More

    ಹೊಸ ವರ್ಷ 2024ಕ್ಕೆ ಸಂಭ್ರಮದ ಸ್ವಾಗತ -ಬೇಕರಿ, ರೆಸ್ಟೋರೆಂಟ್‌ ಹೌಸ್ಫುಲ್ -ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ 

    ದಾವಣಗೆರೆ: ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಹೊಸ ವರ್ಷ 2024ರ ಸ್ವಾಗತದ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆ ಊಟ, ಮನರಂಜನಾ ಕೂಟ, ಕೇಕ್ ಕತ್ತರಿಸುವ ಮೂಲಕ ಜನರು ನೂತನ ವರ್ಷವನ್ನು ಬರಮಾಡಿಕೊಂಡರು.
    ಈ ಬಾರಿ ರೂಪಾಂತರಿ ಕೋವಿಡ್‌ನ ಸಣ್ಣ ಆತಂಕವಿದ್ದರೂ ಹೊಸ ವರ್ಷಾಚರಣೆಗೆ ಸಾಮಾಜಿಕ ನಿರ್ಬಂಧ ಇರಲಿಲ್ಲ. ಹೀಗಾಗಿ ಮನೆಯ ತಾರಸಿ, ಹಾಸ್ಟೆಲ್‌ಗಳಲ್ಲದೇ ಅಪಾರ್ಟ್‌ಮೆಂಟ್, ಹೋಟೆಲ್, ಕ್ಲಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಡಾಬಾ, ತೋಟದ ಮನೆ ಇತ್ಯಾದಿಗಳಲ್ಲಿ ಭರ್ಜರಿ ಸಂಭ್ರಮಾಚರಣೆ ಕಂಡುಬಂದಿತು.
    ಹಿರಿಯರು ಕುಟುಂಬಸ್ಥರು, ಸ್ನೇಹಿತರಿಗೆ ಕರೆ ಮಾಡಿ, ವಾಟ್ಸಾೃಪ್ ಸಂದೇಶದ ಮೂಲಕ ಶುಭಾಶಯ ಹೇಳಿದರು. ಯುವಕರು ಗೆಳೆಯರೊಂದಿಗೆ ಸೇರಿ ಬೆಳಗ್ಗಿನಿಂದಲೇ ಮದ್ಯ ಸಂಗ್ರಹದ ತಯಾರಿಯಲ್ಲಿದ್ದರು. ರಾತ್ರಿ 8ರ ನಂತರದಲ್ಲಿ ಹೋಟೆಲ್‌ಗಳಲ್ಲಿ ಜನಸಂದಣಿ ಹೆಚ್ಚಿತ್ತು. ಕೇಕ್‌ಗಳಿಗೆ ಬೇಡಿಕೆ
    ಹೊಸ ವರ್ಷಕ್ಕಾಗಿ ಬೇಕರಿಗಳೆಲ್ಲ ಕೇಕ್‌ಗಳಿಂದ ತುಂಬಿ ತುಳುಕುತ್ತಿದ್ದವು. ಸಾರ್ವಜನಿಕರು ಸಂಜೆಯಿಂದಲೇ ಖರೀದಿಗಾಗಿ ಮುಗಿಬಿದ್ದರು. ಅರ್ಧ ಕೆಜಿಯಿಂದ ಹಿಡಿದು 4 ಕೆಜಿ ವರೆಗಿನ ತೂಕದ ತರಹೇವಾರಿ ಕೇಕ್‌ಗಳು ಮಾರಾಟವಾದವು.
    ದಾವಣಗೆರೆ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಬೇಕರಿಗಳ ಸಂಖ್ಯೆ ಏರಿಕೆಯಾಗಿದೆ. ಹೊಸ ವರ್ಷಕ್ಕೆ ಹೆಚ್ಚಿನ ವ್ಯಾಪಾರ ನಿರೀಕ್ಷೆಯಿಂದಲೇ ಹೆಚ್ಚಿನ ಕೇಕ್ ತಯಾರಿಸಿ, ಮಾರುವಲ್ಲಿಯೂ ಸ್ಪರ್ಧೆ ಹೆಚ್ಚಿದೆ. ಈ ಬಾರಿಯೂ ಸಣ್ಣ ಬೇಕರಿಗಳ ಎದುರು ಶಾಮಿಯಾನ ಹಾಕಿ ನವನವೀನ ಮಾದರಿಯ ಕೇಕ್‌ಗಳನ್ನು ಪ್ರದರ್ಶಿಸಲಾಗಿತ್ತು.
    ಸಾಮಾನ್ಯ ಕೇಕ್ ತಲಾ ಕೆಜಿಗೆ 300- 320 ರೂ. ಇದ್ದರೆ ಕೂಲ್ಡ್ ಕೇಕ್‌ಗಳ ದರ 400 ರೂ.ನಿಂದ 700 ರೂ.ವರೆಗೆ ಇತ್ತು. ಜನರು ತಮ್ಮಿಷ್ಟದ ಫ್ಲೇವರ್, ವಿನ್ಯಾಸ ಹಾಗೂ ಬಣ್ಣದ ಕೇಕ್‌ಗಳನ್ನು ಬಾಕ್ಸ್‌ಗಳಲ್ಲಿ ತೆಗೆದುಕೊಂಡು ಹೋದರು. ಜತೆಗೆ ತಂಪು ಪಾನೀಯಕ್ಕೂ ಬೇಡಿಕೆಯಿತ್ತು. ಸಾಮಾನ್ಯ ದಿನಕ್ಕಿಂತ ಮೂರು ಪಟ್ಟು ವ್ಯಾಪಾರ ಹೆಚ್ಚಿದ್ದ ಖುಷಿ ಬೇಕರಿ ಮಾಲೀಕರಲ್ಲಿತ್ತು. ಸಿಬ್ಬಂದಿಗೆ ಹೆಚ್ಚುವರಿ ಕೆಲಸದ ಹೊರೆ ಇತ್ತು. ಯುವಕರು ಪಟಾಕಿ ಖರೀದಿಯಲ್ಲೂ ಉತ್ಸಾಹ ತೋರಿದರು.
    ಸಂಸತ್ ಭವನ ದರ್ಶನ
    ನಗರದ ‘ಆಹಾರ್-2000’ ಹೋಟೆಲ್‌ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೇಕ್‌ಗಳ ಪ್ರದರ್ಶನ ಗಮನ ಸೆಳೆಯಿತು. ಏಳು ತಿಂಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ನೂತನ ಸಂಸತ್ ಭವನದ ಮಾದರಿ ಕೇಕ್‌ನಲ್ಲಿ ಅನಾವರಣವಾಯಿತು. 4 ಅಡಿ ಎತ್ತರ, 17 ಅಡಿ ವಿಸ್ತೀರ್ಣದ ಈ ವಿಶೇಷ ಕೇಕ್ ಎಲ್ಲರನ್ನು ಆಕರ್ಷಿಸಿತು. ಇದರ ಜತೆಗೆ ಗಿಟಾರ್, ಬೇಬಿ ಡಾಲ್, ಮಿಕಿಮೌಸ್, ಪಾತರಗಿತ್ತಿ ಸೇರಿ ಸಣ್ಣ ಸಣ್ಣ ಮಾದರಿಯ ಕೇಕ್‌ಗಳು ಕಣ್ಸೆಳೆದವು.
    ಸಂಸತ್ ಭವನ ಮಾದರಿಗೆ 200 ಕೆಜಿ ಸಕ್ಕರೆ ಮತ್ತು ಜಿಡ್ಡು ಬಳಸಲಾಗಿದೆ. 6 ಜನ ಕಲಾವಿದರು ಒಂದೂವರೆ ತಿಂಗಳ ಅವಧಿಯಲ್ಲಿ ಈ ಮಾದರಿ ನಿರ್ಮಿಸಿದ್ದರೆ ಎಂದು ಹೋಟೆಲ್ ಮಾಲೀಕ ಜಿ.ವಿ. ರಮೇಶ್ ತಿಳಿಸಿದರು.
    ಮದ್ಯದ ನಶೆ ಜೋರು
    ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳಲ್ಲಿ ಗ್ರಾಹಕರ ಸಂದಣಿ ಹೆಚ್ಚಿತ್ತು. ಮದ್ಯದ ಭರ್ಜರಿ ವ್ಯಾಪಾರದೊಂದಿಗೆ ಬಾರ್ ಮಾಲೀಕರು-ಸಿಬ್ಬಂದಿ ಹೊಸ ವರ್ಷಾಚರಣೆ ಮಾಡಿದರು.
    ದಾವಣಗೆರೆಯಲ್ಲಿ 104, ಜಿಲ್ಲೆಯಾದ್ಯಂತ 266 ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳಿವೆ. ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಮೊದಲೇ ಹೆಚ್ಚು ಪ್ರಮಾಣದ ಮದ್ಯವನ್ನು ದಾಸ್ತಾನು ಮಾಡಲಾಗಿತ್ತು. ಬಿಯರ್‌ಗೆ ಹೆಚ್ಚು ಬೇಡಿಕೆ ಕಂಡುಬಂದಿತು.
    ಪ್ರಥಮ ದರ್ಜೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಕೂಪನ್ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆ ಕ್ಲಬ್ ಇನ್ನಿತರ ಕಡೆಗಳಲ್ಲಿ ಸದಸ್ಯರಿಗಾಗಿ ರಸಮಂಜರಿ ಆಯೋಜಿಸಲಾಗಿತ್ತು. ಮದ್ಯದ ಅಂಗಡಿಗಳಲ್ಲಿ ಪಾರ್ಸಲ್ ಕೌಂಟರ್‌ಗಳನ್ನು ತೆರೆಯಲಾಗಿತ್ತು.
    ದಿನಂಪ್ರತಿ ಮದ್ಯದ ವಹಿವಾಟು ಸುಮಾರು 1.5 ಕೋಟಿ ರೂ. ಆಗಲಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದು ದಿನದಲ್ಲಿ ವಹಿವಬಾಟು ದುಪ್ಪಟ್ಟಾಗಲಿದೆ ಎಂಬುದು ಮದ್ಯ ಮಾರಾಟಗಾರರು ಹೇಳುವ ಮಾತು.
    ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕಾರವಾಗಿದ್ದ ಡಾಬಾಗಳು ಗ್ರಾಹಕರನ್ನು ಸೆಳೆದವು. ಜನರಿಗಾಗಿ ಹೆಚ್ಚುವರಿ ಟೇಬಲ್‌ಗಳನ್ನು ಹಾಕಲಾಗಿತ್ತು. ಅಡುಗೆ ಮಾಡುವ ಬಾಣಸಿಗರಿಗೂ ಹೊಸ ವರ್ಷ ಬೇಡಿಕೆ ಹೆಚ್ಚಿಸಿತ್ತು.
    ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೊಂಡಜ್ಜಿ ಕೆರೆ, ದೇವರಬೆಳಕೆರೆ ಚೆಕ್‌ಡ್ಯಾಂ ಮತ್ತು ಇತರೆಡೆ ಸಿಬ್ಬಂದಿ ನಿಯೋಜಿಸಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆ ತಡೆಯಲು ವಿವಿಧೆಡೆ ಚೆಕ್‌ಪೋಸ್ಟ್ ತೆರೆಯಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts