More

    ದೇವಿ ಕುಂಭ ಹೊತ್ತ 108 ಪುರುಷರು!

    ಹಾವೇರಿ: ಹಳ್ಳಿಗೆ ಅಂಟಿಕೊಂಡಿರುವ ಶಾಪ ವಿಮೋಚನೆ ಹಾಗೂ ಗ್ರಾಮದ ಶ್ರೇಯೋಭಿವೃದ್ಧಿಗಾಗಿ ಗ್ರಾಮದ 108 ಪುರುಷರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ರುದ್ರಾಭಿಷೇಕ ಮಾಡಿ, ಊರ ತುಂಬ ಕುಂಭದ ನೀರು ಚೆಲ್ಲಿ, ಮುಂದೆ ದುರ್ಘಟನೆಗಳು ಮರುಕಳಿಸದಂತೆ ಗ್ರಾಮದೇವತೆಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರು.

    ಇಂಥ ದೃಶ್ಯಗಳು ಕಂಡು ಬಂದದ್ದು ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ. ಕಳೆದ ತಿಂಗಳು ಆಲದಕಟ್ಟಿ ಪಟಾಕಿ ದುರಂತದಲ್ಲಿ ಗ್ರಾಮದ ಮೂವರು ಯುವಕರು ದುರ್ಮರಣಕ್ಕೀಡಾಗಿದ್ದರು. ಅದೇ ದಿನ ಮತ್ತೋರ್ವ ವೃದ್ಧೆಯೂ ಮೃತಪಟ್ಟಿದ್ದರು. ಇಂತಹ ಅವಘಡಗಳಿಂದ ಕಂಗೆಟ್ಟಿದ್ದ ಕಾಟೇನಹಳ್ಳಿಯ ಗ್ರಾಮಸ್ಥರೆಲ್ಲರೂ ಸೇರಿ ಜಾತಿ- ಭೇದ ಮರೆತು ಗ್ರಾಮದೇವತೆ ದ್ಯಾಮವ್ವ ದೇವಿ ಆರಾಧನೆ ಮಾಡಿದರು.

    ಗ್ರಾಮದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಗ್ರಾಮದೇವತೆಯ ಆರಾಧನೆ, ಮೆರವಣಿಗೆ ಮಾಡಲಾಗುತ್ತದೆ. ಅದೇ ರೀತಿ ಆಗಸ್ಟ್ 29ರಂದು ಗ್ರಾಮದಲ್ಲಿ ದೇವಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಅದೇ ದಿನ ಆಲದಕಟ್ಟಿ ಪಟಾಕಿ ದುರಂತ ಸಂಭವಿಸಿತು. ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿತ್ತು. ಹಾಗಾಗಿ, ಆಚರಣೆಯನ್ನು ಮುಂದೂಡಲಾಗಿತ್ತು.

    ಈ ಘಟನೆಯಿಂದ ಬೇಸರಗೊಂಡ ಗ್ರಾಮದ ಹಿರಿಯರು ಹರಿಹರದ ಸ್ವಾಮೀಜಿಯೊಬ್ಬರ ಸಲಹೆಯಂತೆ ಅ. 3ರಂದು ಗ್ರಾಮದಲ್ಲಿ ದೇವಿ ಆರಾಧನೆ, ಪುರುಷರಿಂದ ಕುಂಭ ಮೆರವಣಿಗೆ ಆಯೋಜಿಸಿದ್ದರು. ಮಂಗಳವಾರ ಗ್ರಾಮದ ಬಸವಣ್ಣ ದೇವಸ್ಥಾನದಿಂದ 108 ವಿವಾಹಿತ ಮತ್ತು ಅವಿವಾಹಿತ ಪುರುಷರು ಹೆಗಲ ಮೇಲೆ ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಊರ ತುಂಬ ಕುಂಭದ ನೀರು ಚೆಲ್ಲಿದರು. ಊರ ಹೊರಗಿನ ಬೋರ್ಗಲ್ಲಿಗೆ ಅಭಿಷೇಕಗೈದರು. ನಂತರ ದ್ಯಾಮವ್ವನ ಗುಡಿಗೆ ತೆರಳಿ ರುದ್ರಾಭಿಷೇಕ ಮಾಡಿ, ಉಡಿ ತುಂಬುವ ಮೂಲಕ ಪುನೀತರಾದರು.

    ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಕಾಟೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ವಾಲೀಕಾರ, ತಾಪಂ ಮಾಜಿ ಸದಸ್ಯ ಅಶೋಕ ಹನುಮಗೇರಿ, ವಿಎಸ್​ಎಸ್ ಬ್ಯಾಂಕ್ ಅಧ್ಯಕ್ಷ ವೀರಭದ್ರಪ್ಪ ಗೋಣೆಮ್ಮನವರ, ಗ್ರಾಮದ ಹಿರಿಯರಾದ ಸೋಮನಗೌಡ್ರ ಪಾಟೀಲ, ಹೊನ್ನಪ್ಪ ಯಲಿಗಾರ, ಹುನುಮಂತಪ್ಪ ಅಂಗರಗಟ್ಟಿ. ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

    ಗ್ರಾಮದಲ್ಲಿ ಪದೇಪದೆ ಸಾವು, ನೋವಿನ ಸಂಗತಿಗಳು ನಡೆದ ಕಾರಣ ಗ್ರಾಮಸ್ಥರೆಲ್ಲ ಸೇರಿ ಜಾತಿ, ಭೇದ ಮರೆತು 108 ಪುರುಷರಿಂದ ಕುಂಭ ಮೆರವಣಿಗೆ ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಮದುವೆಯಾಗಿರುವ ಹೆಣ್ಣು ಮಕ್ಕಳು ತವರು ಮನೆಗೆ ಬಂದು ದೇವಿಗೆ ಹಣ್ಣು- ಕಾಯಿ ಮಾಡಿಸಿ ಗ್ರಾಮದ ಒಳಿತಿಗಾಗಿ ಸಂಕಲ್ಪ ಮಾಡಿದ್ದಾರೆ.

    | ವೀರಭದ್ರಪ್ಪ ಗೋಣೆಮ್ಮನವರ, ಅಧ್ಯಕ್ಷ, ವಿಎಸ್​ಎಸ್ ಬ್ಯಾಂಕ್

    ಎರಡು ಮೂರು ಬಾರಿ ದೇವಿ ಚೌಕಿಮನಿ ಆಚರಣೆ ಸಂದರ್ಭದಲ್ಲಿ ಗ್ರಾಮದಲ್ಲಿ ಕೆಲವರು ಮೃತಪಟ್ಟ ಕಾರಣ ದೇವಿ ಆಚರಣೆ ಮುಂದೂಡಲಾಗಿತ್ತು. ಹಾಗಾಗಿ, ಊರಿನ ಹಿರಿಯರು ಸ್ವಾಮೀಜಿಯೊಬ್ಬರ ಸಲಹೆಯಂತೆ ಈ ರೀತಿ ವಿಶಿಷ್ಟ ಆಚರಣೆ ಮಾಡಿಸಿದ್ದಾರೆ.

    | ಮಂಗಳಾ ಸುರೇಶ ಓಲೇಕಾರ, ಗ್ರಾಪಂ ಅಧ್ಯಕ್ಷೆ, ಕಾಟೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts