More

    10 ಮೀಟರ್​ನಲ್ಲಿ 13 ವಿದ್ಯುತ್ ಕಂಬ !

    ಸಂಜೀವಕುಮಾರ ಜುನ್ನಾ ಹುಮನಾಬಾದ್
    ಬಡಾವಣೆ ರಸ್ತೆ ಆವರಿಸಿದ ವಿದ್ಯುತ್ ಕಂಬಗಳು, ಜೋತು ಬಿದ್ದ ತಂತಿಗಳು, ಜೀವಭಯದಲ್ಲಿ ಜನರ ಓಡಾಟ, ವಾಹನ ಸಂಚಾರಕ್ಕೆ ಸಂಚಕಾರ… ಇದು ಪಟ್ಟಣದ ಪ್ರಮುಖ ಬಡಾವಣೆಯಾದ ಬಸವನಗರದಲ್ಲಿನ ಚಿತ್ರಣ.

    ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ ಚಿದ್ರಿ ಬೈಪಾಸ್ವರೆಗಿನ ಮುಖ್ಯ ರಸ್ತೆಯಲ್ಲಿ ಬರುವ ಗಾದಾ ಪೆಟ್ರೋಲ್ ಬಂಕ್ ಪಕ್ಕದಿಂದ ಬಸವನಗರ ಬಡಾವಣೆಗೆ ಹೋಗುವ ಆರಂಭದ ಸಿಸಿ ರಸ್ತೆಯ 10 ಮೀಟರ್ ಅಂತರದಲ್ಲಿ 13 ವಿದ್ಯುತ್ ಕಂಬಗಳಿದ್ದು, ಜನರ ಮತ್ತು ವಾಹನ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.

    ಸದಾ ಜನಸಂಚಾರದಿಂದ ಕೂಡಿರುವ ಈ ಪ್ರದೇಶದಲ್ಲಿ ವಾಹನಗಳ ಓಡಾಟ ಕೂಡ ಹೆಚ್ಚಾಗಿರುತ್ತದೆ. ಈ ಹತ್ತು ಮೀಟರ್ ರಸ್ತೆ ದಾಟಲು ವಾಹನ ಸವಾರರು ಸರ್ಕಸ್ ಮಾಡಲೇಬೇಕು. ಇನ್ನೊಂದೆಡೆ ಸಾರ್ವಜನಿಕರು ಜೀವಭಯದಲ್ಲಿ ಓಡಾಡುವಂಥ ಸ್ಥಿತಿ ಇದೆ. ರಸ್ತೆ ಮಧ್ಯೆಯೇ 6 ಕಂಬಗಳಿವೆ ! ಸಿಸಿ ರಸ್ತೆ ಕಾಮಗಾರಿ ಸಂದರ್ಭದಲ್ಲೂ ಕಂಬಗಳ ಬಗ್ಗೆ ಯಾವ ಅಧಿಕಾರಿಯೂ ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

    ಅನಗತ್ಯವಿರುವ ಕಂಬಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಜೆಸ್ಕಾ ಅಧಿಕಾರಿಗಳು ಮತ್ತು ಪುರಸಭೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷೃದಿಂದ ಸ್ಥಳೀಯರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

    ಕೆಲ ಕಂಬಗಳಿಗೆ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇವು ತುಂಡಾಗಿ ಬೀಳಬಹುದು ಅಥವಾ ವಾಹನಗಳಿಗೆ ತಾಗಿ ಅನಾಹುತ ಸಂಭವಿಸಬಹುದಾಗಿದೆ. ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಿವಾಸಿಗಳ ಒಕ್ಕೊರಲ ಒತ್ತಾಯವಾಗಿದೆ.

    ಸವನಗರ ಬಡಾವಣೆ ಪ್ರಮುಖ ರಸ್ತೆಯೊಂದರಲ್ಲಿ 11-13 ವಿದ್ಯುತ್ ಕಂಬಗಳಿರುವುದರಿಂದ ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಬಡಾವಣೆ ಜನರ ದೂರಿನ ಮೇರೆಗೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತವಾಗಿ ಸೂಚಿಸಲಾಗಿದೆ.
    | ಸವಿತಾ ಅಶೋಕ ಸೊಂಡೆ, ಪುರಸಭೆ ಸದಸ್ಯೆ

    ಸವನಗರ ಬಡಾವಣೆ ಪ್ರಮುಖ ರಸ್ತೆಯೊಂದರಲ್ಲಿ 13 ವಿದ್ಯುತ್ ಕಂಬಗಳು ಇರುವುದು ಗಮನಕ್ಕೆ ಬಂದಿಲ್ಲ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು.
    | ಸಂಜೀವಕುಮಾರ, ಎಇಇ ಜೆಸ್ಕಾಂ ಹುಮನಾಬಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts