More

    ಹೊಲಬಿಕೊಂಡದಲ್ಲಿ ಗ್ರಾಪಂ ಸದಸ್ಯ ಸ್ಥಾನಗಳು ಹರಾಜು…?

    ಹಾವೇರಿ: ದಿನದಿನಕ್ಕೆ ಗ್ರಾಪಂ ಚುನಾವಣೆ ಕಾವು ಏರುತ್ತಿದೆ. ಈವರೆಗೆ ಬೇರೆ ಜಿಲ್ಲೆಗಳಲ್ಲಿ ಕಂಡುಬಂದಿದ್ದ ಸದಸ್ಯ ಸ್ಥಾನದ ಅವಿರೋಧ ಆಯ್ಕೆಯ ಹರಾಜು ಪ್ರಕ್ರಿಯೆ ಜಿಲ್ಲೆಯಲ್ಲಿಯೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

    ಹಿರೇಕೆರೂರ ತಾಲೂಕಿನ ಬುರಡಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲಬಿಕೊಂಡ ಗ್ರಾಮದಿಂದ ಅವಿರೋಧವಾಗಿ ಆಯ್ಕೆಯಾಗಲು ಅಭ್ಯರ್ಥಿಗಳ ಹರಾಜು ಪ್ರಕ್ರಿಯೆ ಗ್ರಾಮದ ದೇವಸ್ಥಾನದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಬುರಡಿಕಟ್ಟಿ ಗ್ರಾಮದಲ್ಲಿ 3 ಸದಸ್ಯ ಸ್ಥಾನಗಳಿದ್ದು, ಇದರಲ್ಲಿ 1 ಸಾಮಾನ್ಯ, 1 ಸಾಮಾನ್ಯ ಮಹಿಳೆ, 1 ಎಸ್​ಟಿ ವರ್ಗಕ್ಕೆ ಮೀಸಲಿದೆ. ಈ ಗ್ರಾಮದಲ್ಲಿ ಹಿಂದಿನ ಅವಧಿಯಲ್ಲಿ ಆಯ್ಕೆಯಾದ 3 ಸದಸ್ಯರು, ಈಗ ಆಯ್ಕೆ ಬಯಸಿ ಸ್ಪರ್ಧೆಗೆ ಇಳಿಯಲು ಮುಂದಾಗಿರುವ ಅಭ್ಯರ್ಥಿಗಳಿಗೆ ಹಣದ ಆಮಿಷ ತೋರಿಸಿ ನಾಮಪತ್ರ ಹಿಂಪಡೆಯುವಂತೆ ದುಂಬಾಲು ಬಿದ್ದಿದ್ದಾರೆ. ಅಲ್ಲದೆ, ಗ್ರಾಮದಲ್ಲಿನ ಹಿರಿಯರನ್ನು ಸೇರಿಸಿ ಸಭೆ ಮಾಡಿ ಗ್ರಾಮದ ದೇವಸ್ಥಾನದ ಅಭಿವೃದ್ಧಿಗೆ ಹಣಬೇಕು. ಗ್ರಾಮದ ಅಭಿವೃದ್ಧಿಗೆ ಯೋಜನೆಗಳನ್ನು ತರಬೇಕು. ಹೀಗಾಗಿ ನಮ್ಮನ್ನೇ ಮುಂದುವರಿಸಿದರೆ ಅನುಕೂಲವಾಗಲಿದೆ ಎಂದು ಪುಸಲಾಯಿಸಿ, 2 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ತಲಾ 3.20 ಲಕ್ಷ ರೂ. ಹಾಗೂ ಎಸ್​ಟಿ ಅಭ್ಯರ್ಥಿಗೆ 2 ಲಕ್ಷ ರೂ. ಕೊಡುವುದಾಗಿ ಬಹಿರಂಗವಾಗಿ ಹರಾಜು ನಡೆಸಿದ್ದಾರೆ ಎಂಬ ಮಾಹಿತಿಗಳು ಗ್ರಾಮಸ್ಥರಿಂದ ತಿಳಿದುಬಂದಿದೆ.

    ಆದರೂ ಇದನ್ನು ಲೆಕ್ಕಿಸದೇ ಇದೇ ಗ್ರಾಮದ ಮತ್ತೆ ಕೆಲವರು ಸ್ಪರ್ಧೆಗೆ ಇಳಿಯಲು ಕಸರತ್ತು ನಡೆಸಿದ್ದಾರೆ. ಅವರಿಗೆ ಗ್ರಾಮದ ಹಿರಿಯರಿಂದ ಒತ್ತಡ ಹಾಕಿಸುವ ಕೆಲಸವನ್ನು ಕೆಲವರು ನಡೆಸಿದ್ದಾರೆ. ವಿಷಯ ಬಹಿರಂಗವಾಗಿ ಚುನಾವಣಾಧಿಕಾರಿಗಳು ಕ್ರಮಕ್ಕೆ ಮುಂದಾದರೆ ಇನ್ನೂ ಕೆಲವರಿಂದ ನಾಮಪತ್ರ ಕೊಡಿಸಿ, ಕೊನೆಯ ದಿನವಾದ ಸೋಮವಾರ (ನ. 14) ಅವರಿಂದ ನಾಮಪತ್ರ ಮರಳಿ ತೆಗೆಸುವ ತಂತ್ರ ಹೆಣೆದಿದ್ದಾರೆ. ಇದನ್ನು ಚುನಾವಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ನಮ್ಮ ಗ್ರಾಮಕ್ಕೆ ವಿಶೇಷ ಅಧಿಕಾರಿಯನ್ನು ನೇಮಿಸಿ ವಾಸ್ತವ್ಯ ಹೂಡುವಂತೆ ಮಾಡಬೇಕು. ಗ್ರಾಮದಲ್ಲಿ ಒತ್ತಡ, ಬೆದರಿಕೆ ತಂತ್ರ ಹಾಕುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ನಾನು ಆ ಗ್ರಾಪಂಗೆ ಭೇಟಿ ಮಾಡಿದ್ದೇನೆ. ನಾಮಪತ್ರಗಳ ಸಲ್ಲಿಕೆಯೂ ನಡೆದಿದೆ. ಈ ರೀತಿಯ ಹರಾಜು ಪ್ರಕ್ರಿಯೆ ನಡೆದಿದ್ದರೆ ಲಿಖಿತ ದೂರು ನೀಡಲು ಗ್ರಾಮಸ್ಥರಿಗೆ ಸೂಚಿಸಿದ್ದೇನೆ. ಈ ಕುರಿತು ದೂರು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ.
    | ರಿಯಾಜುದ್ದೀನ್ ಬಾಗವಾನ್, ತಹಸೀಲ್ದಾರ್ ಹಿರೇಕೆರೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts