More

    ಹೋಮ್‌ಸ್ಟೇ ಆರಂಭಿಸಿ ಆದಾಯ ಗಳಿಸಿ

    ಉಗರಗೋಳ: ಅಸಂಖ್ಯಾತ ಭಕ್ತರು, ಪ್ರವಾಸಿಗರನ್ನು ಹೊಂದಿದ ಯಲ್ಲಮ್ಮನಗುಡ್ಡದ ಮಡಿಲಲ್ಲೇ ಉಗರಗೋಳ ಗ್ರಾಮವಿದೆ. ಇಲ್ಲಿ ಹೋಮ್ ಸ್ಟೇ ಆರಂಭಿಸಿದರೆ ಕೈತುಂಬ ಆದಾಯ ಗಳಿಸಬಹುದು. ಈ ದಿಸೆಯಲ್ಲಿ ಗ್ರಾಮಸ್ಥರು ಹೆಜ್ಜೆ ಇರಿಸಬೇಕು. ಹೋಮ್‌ಸ್ಟೇ ಆರಂಭಿಸಲು ಮುಂದೆ ಬಂದರೆ ವಾರದೊಳಗೆ ಲೈಸೆನ್ಸ್ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ಗ್ರಾಮದ ರೇ.ಹ.ಹಳಮನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದು ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿಗಳನ್ನು ಬಸವೇಶ್ವರ ವೃತ್ತದ ಬಳಿ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು. ಮಹಿಳೆಯರ ಕುಂಭಮೇಳ, ಜಾನಪದ ಕಲಾವಿದರ ಡೊಳ್ಳು ಮೇಳ ಕಣ್ಮನ ಸೆಳೆಯಿತು. ಜನರ ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ದು ಸ್ಥಳೀಯವಾಗಿ ಅವರ ಸಮಸ್ಯೆ ಪರಿಹರಿಸಬೇಕು ಎಂಬ ಆಶಯದಂತೆ ಜಿಲ್ಲಾಧಿಕಾರಿ ಉಗರಗೋಳ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

    300 ಜನರಿಗೆ ನಿವೇಶನ: ನಮಗೆ ವಾಸಕ್ಕೆ ಮನೆಯಿಲ್ಲ. ಹಾಗಾಗಿ ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದು ಕೆಲವರು ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಡಿಸಿ, ಉಗರಗೋಳ ಗ್ರಾಮದ ಒಟ್ಟು 299 ಜನರಿಗೆ ನಿವೇಶನ ಇಲ್ಲ. ಅವರಿಗೆ ನಿವೇಶನ ಒದಗಿಸಲು ಗ್ರಾಮದ ಸಮೀಪದಲ್ಲಿ ಹತ್ತು ಎಕರೆ ಜಮೀನು ಗುರುತಿಸಬೇಕು. ಗ್ರಾಪಂನಿಂದ ಜಮೀನು ಕೋರಿ ಠರಾವು ಪಾಸ್ ಕಳಿಸಿದರೆ ಆಶ್ರಯ ಯೋಜನೆಯಡಿ ಗ್ರಾಪಂಗೆ ಹತ್ತು ಎಕರೆ ಜಮೀನು ಒದಗಿಸಬಹುದು ಎಂದರು. ಎನ್.ಎ. ಹಾಗೂ ಕೆ.ಜೆ.ಪಿ. ಪಡೆಯದೇ ನಿವೇಶನಗಳನ್ನು ಮಾರಾಟ ಮಾಡಿರುವುದು ಕಂಡುಬಂದರೆ ಅಂತಹವರಿಗೆ ನೋಟಿಸ್ ನೀಡಿ, ಸದರಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

    ಸಾರ್ವಜನಿಕರ ಅಹವಾಲುಗಳು: ಕೃಷಿ ಉತ್ಪನ್ನ ಸಾಗಣೆಗೆ ಹೊಲದ ರಸ್ತೆ, ಹಳ್ಳದ ರಸ್ತೆ ನಿರ್ಮಾಣ, ಅಡುಗೆ ಸಿಬ್ಬಂದಿ ವೇತನ ಹೆಚ್ಚಳ, ಜಮೀನು ಒತ್ತುವರಿ ಮಾಡಿ ಜನತಾ ಮನೆ ನಿರ್ಮಾಣ, ಜನತಾ ಮನೆ ಮಂಜೂರು ಅರ್ಜಿ, ಅಂಗವಿಕಲರ ಮಾಸಾಶನ ಮತ್ತಿತರ ವಿಷಯಗಳ ಕುರಿತು ಜನರು ಅಹವಾಲು ಸಲ್ಲಿಸಿದರು. ಕೆಲ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಒದಗಿಸಿದರು.
    ಹಳ್ಳದ ಹೂಳು ತೆಗೆಯಲು ಸೂಚನೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್ ಮಾತನಾಡಿ, ನರೇಗಾ ಯೋಜನೆಯಡಿ ಹಳ್ಳದ ಹೂಳು ತೆಗೆಯುವ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ ನಿವೇಶನ ಹೊಂದಿ ಮನೆಗಳು ಇಲ್ಲದಿರುವವರ ಪಟ್ಟಿಯನ್ನು ಜಿಲ್ಲಾ ಪಂಚಾಯತ್‌ಗೆ ಕಳುಹಿಸಿಕೊಡುವಂತೆ ತಿಳಿಸಿದರು. ವಿವಿಧ ಬಗೆಯ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಆದೇಶಪತ್ರಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ವಿತರಿಸಿದರು. ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ಸೈಕಲ್ ವಿತರಿಸಿದರು.
    ಗ್ರಾಪಂ ಅಧ್ಯಕ್ಷೆ ಜುಬೇದಾ ಬೇಗಂ ಬಾರಿಗಿಡದ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ತಹಸೀಲ್ದಾರ್ ಜಕ್ಕನಗೌಡ್ರ, ಬಿಇಒ ಶ್ರೀಶೈಲ ಕರೀಕಟ್ಟಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಸಂಗನಗೌಡ ಹಂದ್ರಾಳ, ತಾಲೂಕು ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ, ಸವದತ್ತಿ ಯಲ್ಲಮ್ಮ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚಿನ್ನಣ್ಣವರ, ಸಾರಿಗೆ ಸಂಸ್ಥೆಯ ಸವದತ್ತಿ ಘಟಕ ವ್ಯವಸ್ಥಾಪಕ ಜಿ.ಎಂ.ಗಣೇಶ, ಸಿಪಿಐ ಜೆ.ಕರುಣೇಶ್‌ಗೌಡ ಇತರರಿದ್ದರು.

    ಬಾರ್‌ಗೆ ನುಗ್ಗಿ ಬಾಗಿಲು ಬಂದ್

    ಉಗರಗೋಳ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕಾರಿನಿಂದ ಇಳಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ನೇರವಾಗಿ ಪಕ್ಕದಲ್ಲೇ ಇದ್ದ ಎರಡು ಮದ್ಯದಂಗಡಿಗಳಿಗೆ ತೆರಳಿದರು. ಲೈಸೆನ್ಸ್ ಲಭ್ಯವಿರುವ ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಕೈಗೊಂಡರು. ಖುದ್ದಾಗಿ ಕೆಲವು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಅವುಗಳ ಗುಣಮಟ್ಟ ಪರಿಶೀಲಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು. ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದಲ್ಲಿರುವ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು. ಅವರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಸದ್ಯಕ್ಕೆ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದ್ದು, ನಿಯಮಗಳ ಉಲ್ಲಂಘನೆಯ ಕುರಿತು ಕೂಲಂಕಷವಾಗಿ ಪರಿಶೀಲನೆ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

    ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಇರುವ 250 ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ದೇವಸ್ಥಾನದ ಆದಾಯ ಹೆಚ್ಚಿಸುವುದರ ಜತೆಗೆ ಭಕ್ತಾಧಿಗಳಿಗೆ ಮೂಲಸೌಕರ್ಯ ಒದಗಿಸುವುದು ಸಾಧ್ಯವಾಗಲಿದೆ. ಈ ವ್ಯಾಪಾರ ಮಳಿಗೆಗಳನ್ನು ಉಗರಗೋಳ ಗ್ರಾಮದ ಜನರಿಗೂ ನೀಡಲಾಗುವುದು.
    | ನಿತೇಶ ಪಾಟೀಲ ಡಿ.ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts