More

    ಕೋವಿಡ್​ಗೆ ಬಲಿಯಾದ ಕೃಷಿಕರ ಕುಟುಂಬಕ್ಕೆ ನೆರವು: 10 ಸಾವಿರ ರೈತರ ಸಾಲಮನ್ನಾ

    ಬೆಂಗಳೂರು: ಕೋವಿಡ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ವರ್ಗಗಳಿಗೆ ನೆರವಿನ ಪ್ಯಾಕೇಜ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ಕರೊನಾ ಮಾರಿಗೆ ಬಲಿಯಾದ 10187 ರೈತರ ಕೃಷಿ ಸಾಲ ಮನ್ನಾ ಮಾಡುವ ಮೂಲಕ ಅವಲಂಬಿತ ಕುಟುಂಬದ ಮೇಲಿನ ಹೊರೆ ಇಳಿಸುವ ಕುರಿತು ಚಿಂತನೆ ಆರಂಭಿಸಿದೆ.

    ಕರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನ್ನದಾತರಿಗೆ ಆಸರೆಯಾಗಲು ಸಾಲ ಮನ್ನಾ ಮಾಡುವ ಚಿಂತನೆ ನಡೆಸಿದ್ದಾರೆ. ಈ ಹಿಂದೆಯೇ ಕೋವಿಡ್​ಗೆ ಬಲಿಯಾದ ರೈತರ ಸಾಲ ಮನ್ನಾ ಮಾಡುವ ವಾಗ್ದಾನ ಮಾಡಿದ್ದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇದೀಗ ಅಂಕಿ ಸಂಖ್ಯೆಗಳೊಂದಿಗೆ ಅನುಮೋದನೆ ಪಡೆದುಕೊಳ್ಳಲು ಪ್ರಸ್ತಾವನೆ ಸಿದ್ಧಪಡಿಸಿಕೊಂಡಿದ್ದಾರೆ.

    ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಸೋಮಶೇಖರ್ ಡಿಸಿಸಿ ಬ್ಯಾಂಕ್ ಹಾಗೂ ಪಿಕಾರ್ಡ್, ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸಾಲ ಪಡೆದು ಕರೊನಾದಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆಂದರು. ಈ ಸಂಬಂಧ 3-4 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದೆಂದರು.

    ಸುಲಭ ಸಾಲ: ಸಾಲ ಮನ್ನಾ ವಿಚಾರವಾಗಿ ಶೀಘ್ರವೇ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಯವರು ಹಾಗೂ ಸರ್ಕಾರ ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೆಯೂ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಗುರಿ ಸಾಧನೆ: ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ.

    25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆ ಮಾಡಲಾಗಿದೆ. ಇದೀಗ 25.67 ಲಕ್ಷ ರೈತರ ಪೈಕಿ ಕೋವಿಡ್​ನಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂ. ಸಾಲ ಮನ್ನಾ ಮಾಡುವ ಸಂಬಂಧ ಚಿಂತನೆ ನಡೆದಿರುವುದಾಗಿ ತಿಳಿಸಿದರು.

    ಉದ್ದೇಶವೇನು?: 1 . ರೈತ ಮೃತನಾಗಿ ಕೃಷಿಗಾಗಿ ಮಾಡಿದ ಸಾಲ ಬಾಕಿ ಉಳಿದರೆ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಲಿದೆ, ಸಾಲ ಮನ್ನಾ ಮಾಡಿದರೆ ಅವರನ್ನು ರಕ್ಷಿಸುವ ಜವಾಬ್ದಾರಿ ತೆಗೆದುಕೊಂಡಂತೆ

    2 . ಸರ್ಕಾರವು ರೈತರ ಬೆನ್ನಿಗಿದೆ ಎಂದು ಸಂದೇಶ ಕಳಿಸುವ ಜತೆಗೆ ಕೃಷಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ

    3 . ಸರ್ಕಾರದ ರೈತ ಪರ ನೀತಿಗೆ ಪುಷ್ಟಿ ದೊರೆಯಲಿದೆ. ಮೃತ ರೈತನ ಕುಟುಂಬದ ಸಂಕಷ್ಟವನ್ನು ರಾಜಕೀಯ ಲಾಭ ಮಾಡಿಕೊಳ್ಳುವ ಎದುರಾಳಿಯ ಅವಕಾಶ ಕಸಿಯಬಹುದು

    4 . ಸಾಲ ಬಾಕಿಯಾದರೆ ಸಹಕಾರಿ ಸಂಸ್ಥೆಗಳಿಗೆ ಹೊರೆಯಾಗಲಿದೆ, ಅದನ್ನು ಆರಂಭದಲ್ಲೇ ಪರಿಹರಿಸಿದರೆ ಸಂಸ್ಥೆಗಳೂ ನಿಟ್ಟುಸಿರು ಬಿಡಬಹುದು.

    ಶನಿವಾರ ಮಾರ್ಗಸೂಚಿ: ಸಹಕಾರ ಸಚಿವರು ಶನಿವಾರ ಮಹತ್ವದ ಸಭೆ ಕರೆದಿದ್ದು, ಅಲ್ಲಿ ಮಾರ್ಗಸೂಚಿ ಕುರಿತಂತೆ ರ್ಚಚಿಸಿ ತೀರ್ವನಿಸಲಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ, ಮುಂದೆ ಅರ್ಜಿ ಕರೆಯಬೇಕೇ? ಅರ್ಹತಾ ಮಾನದಂಡ ನಿಗದಿ ಪಡಿಸಬೇಕೇ? ಎಷ್ಟು ಪ್ರಮಾಣದ ಸಾಲ ಮನ್ನಾ ಮಾಡಬೇಕು? 1 ಮನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದರೆ ಹೇಗೆ ಪರಿಗಣಿಸಬೇಕು? ಕಾಲ ಮಿತಿಯಲ್ಲಿ ಬದಲಾವಣೆ ಮಾಡಬೇಕೆ ಎಂಬ ಬಗ್ಗೆ ಅಂದು ಮಾರ್ಗಸೂಚಿ ಅಂತಿಮವಾಗಲಿದೆ.

    ಕರೊನಾ ಸೋಂಕಿನಿಂದ ಮೃತಪಟ್ಟಿರುವ ರೈತರ ಸಹಾಯಕ್ಕೆ ಧಾವಿಸಬೇಕೆಂಬುದು ಮುಖ್ಯಮಂತ್ರಿ ಯಡಿಯೂರಪ್ಪನವರ ಅಭಿಲಾಷೆಯಾಗಿದೆ. ಅದಕ್ಕೆ ಪೂರಕವಾಗಿ ಕೃಷಿ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳುತ್ತಾರೆ.

    ಜಿಲ್ಲಾವಾರು ಮೃತ ರೈತರು

    ಬಾಗಲಕೋಟೆ – 672

    ಬೆಳಗಾವಿ- 3334

    ಬಳ್ಳಾರಿ- 357

    ಬೆಂಗಳೂರು- 381

    ಬೀದರ್- 824

    ಚಿಕ್ಕಮಗಳೂರು- 113

    ಚಿತ್ರದುರ್ಗ- 156

    ದಾವಣಗೆರೆ – 402

    ಹಾಸನ- 454

    ಕಲಬುರಗಿ- 224

    ಕೆನರಾ ಶಿರಸಿ

    (ಉ.ಕ)- 186

    ಡಿಸಿಸಿ ಬ್ಯಾಂಕ್ ಧಾರವಾಡ – 376

    ಕೊಡಗು- 113

    ಕೋಲಾರ- 147

    ಮಂಡ್ಯ- 410

    ಮೈಸೂರು – 281

    ರಾಯಚೂರು- 237

    ಶಿವಮೊಗ್ಗ – 307

    ದಕ್ಷಿಣ ಕನ್ನಡ – 152

    ತುಮಕೂರು – 307

    ಅಫಜಯಪುರ – 754

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts