More

    ಹೊಸ ವರ್ಷಕ್ಕೆ ಗುಂಡಿನ ಗಮ್ಮತ್ತು -ಒಂದೇ ದಿನಕ್ಕೆ 3 ಕೋಟಿ ರೂ. ವಹಿವಾಟು -ಮೂರು ಪಟ್ಟು ಮಾರಾಟವಾದ ಬಿಯರ್ 

    ದಾವಣಗೆರೆ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮದ್ಯ ಮಾರಾಟ ಜೋರಾಗಿದೆ. ಭಾನುವಾರ ಒಂದೇ ದಿನದಲ್ಲಿ 3 ಕೋಟಿ ರೂ.ಗಳ ವಹಿವಾಟು ನಡೆಯಿತು. ತಡರಾತ್ರಿವರೆಗೂ ಮದ್ಯದಂಗಡಿಗಳು ತೆರೆದಿದ್ದುದು ಗುಂಡಿನ ಗಮ್ಮತ್ತು ಹೆಚ್ಚಿಸಿತ್ತು.
    ರಾಜ್ಯದ ಕೆಲವೆಡೆ ಇರುವ ರೂಪಾಂತರಿ ಕೋವಿಡ್ ನಡುವೆಯೂ ಯಾವುದೇ ಸಾಮಾಜಿಕ ನಿರ್ಬಂಧ ಇಲ್ಲದಿರುವುದೂ ಕೂಡ ಹೊಸ ವರ್ಷದ ರಂಗು ಹೆಚ್ಚಿಸಿತ್ತು. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು.
    ಸುಮಾರು 1.50 ಕೋಟಿ ರೂ. ಮೊತ್ತದಷ್ಟು ಮದ್ಯ, ದೈನಂದಿನ ವ್ಯಾಪಾರವಾಗುತ್ತದೆ. ಆದರೆ ಪೂರ್ವನಿಗದಿಯಂತೆ ವರ್ಷದ ಕೊನೆಯ ದಿನ ಅದರ ಎರಡು ಪಟ್ಟು ವಹಿವಾಟು ನಡೆಯಿತು.
    ಮಾಮೂಲಿ ದಿನಕ್ಕಿಂತ ಹೆಚ್ಚು ಬೇಡಿಕೆಯಿದ್ದ ಬಿಯರ್, ಮೂರು ಪಟ್ಟು ಬಿಕರಿಯಾಯಿತು. ಆಯ್ಕೆಯಲ್ಲಿ ವಿಸ್ಕಿ ಎರಡನೇ ಸ್ಥಾನ ಪಡೆಯಿತು. ಶೇ.22ರಷ್ಟು ದರ ಹೆಚ್ಚಳವಾಗಿದ್ದ ಸ್ಕಾಚ್‌ಗೆ ಬೇಡಿಕೆ ಕುಸಿದಿತ್ತು. ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಹೆಚ್ಚು ಪ್ರಮಾಣದ ಮದ್ಯವನ್ನು ಮುನ್ನಾ ದಿನವೇ ದಾಸ್ತಾನು ಮಾಡಲಾಗಿತ್ತು.
    ದಾವಣಗೆರೆಯ 104, ಜಿಲ್ಲೆಯಲ್ಲಿನ 266 ಬಾರ್ ಆ್ಯಂಡ್ ರೆಸ್ಟೋರೆಂಟ್, ಲಿಕ್ಕರ್ ಅಂಗಡಿಗಳಿವೆ. ಶಾಮನೂರು ರಸ್ತೆ, ವಿದ್ಯಾರ್ಥಿಭವನ, ಪಿಬಿ ರಸ್ತೆಯಲ್ಲಿನ ಸುಮಾರು 20ಕ್ಕೂ ಹೆಚ್ಚಿನ ಪ್ರಥಮ ದರ್ಜೆಯ ರೆಸ್ಟೋರೆಂಟ್‌ಗಳಲ್ಲಿ ಹಾಗೂ ನಗರದ ಕೆಲವು ಕ್ಲಬ್‌ಗಳಲ್ಲಿ ಕುಟುಂಬ ಸದಸ್ಯರು ಒಟ್ಟಿಗೆ ಸೇರಿ ಊಟ ಮಾಡಿದರು.
    ಉಳಿದ ಬಾರ್ ಆ್ಯಂಡ್ ರೆಸ್ಟೋರೆಂಟ್, ಮದ್ಯದಂಗಡಿಗಳು, ಡಾಬಾಗಳಲ್ಲಿಯೂ ಮದ್ಯದ ಬಾಟಲಿಗಳು ಹೆಚ್ಚು ಸದ್ದು ಮಾಡಿದವು. ಎಂಆರ್‌ಪಿ ಅಂಗಡಿ ಸಿಬ್ಬಂದಿಗಳಂತೂ ಬಿಡುವಿಲ್ಲದಂತೆ ವ್ಯಾಪಾರದಲ್ಲಿ ಮುಳುಗಿದ್ದರು. ಪಾರ್ಸಲ್ ಕೌಂಟರ್‌ಗಳಲ್ಲಿ ಜನಸಂದಣಿ ಇತ್ತು. ಪಾರ್ಸಲ್ ಪಡೆದವರು ಮನೆ ತಾರಸಿ, ಅತಿಥಿಗೃಹ, ಫಾರ್ಮ್‌ಹೌಸ್ ಇನ್ನಿತರೆಡೆ ಪಾರ್ಟಿ ಮಾಡಿದರು.
    ಎಲ್ಲೆಡೆ ಲಗ್ಗೆಯಿಟ್ಟ ಕೇಕ್
    ಹೊಸ ವರ್ಷಾಚರಣೆ ಎಂದರೆ ಕೇಕ್‌ಗಳದ್ದೇ ಕಾರಬಾರು. ಭಾನುವಾರ ಸಂಜೆಯಿಂದಲೇ ಕೇಕ್ ಖರೀದಿಗೆ ಹೋಟೆಲ್, ಬೇಕರಿಗಳಿಗೆ ಮಕ್ಕಳೊಂದಿಗೆ ಮುಗಿಬಿದ್ದ ಜನರು ತಮ್ಮಿಷ್ಟದ ಫ್ಲೇವರ್, ಬಣ್ಣ ಹಾಗೂ ವಿನ್ಯಾಸದ ಕೇಕ್‌ಗಳನ್ನು ಖರೀದಿಸಿ ಮನೆಗಳತ್ತ ಹೆಜ್ಜೆ ಹಾಕಿದರು. ಎಲ್ಲ ವರ್ಗದವರೂ ಕೂಡ ಕೇಕ್‌ಗಳಿಗೆ ಮಾರುಹೋದರು.
    ಒಂದು ದಿನದಲ್ಲಿ ದಾವಣಗೆರೆ ನಗರ ಒಂದರಲ್ಲೇ ಶೇ. 40ರಿಂದ 50ರಷ್ಟು ಕೇಕ್ ಮಾರಾಟವಾಗಿ ಸುಮಾರು 10 ಲಕ್ಷ ರೂ.ಗಳ ವಹಿವಾಟು ನಡೆದಿದೆ. ವರ್ಷದಿಂದ ವರ್ಷಕ್ಕೆ ಬೇಕರಿಗಳ ಸಂಖ್ಯೆ ಜತೆಗೆ ಸ್ಪರ್ಧೆ ಏರ್ಪಟ್ಟಿರುವುದೂ ಇದಕ್ಕೆ ಕಾರಣ ಎನ್ನುತ್ತಾರೆ ಕೇಕ್ ಪ್ರದರ್ಶನ ಮಾಡಿದ್ದ ಹೋಟೆಲ್, ಬೇಕರಿ ಮಾಲೀಕರು.
    ಬೇಕರಿಗಳು ಮಧ್ಯರಾತ್ರಿಯವರೆಗೂ ತೆರೆದೇ ಇದ್ದವು. ಗ್ರಾಹಕರಿಗೆಂದೇ ರಸ್ತೆಯಲ್ಲೇ ಶಾಮಿಯಾನ ಹಾಕಿ ಕೇಕ್‌ಗಳನ್ನು ಪ್ರದರ್ಶಿಸಲಾಗಿತ್ತು. ವಿಶೇಷ ಆಫರ್‌ನ ಫಲಕ ಕೂಡ ತೂಗು ಹಾಕಲಾಗಿತ್ತು. ಹೊಸ ವರ್ಷದತ್ತ ಗಡಿಯಾರದ ಮುಳ್ಳುಗಳು ಹೆಜ್ಜೆ ಹಾಕುತ್ತಿದ್ದಂತೆ ಕುಟುಂಬ ಸದಸ್ಯರು, ಸ್ನೇಹಿತರು ಕೇಕ್‌ಗಳನ್ನು ಕತ್ತರಿಸಿ ತಿನ್ನುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಹೇಳಿದರು.
    ಕೆಲವು ವೃತ್ತಗಳಲ್ಲಿ ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಧ್ಯರಾತ್ರಿ ಹೊತ್ತಿಗೆ ಕೆಲವೆಡೆ ಆಕರ್ಷಕ ಪಟಾಕಿಗಳು ಆಗಸದಲ್ಲಿ ಸದ್ದು ಮಾಡಿದವು. ರಸ್ತೆಗಳಲ್ಲಿ ಯುವಕರು ಹ್ಯಾಪಿ ನ್ಯೂ ಇಯರ್ ಎಂದು ಕೂಗು ಹಾಕುತ್ತಿದ್ದರು. ಗಾಜಿನಮನೆಯಲ್ಲೂ ಜನಜಂಗುಳಿ
    ಸೋಮವಾರವೂ ಕುಟುಂಬ ಸದಸ್ಯರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹೊಸ ವರ್ಷ ನೆಮ್ಮದಿ ನೀಡುವಂತೆ ಪ್ರಾರ್ಥಿಸಿಕೊಂಡರು. ಉದ್ಯಾನ, ಪ್ರೇಕ್ಷಣೀಯ ತಾಣಗಳಲ್ಲೂ ಜನಜಂಗುಳಿ ಕಂಡುಬಂದಿತು.
    ಗಾಜಿನಮನೆಯಲ್ಲೂ ಬೆಳಗ್ಗಿನಿಂದಲೂ ಜನಸಂದಣಿ ಹೆಚ್ಚಿತ್ತು. ಅಲ್ಲಿಯೂ ಜನರು ಕೇಕ್ ಕತ್ತರಿಸಿ ತಿನ್ನುವ ಮೂಲಕ ಸಂಭ್ರಮಿಸಿದರು. ಸಂಜೆ ಮ್ಯೂಸಿಕಲ್ ಫೌಂಟೇನ್‌ನ ವಿಶೇಷ ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೊಸ ವರ್ಷಕ್ಕೆ ಇಲ್ಲಿಗೆ 3700 ಜನರು ಭೇಟಿ ಮಾಡಿದ್ದಾಗಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.

    ಹೊಸ ವರ್ಷದ ಹಿನ್ನಲೆಯಲ್ಲಿ ಮದ್ಯದಂಗಡಿಗಳಲ್ಲಿ ಹೆಚ್ಚಿನ ಜನರಿದ್ದರು. ಒಂದು ದಿನದಲ್ಲಿ ದುಪ್ಪಟ್ಟು ಮದ್ಯದ ವ್ಯಾಪಾರ ಆಗಿದೆ. ಜನರ ಗದ್ದಲದ ಹೆದರಿಕೆಯಿಂದಾಗಿ ಕೆಲವು ಅಂಗಡಿಗಳು ಒಂದು ದಿನ ಬಂದ್ ಆಗಿದ್ದವು.
    ಜೆ. ಈಶ್ವರ ಸಿಂಗ್ ಕವಿತಾಳ
    ಮದ್ಯ ಮಾರಾಟಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

    2022ರ ಡಿಸೆಂಬರ್‌ನಲ್ಲಿ ಒಟ್ಟು 162678 ಪೆಟ್ಟಿಗೆ ಮದ್ಯ, 90553ಪೆಟ್ಟಿಗೆ ಬಿಯರ್ ಎತ್ತುವಳಿಯಾಗಿತ್ತು. 2023ರ ಡಿಸೆಂಬರ್‌ನಲ್ಲಿ 164562 (1884 ಹೆಚ್ಚುವರಿ) ಪೆಟ್ಟಿಗೆಗಳ ಮದ್ಯ, 90553 (7880 ಹೆಚ್ಚುವರಿ) ಪೆಟ್ಟಿಗೆ ಬಿಯರ್ ಎತ್ತುವಳಿಯಾಗಿದೆ.
    ಆರ್.ಎಸ್. ಸ್ವಪ್ನಾ
    ಅಬಕಾರಿ ಇಲಾಖೆ ಉಪಾಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts