More

    ಅರಳು ಹುರಿದಂತೆ ಇಂಗ್ಲಿಷ್ ಪದಗಳ ಉಲ್ಟಾ ಸ್ಪೆಲ್ಲಿಂಗ್ ಹೇಳುವುದರಲ್ಲಿ 11ರ ಪೋರ!

    ಶ್ರೀಧರ ಅಣಲಗಾರ ಯಲ್ಲಾಪುರ

    ಈತ 11 ವರ್ಷದ ಬಾಲಕ. ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಹೇಳುವುದರಲ್ಲಿ ಪರಿಣತ. ಇದರಲ್ಲೇನು ವಿಶೇಷ ಎಂದಿರಾ? ಅರಳು ಹುರಿದಂತೆ ಪಟಪಟನೆ ಈತ ಹೇಳುವ ಸ್ಪೆಲ್ಲಿಂಗ್ ಶೈಲಿ ಉಲ್ಟಾ. ಅಂದರೆ, ಕೊನೆಯ ಅಕ್ಷರದಿಂದ ಆರಂಭಿಸಿ ಮೊದಲನೇ ಅಕ್ಷರದವರೆಗೆ ಹೇಳುವುದು. ಶಾರದಾ ಗಲ್ಲಿಯ ಅಬ್ದುಲ್ ಮಥೀನ್ ಎಂಬ 11 ವರ್ಷದ ಬಾಲಕ ಇಂತಹ ವಿಶಿಷ್ಟ ಪ್ರತಿಭೆ ಬೆಳೆಸಿಕೊಂಡಿದ್ದಾನೆ.

    ಇಂಗ್ಲಿಷ್​ನ ಯಾವುದೇ ಪದ ಹೇಳಿದರೂ ಥಟ್ಟನೆ ಅದರ ಸ್ಪೆಲ್ಲಿಂಗ್ ಅನ್ನು ಉಲ್ಟಾ ಹೇಳುತ್ತಾನೆ. ಪಟ್ಟಣದ ಮದರ್ ಥೆರೆಸಾ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು, ಒಂದು ನಿಮಿಷಕ್ಕೆ 40ರಿಂದ 50 ಶಬ್ದಗಳ ಸ್ಪೆಲ್ಲಿಂಗ್ ಅನ್ನು ಉಲ್ಟಾ ಹೇಳುವ ಸಾಮರ್ಥ್ಯ ಹೊಂದಿದ್ದಾನೆ. ಎಷ್ಟೇ ದೊಡ್ಡ ಶಬ್ದವಾದರೂ ತಕ್ಷಣವೇ ಸ್ಪೆಲ್ಲಿಂಗ್ ಉಲ್ಟಾ ಹೇಳುವ ಕಲೆ ಈತನಿಗೆ ಕರಗತವಾಗಿದೆ. ಓದಲು – ಬರೆಯಲು ಅರಿತಾಗಿನಿಂದಲೂ ಈ ಪ್ರತಿಭೆ ಇವನಲ್ಲಿತ್ತು. ಆದರೆ, ಪಾಲಕರಿಗೂ ಇದು ಗಮನಕ್ಕೆ ಬಂದಿರಲಿಲ್ಲ. ಕಳೆದ ಮಾರ್ಚ್-ಏಪ್ರಿಲ್ ವೇಳೆಗೆ ಲಾಕ್​ಡೌನ್ ಸಂದರ್ಭದಲ್ಲಿ ಪ್ರತಿದಿನ ಸಂಜೆ ವಾಕಿಂಗ್ ಹೋಗುವಾಗ ರಸ್ತೆ ಬದಿಯ ಅಂಗಡಿಗಳ ಹೆಸರಿನ ಸ್ಪೆಲ್ಲಿಂಗ್ ಉಲ್ಟಾ ಹೇಳುತ್ತಿರುವುದು ಪಾಲಕರ ಗಮನಕ್ಕೆ ಬಂತು. ಆದರೂ ಅವರು ಇದನ್ನು ವಿಶೇಷ ಎಂದು ಗ್ರಹಿಸಿರಲಿಲ್ಲ.

    ಒಮ್ಮೆ ಕುತೂಹಲದಿಂದ ಬೇರೆ ಬೇರೆ ಶಬ್ದಗಳನ್ನು ಕೇಳಿದಾಗ ಎಲ್ಲ ಶಬ್ದಗಳ ಸ್ಪೆಲ್ಲಿಂಗ್ ಅನ್ನು ಉಲ್ಟಾ ಹೇಳುವುದನ್ನು ಕಂಡು ಪಾಲಕರಿಗೇ ಅಚ್ಚರಿಯಾಯಿತು. ಈ ಬಗೆಗೆ ಬಲ್ಲವರಲ್ಲಿ ಕೇಳಿದಾಗ, ‘ಇದೊಂದು ವಿಶಿಷ್ಟ ಪ್ರತಿಭೆ, ಎಲ್ಲರಿಗೂ ಈ ಕೌಶಲ ಇರುವುದಿಲ್ಲ. ಜಗತ್ತಿನಲ್ಲಿ ಕೆಲವೇ ಕೆಲವರಲ್ಲಿ ಮಾತ್ರ ಇಂತಹ ಅಪರೂಪದ ಪ್ರತಿಭೆ ಇರುತ್ತದೆ’ ಎಂಬ ವಿಷಯ ತಿಳಿಯಿತು ಎನ್ನುತ್ತಾರೆ ಅಬ್ದುಲ್ ತಂದೆ ಶೇಖ್ ಸಲೀಂ ಹಾಗೂ ತಾಯಿ ಮಮ್ತಾಜ್ ಬೇಗಂ.

    ವಿಷಯ ತಿಳಿದ ಪಟ್ಟಣದ ಮಾಸ್ಟರ್ ಮೈಂಡ್ ಟ್ರೇನರ್ ಯೋಗೇಶ ಶಾನಭಾಗ ಸಹ ಅಬ್ದುಲ್ ಮಥೀನ್​ಗೆ ಪೋ›ತ್ಸಾಹ ನೀಡುತ್ತಿದ್ದು, ಗಣಿತ ಹಾಗೂ ಇತರ ಕೌಶಲಗಳ ತರಬೇತಿ ನೀಡುತ್ತಿದ್ದಾರೆ. ಮಗನ ವಿಶೇಷ ಪ್ರತಿಭೆಯನ್ನು ಪ್ರೋತ್ಸಾಹಿಸುವ ಜತೆಗೆ ಈತನ ಸಾಧನೆಗೆ ಪೂರಕವಾಗಿ ನಿಲ್ಲುವ ಇರಾದೆ ತಂದೆ ಶೇಖ್ ಸಲೀಂ ಅವರದ್ದಾಗಿದೆ.

    ಮಗನಲ್ಲಿರುವ ಅಪರೂಪದ ಪ್ರತಿಭೆಯನ್ನು ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾದ ಈ ಪ್ರತಿಭೆಗೆ ಮನ್ನಣೆ ದೊರೆಯಲೆಂಬ ಉದ್ದೇಶದಿಂದ ಲಿಮ್ಕಾ ದಾಖಲೆಗೆ ಪ್ರಯತ್ನಿಸುವಂತೆ ಹಲವರು ಸಲಹೆ ನೀಡಿದ್ದಾರೆ. ಈ ಕುರಿತು ಪ್ರಯತ್ನಿಸುವ ಇಚ್ಛೆಯಿದೆ.
    | ಶೇಖ್ ಸಲೀಂ ಅಬ್ದುಲ್ ಮಥೀನ್​ನ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts