More

    ಮಂಗಳೂರು ಮಾದರಿ ಕೋಮುಗಲಭೆ ಸೃಷ್ಟಿಗೆ ಯತ್ನ, ರಾಣೆಬೆನ್ನೂರಲ್ಲಿ 11 ಜನರ ಬಂಧನ

    ರಾಣೆಬೆನ್ನೂರ: ಮಂಗಳೂರು ಮಾದರಿಯಲ್ಲಿ ಕೋಮುಗಲಭೆ ಸೃಷ್ಟಿಸುವ ಬರಹಗಳ ಭಿತ್ತಿ ಪತ್ರವನ್ನು ನಗರದ ಗೋಡೆಗಳ ಮೇಲೆ ಅಂಟಿಸುತ್ತಿದ್ದ 11 ಜನ ಆರೋಪಿಗಳನ್ನು ಇಲ್ಲಿಯ ಶಹರ ಠಾಣೆ ಪೊಲೀಸರು ಶುಕ್ರವಾರ ಬೆಳಗಿನ ಜಾವ ಬಂಧಿಸಿದ್ದಾರೆ.

    ನಗರದ ನಿವಾಸಿಗಳಾದ ಶೋಯಬ್ ಮೊಹ್ಮದ ಅಸ್ಗರಲಿ, ವಾಜೀದಲಿ ಹುಸೇನಮಿಯಾಸಾಬ ನೂರಸಾಬ, ಜೆಬಿವುಲ್ಲಾ ಶಬ್ಬೀರಹ್ಮದ ಹಾವನೂರ, ಅಬಜಲ್​ಖಾನ ಮಹಬೂಬ ಐರಣಿ, ಮೆಹತಾಬಶೇಖ್ ಮೋಯಿದ್ದಿನ ಶೇಖ, ನಬೀಲಖಾನ್ ನಿಸಾರಖಾನ ಖಾನ್, ನಮೂನಖಾನ್ ನಿಸಾರಅಹ್ಮದ್ ಖಾನ್, ಫೈರೋಜ್ ಪೈಜುಲರೆಹಮಾನ ಖಾಜಿ, ಖಾಸೀಮ ದಾದಾಪೀರ ರಬ್ಬಾನಿ, ಯಾಸೀರ ಇರ್ಷಾದ ಸುಭಾನಲ್ಲಾ ಅತ್ತಾರ, ಶಾದತಅಲಿ ಸೈಯದಸಾಬ ಬಣಕಾರ ಸೇರಿ 11 ಜನರನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಇನ್ನೊಬ್ಬ ಆರೋಪಿ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

    ಬಂಧಿತರು ನಸುಕಿನ ಜಾವ ನಗರದ ಸಾರ್ವಜನಿಕ ಗೋಡೆಗಳ ಮೇಲೆ ಅನ್ಯ ಧರ್ಮಗಳ ಮಧ್ಯೆ ದ್ವೇಷ ಹರಡುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೆಸರಿನಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲು ಮುಂದಾಗಿದ್ದರು.

    ವಿಶೇಷ ಗಸ್ತು ತಿರುಗುತ್ತಿದ್ದ ಶಹರ ಠಾಣೆ ಪಿಎಸ್​ಐ ಪ್ರಭು ಕೆಳಗಿನಮನಿ, ಆರೋಪಿಗಳು ಭಿತ್ತಿಪತ್ರ ಅಂಟಿಸಲು ಮುಂದಾಗಿದ್ದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿಗಳ ಬಳಿ ಕೋಮುಗಲಭೆ ಸೃಷ್ಟಿಸುವ ಬ್ಯಾನರ್​ಗಳು ಪತ್ತೆಯಾಗಿವೆ. ಕೂಡಲೆ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ನಂತರ ಈ ಮೂವರ ಸಹಾಯದಿಂದ ಇನ್ನುಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಮೇಲೂ ಹಲ್ಲೆ: ಪಿಎಸ್​ಐ ಫ್ರಭು ಕೆಳಗಿನಮನಿ, ಸಿಬ್ಬಂದಿ ಪ್ರಕಾಶ ಬಿಲ್ಲೇರ, ಸಚಿನ ಓಲೇಕಾರ ಅವರುಗಳು ಮೂವರು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತರುತ್ತಿದ್ದಂತೆ ಇನ್ನಿತರ 8 ಜನ ಆರೋಪಿತರು ಗಲಾಟೆ ಮಾಡಿದ್ದಾರೆ. ಬಂಧಿತ ಮೂವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಪಿಎಸ್​ಐ ಹಾಗೂ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಪಿಎಸ್​ಐಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ. ಪೊಲೀಸರು ಕೂಡಲೆ ಮೇಲಧಿಕಾರಿ ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ಕರೆಯಿಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಹೆಸರಿನಲ್ಲಿ ಯಾವುದೇ ಪರವಾನಗಿ ಪಡೆಯದೆ ಹಾಗೂ ಆರ್​ಎಸ್​ಎಸ್ ಮತ್ತು ಈಡಿ ಸಂಸ್ಥೆ ವಿರುದ್ಧ ಬರೆದ ಬರಹಗಳ ಭಿತ್ತಿಪತ್ರಗಳನ್ನು ಮಧ್ಯರಾತ್ರಿ ಗೋಡೆಗಳಿಗೆ ಅಂಟಿಸಲು 12 ಜನರ ಗುಂಪು ಮುಂದಾಗಿತ್ತು. ಮೊದಲಿಗೆ ಮೂವರನ್ನು ಬಂಧಿಸಲಾಗಿತ್ತು. ಅವರ ಬಂಧನ ಪ್ರಶ್ನಿಸಿ 8 ಜನರ ಗುಂಪು ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಿತು. ಆದ್ದರಿಂದ ಎಲ್ಲರನ್ನೂ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

    | ಟಿ.ವಿ. ಸುರೇಶ, ಡಿವೈಎಸ್ಪಿ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts