More

    ಹೊಳೆಹೊನ್ನೂರಿನಲ್ಲಿ ಸಾಹಿತ್ಯ ಜಾತ್ರೆ; ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

    ಹೊಳೆಹೊನ್ನೂರು: ಕನ್ನಡ ಭಾಷೆ ಉಳಿಸಲು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ಮಾತೃಭಾಷೆಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡಬೇಕು. ಜತೆಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಕೊಡಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಜಂಬರಘಟ್ಟ ಟಿ.ಮಂಜಪ್ಪ ಪ್ರತಿಪಾದಿಸಿದರು.
    ಪಟ್ಟಣದ ವಿವೇಕಾನಂದ ಲಯನ್ಸ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊಳೆಹೊನ್ನೂರು ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತರ ಭಾಷೆಗಳನ್ನು ಕಲಿಯುವುದರ ಜತೆಗೆ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ನೆಲ ಜಲ ಪೋಷಿಸಿ ಬೆಳೆಸಲು ದೀಕ್ಷೆ ತೊಡಬೇಕು ಎಂದರು.
    ಶಾಲಾ ಮಟ್ಟದಲ್ಲಿ ಕ್ರಿಯಾಶೀಲ ಸಾಹಿತ್ಯ ಸಂಘವನ್ನು ರಚಿಸಿ, ಪಾಲಕರು ಹಾಗೂ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ಗ್ರಾಮಗಳನ್ನು ನಿರ್ಮಲ ಗ್ರಾಮ ಎಂಬ ಘೋಷವಾಕ್ಯವಾಗದೆ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಶ್ರಮಿಸಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
    ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಅತ್ಯಂತ ಪ್ರಾಚೀನವಾಗಿದ್ದು ಶ್ರೀಮಂತಿಕೆಯಿಂದ ಕೂಡಿದೆ. ಇಂತಹ ಅಮೂಲ್ಯವಾದ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಸಮೂಹದ ಮೇಲಿದೆ ಎಂದು ಹೇಳಿದರು.
    ಬೆಳಗಾವಿ ಸೇರಿದಂತೆ ರಾಜ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಕನ್ನಡ ನೆಲ ಮತ್ತು ಭಾಷೆಯ ಮೇಲೆ ದೌರ್ಜನ್ಯವನ್ನು ಎಸೆಗುವ ಕೆಲಸವಾಗುತ್ತಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನ್ನಡ ಪರ ಸಂಘಟನೆಗಳ ಹೋರಾಟದಿಂದ ನಾಡಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ಇದೆ. ನಾಡಿನ ಜಲ ಮತ್ತು ನೆಲ ರಕ್ಷಣೆಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿದರು.
    ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಗ್ರಾಮಗಳು ಹಾಗೂ ರೈತರ ಬಗ್ಗೆ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು. ಸಾಹಿತ್ಯ ಸಮ್ಮೇಳನದ ರೈತ ಮತ್ತು ಮಹಿಳಾ ಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಗಳು ರೈತನ ಬೆನ್ನೆಲುಬು ದುರಸ್ತಿ ಆಗದಷ್ಟು ಹಾನಿ ಮಾಡಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳು ರೈತರ ವಿರುದ್ಧವಾದ ನಿಲುವನ್ನು ಹೊಂದಿದ್ದರಿಂದ ರೈತರಿಗೆ ಮಾರಕವಾಗಿವೆ. ಇದರಿಂದಾಗಿ ರೈತನ ಬೆನ್ನುಮೂಳೆ ಮುರಿಯುವ ಹಂತದಲ್ಲಿದೆ ಎಂದರು. ಸರ್ವಜ್ಞ, ಬಸವಣ್ಣ, ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕ ಮಹನೀಯರು ರೈತರ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದರು. ಇಂದಿನ ದುಬಾರಿ ದುನಿಯಾದಲ್ಲಿ ರೈತರು ವ್ಯವಸಾಯ ಮಾಡುವುದು ಕಷ್ಟವಾಗಿದ್ದು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಸಾಲಗಾರನಾಗುತ್ತಿದ್ದಾನೆ. ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿ ಕಣ್ಣೊರೆಸುವ ಬದಲು ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts