More

    10 ಸಾವಿರ ಕೋಟಿ ರೂ. ವಹಿವಾಟು ಗುರಿ

    ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಮುಂದಿನ ಐದು ವರ್ಷದ ಅವಧಿಯಲ್ಲಿ 10 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಸಂಕಲ್ಪ ಮಾಡಿಕೊಂಡಿದ್ದೇನೆ ಎಂದು ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ ಕತ್ತಿ ತಿಳಿಸಿದರು.

    ನಗರದ ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಶನಿವಾರ ಅಧ್ಯಕ್ಷರಾಗಿ ಮರುಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು ಹಾಗೂ ಸಂಘದ ವರಿಷ್ಠರು, ನಿರ್ದೇಶಕರ ಸಹಕಾರದಿಂದ ಬ್ಯಾಂಕ್ ಅಧ್ಯಕ್ಷನಾಗಿ ಮರು ಆಯ್ಕೆಯಾಗಿದ್ದೇನೆ. ಎಲ್ಲರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡುತ್ತೇನೆ ಎಂದು ಭರವಸೆ ನೀಡಿದರು.

    ಸಹಕಾರಿ ಕ್ಷೇತ್ರದಲ್ಲಿಯೇ ಮಾದರಿಯಾಗಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 40 ಲಕ್ಷ ಗ್ರಾಹಕರ ಸಂಖ್ಯೆಯನ್ನು ಮುಂದಿನ 5 ವರ್ಷದ ಅವಧಿಯಲ್ಲಿ ಪಕ್ಷದ ನಾಯಕರು, ಸಚಿವರು, ಶಾಸಕರು, ನಿರ್ದೇಶಕರ, ಸಿಬ್ಬಂದಿಯ ಸಹಕಾರ ಪಡೆದು 60 ಲಕ್ಷಕ್ಕೆ ಹೆಚ್ಚಿಸುತ್ತೇನೆ ಎಂದು ಅವರು ತಿಳಿಸಿದರು.

    ನಿರಂತರ ಪ್ರಯತ್ನದ ಫಲವಾಗಿ ಬ್ಯಾಂಕ್‌ನ 16 ನಿರ್ದೇಶಕರ ಪೈಕಿ 13 ನಿರ್ದೇಶಕರ ಅವಿರೋಧವಾಗಿ ಆಯ್ಕೆ ಮಾಡಲು ಸಾಧ್ಯವಾಯಿತು. ಕೆಲ ಕಾರಣಗಳಿಂದ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇರಲಿಲ್ಲ. ನ.14ಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ನ. 6ರಂದು ಚುನಾವಣೆ ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದರು. ಹಾಗಾಗಿ ನಾವ್ಯಾರೂ ಅವಸರ ಮಾಡುವ ಅಗತ್ಯ ಇರಲಿಲ್ಲ ಎಂದು ರಮೇಶ ಕತ್ತಿ ಹೇಳಿದರು.

    ಬ್ಯಾಂಕ್‌ಗೆ 44 ವರ್ಷ ಸೇವೆ ಸಲ್ಲಿಕೆ

    1986ರಲ್ಲಿಯೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ)ನ ನಿರ್ದೇಶಕನಾಗಿ ಮೊದಲ ಬಾರಿ ಆಯ್ಕೆಯಾದೆ. ಅಲ್ಲಿಂದ ಇಲ್ಲಿಯವರೆಗೆ 4 ಬಾರಿ ಉಪಾಧ್ಯಕ್ಷನಾಗಿ ಮತ್ತು 19 ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ಮತ್ತೆ 5 ವರ್ಷ ಸೇವೆ ಸಲ್ಲಿಸಲು ಪಕ್ಷದ ಮತ್ತು ಸಂಘದ ವರಿಷ್ಠರು, ನಿರ್ದೇಶಕರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ ನನ್ನ ಜೀವತದ ಅವಧಿಯಲ್ಲಿ 44 ವರ್ಷ ಡಿಸಿಸಿ ಬ್ಯಾಂಕ್‌ಗೆ ಸೇವೆ ಸಲ್ಲಿಸಿದ ತೃಪ್ತಿ ಇದೆ ಎಂದು ರಮೇಶ ಕತ್ತಿ ಹೇಳಿದರು.

    ಜಾರಕಿಹೊಳಿ ಸಹೋದರರು ನನ್ನ ಬಾಲ್ಯ ಸ್ನೇಹಿತರು

    ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ಮತ್ತು ನಮ್ಮ ಸ್ನೇಹ ತುಂಬ ಹಳೆಯದು. 1986ದಿಂದಲೇ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮತ್ತು ನಾನು ಒಟ್ಟಿಗೆ ದಿನ ಕಳೆದವರು. ರಾಜಕೀಯದ ಹೊರತಾಗಿ ನಮ್ಮ ಸ್ನೇಹ ಬೆಳೆದುಕೊಂಡು ಬಂದಿದೆಯೇ ವಿನಹ ರಾಜಕೀಯಕ್ಕಾಗಿ ಬೆಳೆದು ಬಂದಿರುವ ಸ್ನೇಹ ನಮ್ಮದಲ್ಲ. ಹಾಗಾಗಿಯೇ ಜಾರಕಿಹೊಳಿ ಸಹೋದರರು ನನ್ನನ್ನು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷನನ್ನಾಗಿ ಮಾಡಲು ಶ್ರಮಿಸಿದರು. 2009ರಿಂದ ಈಚೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನನಗೆ ಪರಿಚಯವಾಗಿದ್ದಾರೆ ಎಂದು ರಮೇಶ ಕತ್ತಿ ಹೇಳಿದರು.

    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಿ.ಸುರೇಶ ಅಂಗಡಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಒಂದು ವೇಳೆ ಅವರ ಕುಟುಂಬಕ್ಕೆ ಟಿಕೆಟ್ ನೀಡದಿದ್ದರೆ ನಾನು ಸ್ಪರ್ಧಿಸಲು ತಯಾರಿದ್ದೇನೆ.
    | ರಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷನನ್ನಾಗಿ ಮರುಆಯ್ಕೆ ಮಾಡಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ 5 ವರ್ಷದ ಅವಧಿಯಲ್ಲಿ ರೈತರಿಗೆ, ಬಡವರಿಗೆ, ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತೇನೆ.
    | ಸುಭಾಷ ಢವಳೇಶ್ವರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

    ಪಕ್ಷದ ನಾಯಕರ ಸೂಚನೆ ಮತ್ತು ನಿರ್ದೇಶಕರ ಒಪ್ಪಿಗೆಯಂತೆ ಬಿಡಿಸಿಸಿ ಅಧ್ಯಕ್ಷರಾಗಿ ರಮೇಶ ಕತ್ತಿ ಮತ್ತು ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯದ ಪಾತ್ರ ಪ್ರಮುಖವಲ್ಲ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಮತ್ತಷ್ಟು ಅಭಿವೃದ್ಧಿ ಕಾಣಲಿದೆ.
    | ಉಮೇಶ ಕತ್ತಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts