More

    ಹೊರ ರಾಜ್ಯಗಳಿಗೆ ಹಣ್ಣು, ತರಕಾರಿ ಸಾಗಣೆ

    ಹಾವೇರಿ: ಕೃಷಿ ಸಚಿವ ಬಿ.ಸಿ. ಪಾಟೀಲರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಉತ್ಪನ್ನಗಳನ್ನು ಅನ್ಯ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಾಗಣೆ ಪ್ರಕ್ರಿಯೆ ಆರಂಭಗೊಂಡಿದೆ.

    ಜಿಲ್ಲೆಯಲ್ಲಿ ಬೆಳೆದ 16 ಮೆಟ್ರಿಕ್ ಟನ್ ಶುಂಠಿಯನ್ನು ದೆಹಲಿಗೆ, 4ಮೆ.ಟನ್ ಶಿವಮೊಗ್ಗಕ್ಕೆ ಹಾಗೂ 2ಮೆ.ಟನ್ ಹುನಗುಂದಕ್ಕೆ ಕಳುಹಿಸಲಾಗಿದೆ. ಬ್ಯಾಡಗಿ ತಾಲೂಕಿನ ರೈತರ ಐದು ಮೆ.ಟನ್ ಶುಂಠಿಯನ್ನು ಕೋಲ್ಕತ್ತಾ ಹಾಗೂ ಉತ್ತರಪ್ರದೇಶಕ್ಕೆ ಸಾಗಿಸಲಾಗಿದೆ. ಗೋವಾ ರಾಜ್ಯಕ್ಕೆ ಐದು ಮೆಟ್ರಿಕ್ ಟನ್ ಕಲ್ಲಂಗಡಿ ಹಣ್ಣನ್ನು ಮತ್ತು ದಾವಣಗೆರೆ ಹಾಗೂ ಚಿತ್ರದುರ್ಗಕ್ಕೆ ಒಂದು ಮೆಟ್ರಿಕ್ ಟನ್ ಪೇರಲ ಹಣ್ಣನ್ನು ಕಳುಹಿಸಲಾಗಿದೆ.

    ಹಾವೇರಿ ತಾಲೂಕಿನ ರೈತರ 8ಮೆ.ಟನ್ ಹಸಿಮೆಣಸಿನಕಾಯಿಯನ್ನು ಶಿವಮೊಗ್ಗಕ್ಕೆ, ಹಿರೇಕೆರೂರು ತಾಲೂಕಿನ ರೈತರ 2ಮೆ.ಟನ್. ಟೊಮ್ಯಾಟೊವನ್ನು ಕಾರವಾರ ಮಾರುಕಟ್ಟೆಗೆ ಕಳುಹಿಸಿಕೊಡಲಾಗಿದೆ. ಹಾವೇರಿ ತಾಲೂಕಿನ ರೈತರ 8ಟನ್ ಎಲೆಕೋಸನ್ನು ಶಿವಮೊಗ್ಗ ಮಾರುಕಟ್ಟೆಗೆ, 10ಮೆ.ಟನ್ ಬದನೆಕಾಯಿಯನ್ನು ಬೆಂಗಳೂರಿಗೆ ಸಾಗಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಪ್ರದೀಪ ತಿಳಿಸಿದ್ದಾರೆ.

    ಬೆಲೆ ಕುಸಿತದಿಂದ ಹಾನಿ

    ಕೃಷಿ ಉತ್ಪನ್ನಗಳನ್ನು ಹೊರರಾಜ್ಯಗಳಿಗೆ ಸಾಗಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಎಲ್ಲೆಡೆ ಬೆಲೆ ಕುಸಿತದ ಭೀತಿಯಿಂದ ಖರೀದಿದಾರರು ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಖರೀದಿಸುತ್ತಿಲ್ಲ. ಫೆಬ್ರವರಿ ತಿಂಗಳಲ್ಲಿ ಸಿಕ್ಕ ಬೆಲೆಯೂ ಈಗ ಸಿಗುತ್ತಿಲ್ಲ. 1 ಕೆಜಿ ಟೊಮ್ಯಾಟೊವನ್ನು 3ರಿಂದ 4ರೂ.ಗೆ ಕೊಡುವಂತಾಗಿದೆ. ಹಸಿಮೆಣಸಿನಕಾಯಿ ಕೆಜಿಗೆ 15ರೂ.ಗಳ ದರವೂ ಸಿಗುತ್ತಿಲ್ಲ. ಸುಮ್ಮನೆ ಬಿಟ್ಟರೆ ಜಮೀನಿನಲ್ಲಿಯೇ ಗೊಬ್ಬರವಾಗುವ ಆತಂಕದಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುವಂತಾಗಿದೆ. ಸರ್ಕಾರ ಎಲ್ಲ ತರಕಾರಿಗಳಿಗೂ ಕನಿಷ್ಠ ದರ ನಿಗದಿಗೊಳಿಸಿ ಖರೀದಿಸಿ ಬೇರೆಡೆ ರಫ್ತು ಮಾಡಿದರೆ ಅನುಕೂಲವಾಗಲಿದೆ. ಬರೀ ರಫ್ತಿಗೆ ಅವಕಾಶ ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ ಎಂಬುದು ರೈತರ ದೂರಾಗಿದೆ.

    ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಜಿಲ್ಲೆಯ ತೋಟಗಾರಿಕಾ ಉತ್ಪನ್ನಗಳನ್ನು ದೆಹಲಿ, ಶಿವಮೊಗ್ಗ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ಕೆಲ ಉತ್ಪನ್ನಗಳನ್ನು ರೈತರೇ ನೇರವಾಗಿ ಮಾರಾಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೆಲ ರೈತರು ವ್ಯಾಪಾರಸ್ಥರ ಮೂಲಕ ಕಳಿಸಿದ್ದಾರೆ. ಕರೊನಾ ಪರಿಣಾಮ ಎಲ್ಲೆಡೆ ದರ ಕುಸಿದಿರುವುದರಿಂದ ರೈತರಿಗೆ ನಷ್ಟವಾಗುತ್ತಿರುವುದು ನಿಜ. ಕನಿಷ್ಠ ದರ ನಿಗದಿಗೊಳಿಸುವ ನಿರ್ಧಾರ ಸರ್ಕಾರದ ಹಂತದಲ್ಲಿ ಆಗಬೇಕು. ಸ್ಥಳೀಯ ಮಾರುಕಟ್ಟೆಗಿಂತ ಹೆಚ್ಚಿನ ದರ ಸಿಗುವ ಮಾರುಕಟ್ಟೆಗೆ ರೈತರ ಉತ್ಪನ್ನಗಳನ್ನು ಕಳಿಸುವ ವ್ಯವಸ್ಥೆ ಮಾಡುತ್ತಿದ್ದೇವೆ.
    | ಪ್ರದೀಪ, ತೋಟಗಾರಿಕೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts