More

    ಹ್ಯೂಮ್ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ

    ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್‌ನಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ 63ನೇ ಫಲಪುಷ್ಟ ಪ್ರದರ್ಶನಕ್ಕೆ ಶುಕ್ರವಾರ ಸಂಸದೆ ಮಂಗಲ ಅಂಗಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ದರ್ಶನ್ ಎಚ್.ವಿ.ಚಾಲನೆ ನೀಡಿದರು.

    ಮೂರು ದಿನಗಳ ಕಾಲ ಜರುಗಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ದಿ.ಪುನೀತ್ ರಾಜಕುಮಾರ್ ಹಾಗೂ ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ಸೇರಿ ಎಲ್ಲ ಬಗೆಯ ಕಲಾಕೃತಿಗಳು, ಸಾವಿರಾರು ಹೂವುಗಳು ಜನರ ಗಮನ ಸೆಳೆಯುತ್ತಿವೆ. ಒಂದಕ್ಕಿಂತ ಮತ್ತೊಂದು ನೋಡುಗರ ಕಣ್ಮನ ತಣಿಸುತ್ತಿವೆ. ವಿವಿಧ ಬಗೆಯ ಹೂವಿನ ಪ್ರತಿಕೃತಿಗಳು, ಚಂದ್ರಾಯನ ಮಾದರಿಯ ಆಕರ್ಷಣೀಯವಾಗಿವೆ.

    ಈ ವರ್ಷ 63ನೇ ಫಲಪುಷ್ಟ ಪ್ರದರ್ಶನದಲ್ಲಿ ಪ್ರಗತಿಪರ ರೈತರು ಬೆಳೆದ ವಿಶೇಷ ಗುಣಮಟ್ಟ ಹೊಂದಿರುವ ತರಕಾರಿ, ಹಣ್ಣು, ಹೂವು, ಸಾಂಬಾರು ಹಾಗೂ ಪ್ಲಾಂಟೇಶನ್ ಬೆಳೆ ಪ್ರದರ್ಶಿಸಲಾಗಿದೆ. ಸಾರ್ವಜನಿಕರ ಆಕರ್ಷಣೆಗೆ ಹುಬ್ಬಳ್ಳಿಯ ಕಲಾವಿದ ಶಿವಲಿಂಗಪ್ಪ ಬಡಿಗೇರ ಅವರು ವಿವಿಧ ಹೂವಿನಿಂದ ಮತ್ಸಕನ್ಯೆ, ರೈತ ಮತ್ತು ಜೋಡಿ ಎತ್ತು, ಮಿಕ್ಕಿ ಮೌಸ್ ಹಾಗೂ ನವಿಲು ಕಲಾಕೃತಿ ನಿರ್ಮಿಸಿದ್ದಾರೆ. ಗಾಜಿನ ಕಲೆ, ಹೂವು ಜೋಡಣೆ, ಕುಂಡಗಳ ಜೋಡಣೆ, ವಿದೇಶಿ ಹೂವುಗಳ ಪ್ರದರ್ಶನ, ಬೋನ್ಸಾಯ ಪ್ರದರ್ಶನ, ಕಟ್ ಹೂವುಗಳ ಪ್ರದರ್ಶನ, ತರಕಾತಿ, ಹಣ್ಣು ಕೆತ್ತನೆ ಪ್ರದರ್ಶಿಸಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ 20ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಿಂಡಿ-ತಿನಿಸುಗಳು ಹಾಗೂ 15ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಬಗೆಯ ಬಟ್ಟೆಗಳ ಮಾರಾಟ ನಡೆದಿದೆ.

    ನ.20ರ ವರೆಗೆ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ 6.30ರಿಂದ ರಾತ್ರಿ 8 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ನ.19ರಂದು ಬೆಳಗ್ಗೆ 11ಗಂಟೆಗೆ ಕೈತೋಟ ಮತ್ತು ತಾರಸಿ ತೋಟ ಹಾಗೂ ಅಣಬೆ ಕೃಷಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರೈತರು, ಸಾರ್ವಜನಿಕರು ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಸಂಘದ ಗೌರವ ಕಾರ್ಯದರ್ಶಿವಿ.ಎಚ್.ಲೇಂಗಡೆ, ಅರ್ಜುನ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts