More

    ತುಂಗಭದ್ರಾ ನದಿಗೆ 1.29 ಲಕ್ಷ ಕ್ಯೂಸೆಕ್ ನೀರು

    ಮುಂಡರಗಿ: ತುಂಗಭದ್ರಾ ನದಿ ಪಾತ್ರದ ಚಿಕ್ಕಮಗಳೂರ, ಶಿವಮೊಗ್ಗ ಮೊದಲಾದೆಡೆ ಭಾರಿ ಮಳೆ ಸುರಿಯುತ್ತಿರುವುದರಿಂದ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಗಿ ಸಮೀಪದ ಸಿಂಗಟಾಲೂರ ಬ್ಯಾರೇಜ್​ನ 26 ಗೇಟ್​ಗಳ ಪೈಕಿ 22 ಗೇಟ್​ಗಳಿಂದ ಶನಿವಾರ 1,29,854 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದ್ದು ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ.

    ಬ್ಯಾರೇಜ್ ಹಿನ್ನೀರಿನಿಂದ ಮುಳುಗಡೆ ಪ್ರದೇಶಕ್ಕೆ ಒಳಪಡುವ ವಿಠಲಾಪುರ, ಬಿದರಳ್ಳಿ, ಗುಮ್ಮಗೋಳ ಹಾಗೂ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಇನ್ನೂ ಸ್ಥಳಾಂತರಗೊಳ್ಳದ ಕಾರಣ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬ್ಯಾರೇಜ್​ನಿಂದ ಅಪಾರ ಪ್ರಮಾಣ ನೀರು ಹೊರಬಿಡುತ್ತಿರುವುದರಿಂದ ನದಿ ಪಾತ್ರದ ಕೆಲವು ಜಮೀನುಗಳಲ್ಲಿನ ಭತ್ತದ ಬೆಳೆಗೆ ನೀರು ನುಗ್ಗಿದ್ದು, ಕೆಲವೆಡೆ ಪಂಪ್​ಸೆಟ್ ಮೋಟರ್​ಗಳು ಮುಳುಗಿವೆ.

    ಶಿಂಗಟಾಲೂರು ಬ್ಯಾರೇಜ್​ಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದುಬಂದರೆ ಬ್ಯಾರೇಜ್ ಹಿನ್ನೀರಿನ ಮುಳುಗಡೆ ಗ್ರಾಮಗಳ ಜತೆಗೆ ತುಂಗಭದ್ರಾ ನದಿಪಾತ್ರದ ಹಮ್ಮಿಗಿ, ಶಿಂಗಟಾಲೂರು, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ ಮೊದಲಾದ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಎರಡು ವರ್ಷಗಳ ಹಿಂದೆ ಸುಮಾರು 1.50 ಲಕ್ಷದಿಂದ 2.50 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ಕೆಲವು ಗ್ರಾಮಗಳು ಪ್ರವಾಹ ಸಮಸ್ಯೆ ಎದುರಿಸಿದ್ದವು. ಈಗ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

    ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಪ್ರವಾಹ ಸಮಸ್ಯೆ ಎದುರಾಗುವಂತಹ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಕುರಿತು ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

    | ಆಶಪ್ಪ ಪೂಜಾರಿ, ತಹಸೀಲ್ದಾರ್, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts