More

    ಮುಂದಿನ ಚುನಾವಣೆಯಲ್ಲೂ ಅತಂತ್ರ ಸಾಧ್ಯತೆ ಜನರ ನಾಡಿಮಿಡಿತ ಅರಿಯಲು ಸಮೀಕ್ಷೆ

    ಹೊಸಪೇಟೆ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನರ ಸಮಸ್ಯೆಗಳು, ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಜನಪರ ಆಡಳಿತ ಗೌಣವಾಗುತ್ತಿದ್ದು, ಕೇವಲ ಕೋಮುವಾದ, ಸಾಮಾಜಿಕ ಶಾಂತಿ ಕದಡುವ ಮೂಲಕ ಚುನಾವಣೆ ಎದುರಿಸಲಾಗುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳ ಬಗ್ಗೆ ಜನರ ಹೆಚ್ಚಿನ ಭರವಸೆ ತೊರೆದಿದ್ದು, ಹೊಸ ವ್ಯವಸ್ಥೆಯತ್ತ ಒಲುವು ತೋರುತ್ತಿದ್ದಾರೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಸಮಾಜವಾದಿ ವೇದಿಕೆ ಸಂಚಾಲಕ ಡಾ. ಪ್ರಕಾಶ್ ಕಮ್ಮರಡಿ ಹೇಳಿದರು.
    ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ. ಈ ಬಾರಿಯೂ ಕೆಲ ಪಕ್ಷಗಳು ಕೋಮುವಾದದ ನೆಪದಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಹಗಲು ಗನಸು ಕಾಣುತ್ತಿದ್ದು, ಅದಕ್ಕೆ ಮತದಾರರು ಮಣೆ ಹಾಕುವುದಿಲ್ಲ. ಮುಕ್ತ ಮತದಾನ, ಸಮರ್ಥ ಸರ್ಕಾರದ ಪರಿಕಲ್ಪನೆಯೊಂದಿಗೆ ರಾಜ್ಯದ 25 ಜಿಲ್ಲೆಗಳಲ್ಲಿ ವಿವಿಧ ಜಾತಿ, ವರ್ಗ ಹಾಗೂ ವಯೋಮಾನ ಸೇರಿ 1 ಸಾವಿರ ಜನರನ್ನು ಸಂದರ್ಶಿಸಲಾಗಿದೆ. ಅವರಿಗೆ ಕೆಲ ಪ್ರಶ್ನಾವಳಿಗೆ ಉತ್ತರ ಪಡೆಯುವ ಮೂಲಕ ಜನರ ಮನದ ಇಂಗಿತ ಅರಿಯುವ ಪ್ರಯತ್ನ ನಡೆಸಿದ್ದೇವೆ. ಸುಳ್ಳು ಭರವಸೆ, ಕೋಮು ಸಂಘರ್ಷ, ಭ್ರಷ್ಟಾಚಾರ ರಹಿತ ಹೊಸ ಬಗೆಯ ನಾಯಕರನ್ನು ರಾಜ್ಯದ ಜನ ನಿರೀಕ್ಷಿಸುತ್ತಿದ್ದಾರೆ ಎಂದರು.

    ಸಾಮಾಜಿಕ ಸಾಮರಸ್ಯ, ಮುಕ್ತ ಮತದಾನ, ಸ್ವಚ್ಛ ಆಡಳಿತದ ವಿಚಾರಗಳಲ್ಲಿ ಸ್ಪಷ್ಟ ಭರವಸೆ ಇಲ್ಲ. ಸಮೀಕ್ಷೆಯಲ್ಲಿ ಬಿಜೆಪಿ ಪರ ಶೇ.20, ಕಾಂಗ್ರೆಸ್ ಶೇ.25, ಜೆಡಿಎಸ್ ಶೇ.16, ಇತರರ ಶೇ.2 ರಷ್ಟು ಒಲವು ವ್ಯಕ್ತಪಡಿಸಿದ್ದರೆ, ಶೇ.27 ರಷ್ಟು ಜನರ ನಿಲುವು ನಿಗೂಢವಾಗಿದೆ. ಅವರಲ್ಲಿ ಅನೇಕರು ಎಎಪಿಯಂಥ ಹೊಸ ಪಕ್ಷ, ನಾಯಕತ್ವವನ್ನು ಬಯಸುತ್ತಿದ್ದಾರೆ.

    ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ, ಸಮರ್ಥ ಆಡಳಿತ ಯಾವ ಪಕ್ಷದಿಂದ ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಪರ ಶೇ.13, ಕಾಂಗ್ರೆಸ್‌ಗೆ ಶೇ.11, ಎಎಪಿ ಶೇ.22, ಜೆಡಿಎಸ್ ಶೇ.21, ಹೊಸ ರಂಗಕ್ಕೆ ಶೇ.34 ಹಾಗೂ ಸಮರ್ಥ ನಾಯಕರು ಯಾರು ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಶೇ.30, ಬಿ.ಎಸ್.ಯಡಿಯೂರಪ್ಪ ಪರ ಶೇ.26, ಹೊಸಬರು ಶೇ.70 ಮತ್ತು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಶೇ.70, ಡಿ.ಕೆ.ಶಿವಕುಮಾರ್ ಅಥವಾ ಹೊಸಬರಿಗೆ ಶೇ.35 ರಷ್ಟು ಜನ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

    ಆಯಾ ಪಕ್ಷಗಳು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಚುನಾವಣೆ ಎದುರಿಸಿದರೆ ಮತದಾರರ ಮನ ಗೆಲ್ಲಲ್ಲು ಸಾಧ್ಯವಾಗುತ್ತದೆ ಎಂಬ ಸಲಹೆಯೊಂದಿಗೆ ಎಲ್ಲ ರಾಜಕೀಯ ಪಕ್ಷಗಳಿಗೆ ಅಧ್ಯಯನ ವರದಿ ಸಲ್ಲಿಸಲಾಗಿದೆ. ಕೆಲವರು ಚರ್ಚೆಗೆ ಆಹ್ವಾನಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts