More

    108 ಆಂಬುಲೆನ್ಸ್ ಟ್ರ್ಯಾಕಿಂಗ್ ವ್ಯವಸ್ಥೆ ಶೀಘ್ರ

    ತುಮಕೂರು : ರಾಜ್ಯದೆಲ್ಲೆಡೆ 108 ಆಂಬುಲೆನ್ಸ್ ಸೇವೆಗೆ ಕಾಯಕಲ್ಪ ನೀಡಲು ನಿರ್ಧರಿಸಿದ್ದು, ಹೊಸ ತಂತ್ರಜ್ಞಾನ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯ ಸೇವೆ ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದ ನಂತರ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳ ಸಭೆ ನಡೆಸಿದರು. ಟ್ರ್ಯಾಕಿಂಗ್ ವ್ಯವಸ್ಥೆಯುಳ್ಳ 108 ಆಂಬುಲೆನ್ಸ್ ಸೇವೆಯನ್ನು ಶೀಘ್ರದಲ್ಲಿಯೇ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಜತೆಗೆ ಮೆಡಿಕಲ್ ಮೊಬೈಲ್ ಯುನಿಟ್, 104 ಕಾಲ್ ಸೆಂಟರ್ ವ್ಯವಸ್ಥೆ, ಆಸ್ಪತ್ರೆಗಳಿಗೆ ಸಕಾಲದಲ್ಲಿ ಔಷಧ ಪೂರೈಕೆ ಮುಂತಾದ ಸುಧಾರಣಾ ಕ್ರಮಗಳಿರಲಿವೆ ಎಂದರು.

    ಔಷಧ ದಾಸ್ತಾನು ನಿಗಮದ ಕಾರ್ಯ ವ್ಯವಸ್ಥೆ ಸರಿಪಡಿಸುವ ಮೂಲಕ ಸಕಾಲದಲ್ಲಿ ಜಿಲ್ಲೆಗಳಿಗೆ ಔಷಧ ಒದಗಿಸುವ ಕ್ರಮಕೈಗೊಳ್ಳಲಾಗುವುದು. 262 ಹೊಸ 108 ಆಂಬುಲೆನ್ಸ್ ವಾಹನ ಖರೀದಿ ಮಾಡಲಾಗಿದ್ದು, ರಾಜ್ಯದೆಲ್ಲೆಡೆ 750 ಆಂಬುಲೆನ್ಸ್‌ಗಳು ಸೇವೆಯಲ್ಲಿ ಇರಲಿದೆ ಎಂದರು.
    ರೋಗಿಗಳು ಆಸ್ಪತ್ರೆಗೆ ಬಂದಾಗ ವೈದ್ಯರು ಮೊದಲಿಗೆ ರೋಗಿಗಳನ್ನು ಮಾತನಾಡಿಸಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಆಸ್ಪತ್ರೆಗಳು ಸೇವೆ ಆಧಾರಿತ ಕೇಂದ್ರಗಳಾಗಿದ್ದು, ಜಿಲ್ಲಾ ಶಸ್ತ್ರಚಿಕಿತ್ಸೆ ಸೇರಿ ಎಲ್ಲ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಮಾನವೀಯತೆಯಿಂದ ರೋಗಿಗಳ ಸೇವೆ ಮಾಡಬೇಕು ಎಂದರು.

    ಜಿಲ್ಲಾಸ್ಪತ್ರೆ ಹೊರತುಪಡಿಸಿ ಪಿಎಚ್‌ಸಿ ಮತ್ತು ಸಿಎಚ್‌ಸಿಗಳಲ್ಲಿ ಕೆಲವೆಡೆ ಕೇವಲ ಬಯೋಮೆಟ್ರಿಕ್ ಹಾಜರಾತಿ ನೀಡಿ ವೈದ್ಯರು ಹೊರಹೋಗುತ್ತಾರೆ ಎನ್ನುವ ದೂರುಗಳಿದ್ದು, ಬದಲಾಗಬೇಕು, ಕಡ್ಡಾಯವಾಗಿ ವೈದ್ಯರು 8 ತಾಸು ಪೂರ್ಣ ಪ್ರಮಾಣದಲ್ಲಿ ಕರ್ತವ್ಯನಿರ್ವಹಿಸಬೇಕು, ಜಿಪಂ ಸಿಇಒ ನಿಗಾವಹಿಸಬೇಕು ಎಂದರು.

    ಎಬಿಎಆರ್‌ಕೆ ಯೋಜನೆಗೆ ಹೆಚ್ಚು ಜನ ನೋಂದಣಿಯಾಗುವ ಹಾಗೆ ನೋಡಿಕೊಳ್ಳಬೇಕು. ಇದರಿಂದ ಜಿಲ್ಲಾಸ್ಪತ್ರೆಗೆ 10ಕೋಟಿ ರೂ. ಆದಾಯ ಬಂದಲ್ಲಿ ಎಲ್ಲ ಮೂಲಸೌಲಭ್ಯ ನಿಮ್ಮ ಹಂತದಲ್ಲಿಯೇ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.

    ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಡಾ.ಎಚ್. ಡಿ.ರಂಗನಾಥ್, ಆರೋಗ್ಯ ಇಲಾಖೆ ಆಯುಕ್ತರಾದ ರಣದೀಪ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಅನಿಲ್‌ಕುಮಾರ್, ಎನ್‌ಹೆಚ್‌ಎಂ ವ್ಯವಸ್ಥಾಪಕ ನಿರ್ದೇಶಕ ನವೀನ್‌ ಭಟ್, ಪಾಲಿಕೆ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು ಇದ್ದರು.

    ಸಿ ಸೆಕ್ಷನ್ ಕಡಿಮೆ ಮಾಡಿ: ಕೇಂದ್ರ ಕಚೇರಿಯಿಂದ ಔಷಧ ಪೂರೈಕೆ ಸಕಾಲದಲ್ಲಿ ಆಗದಿದ್ದಲ್ಲಿ ಸ್ಥಳೀಯವಾಗಿಯೇ ಔಷಧ ಖರೀದಿಸಿ ರೋಗಿಗಳಿಗೆ ಪೂರೈಸಲು ಅವಕಾಶ ನೀಡಲಾಗಿದೆ. ಅನವಶ್ಯಕವಾಗಿ ರೋಗಿಗಳನ್ನು ಹೊರಗಡೆಯಿಂದ ಔಷಧ ಖರೀದಿಸುವಂತೆ ಸೂಚಿಸಬಾರದು ಮತ್ತು ಆಸ್ಪತ್ರೆಯ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪೂರೈಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು. ಸಿ ಸೆಕ್ಷನ್ ಹೆರಿಗೆ ಪ್ರಕರಣಗಳನ್ನು ಕಡಿಮೆ ಮಾಡಬೇಕು ಹಾಗೂ ಸಹಜ ಹೆರಿಗೆಗೆ ಪ್ರೋತ್ಸಾಹಿಸಬೇಕು. ಜಿಲ್ಲೆಯಲ್ಲಿ ಸಿ ಸೆಕ್ಷನ್ ಹೆರಿಗೆ ಪ್ರಕರಣ ಶೇ.50 ಇದ್ದು, ಇದು ಕಡಿಮೆಯಾಗಬೇಕು. ಇನ್ನು ಮುಂದೆ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಿ ಸೆಕ್ಷನ್ ಪ್ರಕರಣ ಕುರಿತಂತೆ ಪರಿಶೀಲನೆ ಮಾಡಲಾಗುವುದು ಎಂದರು. ಕೀಲು ಮೂಳೆ ವಿಭಾಗದಲ್ಲಿ ಅನಸ್ತೇಷಿಯಾ ಕೊರತೆ ಇದ್ದು, ಎನ್‌ಎಚ್‌ಎಂ ಅಡಿಯಲ್ಲಿ ಅರಿವಳಿಕೆ ತಜ್ಞರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾಗೆ ಸೂಚಿಸಿದರು.

    ಸಿಬ್ಬಂದಿ ನೇಮಕಕ್ಕೆ ಪರಿಶೀಲನೆ: ಟ್ರಾಮಾ ಕೇರ್ ಸೆಂಟರ್ ಸಿಬ್ಬಂದಿ ನೇಮಕಾತಿ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣಗೊಳಿಸುವಂತೆ, ಜಿಲ್ಲಾ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಒಬ್ಬರು ಇದ್ದು, ಮತ್ತೊಬ್ಬರನ್ನು ನೇಮಕ ಮಾಡುವ ಸಂಬಂಧ ಪರಿಶೀಲಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಜಿಲ್ಲಾ ಆಸ್ಪತ್ರೆ ಬ್ಲಡ್ ಬ್ಯಾಂಕ್‌ನಲ್ಲಿ ಇಬ್ಬರು ತಂತ್ರಜ್ಞರು ಇದ್ದು, ಕನಿಷ್ಠ ಮೂರು ತಂತ್ರಜ್ಞರನ್ನು ನೇಮಕ ಮಾಡುವ ಸಂಬಂಧ ಪರಿಶೀಲಿಸುವುದಾಗಿ ತಿಳಿಸಿದ ಅವರು, ಜಿಲ್ಲೆಯಲ್ಲಿ ಟಿಬಿ ಕಾಯಿಲೆಯಿಂದ ಮರಣ ಹೊಂದುವ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿಯಬೇಕು ಎಂದು ಸೂಚಿಸಿದರು. ಬೀದಿನಾಯಿ ಕಡಿತ ಪ್ರಕರಣಗಳು ಹೆಚ್ಚಿರುವ
    ಕುರಿತು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ, ಸಾಕಷ್ಟು ಔಷಧ ದಾಸ್ತಾನು ಹೊಂದಬೇಕು ಹಾಗೂ ಪಾಲಿಕೆ ವತಿಯಿಂದ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಗಳನ್ನು ಆಯೋಜಿಸಿ ಚುಚ್ಚು ಮದ್ದು ನೀಡಬೇಕು ಎಂದು ಹೇಳಿದರು.

    ಮತ್ತಷ್ಟು ಹಾಸಿಗೆ ನೀಡುವ ವ್ಯವಸ್ಥೆ ಮಾಡಿ: 400 ಹಾಸಿಗೆಗಳುಳ್ಳ ತುಮಕೂರು ಜಿಲ್ಲಾಸ್ಪತ್ರೆಗೆ ಪ್ರತಿದಿನ ಒಪಿಡಿ ವಿಭಾಗಕ್ಕೆ 1000ಕ್ಕೂ ಹೆಚ್ಚು ರೋಗಿಗಳು ಬರುವ ಕಾರಣ ಮತ್ತಷ್ಟು ಹಾಸಿಗೆ ನೀಡುವ ವ್ಯವಸ್ಥೆಯಾಗಬೇಕು. ಜಿಲ್ಲೆಯ ಕೈಗಾರಿಕಾ ಕಾರಿಡಾರ್ ಮತ್ತು ಎಚ್‌ಎಎಲ್ ಫ್ಯಾಕ್ಟರಿ ಘಟಕಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಜನರು ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುವ ಕಾರಣ ದೂರದೃಷ್ಟಿ ಇಟ್ಟುಕೊಂಡು ಸೂಕ್ತ ಆರೋಗ್ಯ ಯೋಜನೆ ತಯಾರಿಸಿಕೊಂಡುವಂತೆ ಆರೋಗ್ಯ ಸಚಿವರಲ್ಲಿ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.

    ಅವ್ಯವಹಾರ ತನಿಖೆ: ಕರೊನಾ ನೆಪಮಾಡಿಕೊಂಡು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ದ್ವೇಷದ ರಾಜಕಾರಣ ಅಲ್ಲ, ತನಿಖೆ ಮಾಡಿಸುವ ಬಗ್ಗೆ ನಾವು ಚುನಾವಣೆಯಲ್ಲೇ ಭರವಸೆ ನೀಡಿದ್ದೇವೆ ಎಂದರು. ಅವ್ಯವಹಾರದ ಬಗ್ಗೆ ಯಾವ ರೀತಿಯ ತನಿಖೆಯಾಗಬೇಕು ಎನ್ನುವುದನ್ನು ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಖರೀದಿ ಮಾಡಿದ ಔಷಧ, ಸಲಕರಣೆಗಳ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬೀಳಲಿದೆ ಎಂದರು. ಅವ್ಯವಹಾರದ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ನೀಡಿದ್ದು ಅವ್ಯವಹಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ ಎಂದರು.

    ಬಿಜೆಪಿ-ದಳದಿಂದ ಸರ್ಕಾರ ಬೀಳಿಸಲು ಷಡ್ಯಂತ್ರ!: ಸಚಿವರ ಮೇಲೆ ಅಸಮಾಧಾನಗೊಂಡು ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಸಿಎಂ ಕೂಡ ಈ ಬಗ್ಗೆ ಮಾತನಾಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಗಾಪುರದಲ್ಲಿ ಆಪರೇಷನ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಅಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅವರಿಗೆ ವಿಶೇಷವಾಗಿ ಮಾಹಿತಿ ಇರಬಹುದು ಎಂದರು. ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿರೋದು ಸತ್ಯ, ಇಬ್ಬರೂ ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡುತ್ತಿರಬಹುದು. ಆದರೆ, ನಮ್ಮ ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ. ಐದು ವರ್ಷ ಅಧಿಕಾರ ನಡೆಸುತ್ತೇವೆ. ಜನರಿಗೆ ಒಳ್ಳೆಯ ಆಡಳಿತ ಕೊಟ್ಟೆ ಕೊಡುತ್ತೇವೆ ಎಂದರು.

    ಹೋಬಳಿ ಮಟ್ಟದಲ್ಲಿ ಸುಸಜ್ಜಿತವಾದ ಆಂಬುಲೆನ್ಸ್ ವಾಹನಗಳನ್ನು ಒದಗಿಸಿಕೊಡಬೇಕು. ವೈದ್ಯರು ಕೇಂದ್ರ ಸ್ಥಾನದಲ್ಲಿರಬೇಕಾದರೆ ಅವರಿಗೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸುಧಾರಿತ ವಸತಿಗೃಹ ವ್ಯವಸ್ಥೆಯಾಗಬೇಕು. | ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts