ್ಕ, ದೆಹಲಿ ನಾಯಕರ ಒಡನಾಟ ಅವರಿಗೆ ಅನುಕೂಲವಾಗಬಹುದೆಂಬ ಮಾತಿದೆ. ಸದ್ಯಕ್ಕಂತೂ ಯಾವುದೇ ಚರ್ಚೆಯಾಗಿಲ್ಲ, ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಲಿ ನಂತರ ನಿರ್ಧಾರವಾಗಲಿದೆ ಎಂದು ಪಕ್ಷದ ಹಿರಿಯ ನಾಯಕರು ವಿಜಯವಾಣಿಗೆ ತಿಳಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಕೆ.ಬಿ.ಕೊಂಡಯ್ಯ ಪುನರಾಯ್ಕೆಯಾದರೆ ಅವರೂ ಪ್ರಬಲ ಆಕಾಂಕ್ಷಿಗಳಾಗಲಿದ್ದಾರೆ. ಜತೆಗೆ ಆರ್.ಬಿ.ತಿಮ್ಮಾಪೂರ ಹೆಸರೂ ರೇಸ್​ನಲ್ಲಿದೆ. ಜೆಡಿಎಸ್​ಗೆ ಹತ್ತಿರವಾಗುತ್ತಿರುವ ಸಿ.ಎಂ.ಇಬ್ರಾಹಿಂ ಉಳಿಸಿಕೊಳ್ಳಲು ಅವರಿಗೇ ಪ್ರತಿಪಕ್ಷ ನಾಯಕ ಸ್ಥಾನ ಕೊಡಿ ಎಂಬ ಬೇಡಿಕೆ ಸಹ ಪಕ್ಷದ ಮುಂದಿದೆ. ಬಿ.ಕೆ.ಹರಿಪ್ರಸಾದ್​ಗೆ ಅವಕಾಶ ನೀಡುವ ವಿಷಯದಲ್ಲಿ ಪಕ್ಷದಲ್ಲಿ ಒಮ್ಮತವಿಲ್ಲ, ಒಂದು ಬಣ ಪೂರ್ಣಪ್ರಮಾಣದಲ್ಲಿ ವಿರೋಧಿಸಲಿದೆ ಎಂಬ ಮಾತುಗಳು ಕೇಳಿಬಂದಿದೆ.

    ಐಪಿಎಸ್​ ಆಫೀಸರ್​ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್​ಎಸ್​ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts