More

    ಹೊಲದಲ್ಲಿ ಯೋಧನ ಏಕಾಂತವಾಸ!

    ಗದಗ: ಒಂದು ತಿಂಗಳು ರಜೆಗೆಂದು ಊರಿಗೆ ಬಂದಿರುವ ಯೋಧರೊಬ್ಬರು ಸ್ವಂತ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಕ್ವಾರಂಟೈನ್ ಆಗಿ ಇತರರಿಗೆ ಮಾದರಿಯಾಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದ ಯೋಧ ಪ್ರಕಾಶ ಹೈಗರ್ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

    ಜು 3ರಂದು ಅರುಣಾಚಲ ಪ್ರದೇಶದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿ, ಬಸ್ ಮೂಲಕ ಜಿಲ್ಲೆಗೆ ಬಂದಿದ್ದಾರೆ. ನಿಯಮದಂತೆ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದು ವರದಿ ನೆಗೆಟಿವ್ ಬಂದಿದೆ. ಆದರೂ, ನಿಯಮಾನುಸಾರ 14 ದಿನ ಹೋಂ ಕ್ವಾರಂಟೈನ್ ಆಗಬೇಕೆಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಯೋಧ ಪ್ರಕಾಶ ಅವರದು ಅವಿಭಕ್ತ ಕುಟುಂಬ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿ ಸೇರಿ 15ಕ್ಕೂ ಹೆಚ್ಚು ಜನರಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ಗ್ರಾಮದ ಜನರಿಗೆ ತೊಂದರೆಯಾಗಬಾರದು ಎಂದು ಗ್ರಾಮದಿಂದ 2 ಕಿಮೀ ದೂರದಲ್ಲಿರುವ ಸ್ವಂತ ಜಮೀನಿನಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ವಾಸವಾಗಿದ್ದಾರೆ.

    ಪ್ರಕಾಶ ಬೆಂಗಳೂರಿನಿಂದ ಬಂದ ಕೂಡಲೇ ಮನೆಗೆ ಹಾಗೂ ಗ್ರಾಮಕ್ಕೆ ಹೋಗದೆ ನೇರವಾಗಿ ಜಮೀನಿಗೆ ಬಂದಿದ್ದಾರೆ. ಟ್ರ್ಯಾಕ್ಟರ್ ಟ್ರೇಲರ್ ಮೇಲೆ ತಾಡಪತ್ರಿ ಹಾಕಿ, ಅದರ ಸುತ್ತು ಬೇಲಿ ಹಾಕಿಕೊಂಡು ಕಳೆದ 5 ದಿನಗಳಿಂದ ತನ್ನಷ್ಟಕ್ಕೇ ತಾನೇ ದಿಗ್ಬಂಧನ ಹಾಕಿಕೊಂಡಿದ್ದಾರೆ.

    ಪ್ರಕಾಶ ಅವರು ಕಳೆದ 14 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಡಾಖ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು 30 ದಿನಗಳ ರಜೆ ತೆಗೆದುಕೊಂಡು ಗ್ರಾಮಕ್ಕೆ ಆಗಮಿಸಿದ್ದಾರೆ. ಕ್ವಾರಂಟೈನ್ ಸಮಯ ಮುಗಿದ ಬಳಿಕ ಮನೆಗೆ ತೆರಳಿ ಮಕ್ಕಳು ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

    ಗ್ರಾಮದ ಜನರಿಗೆ ನನ್ನಿಂದ ತೊಂದರೆಯಾಗಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದೇನೆ. ಜಮೀನಿನಲ್ಲಿ ವಾಸ್ತವ್ಯ ಮಾಡುತ್ತಿದ್ದು, ಮನೆಯಿಂದ ಬುತ್ತಿ ತಂದು ಕೊಂಡುತ್ತಾರೆ. ದೈಹಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಸುತ್ತಲೂ ಬೇಲಿ ಹಾಕಿಕೊಂಡು ಇನ್ನೊಬ್ಬರಿಗೆ ತೊಂದರೆ ನೀಡದೆ ಸ್ವಯಂ ಕ್ವಾರಂಟೈನ್ ಆಗಿದ್ದೇನೆ.

    | ಪ್ರಕಾಶ, ಕ್ವಾರಂಟೈನ್​ಗೊಳಗಾದ ಸೈನಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts