More

    ಹೊರರಾಜ್ಯಗಳಿಂದ 2,208 ಜನರ ಆಗಮನ

    ಹಾವೇರಿ: ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಸಾವಿರಾರು ಕಾರ್ವಿುಕರು ರೈಲು, ಬಸ್​ಗಳ ಮೂಲಕ ತೆರಳಿದ್ದು, ಜಿಲ್ಲೆಗೂ ವಿವಿಧ ರಾಜ್ಯಗಳಿಂದ ಒಟ್ಟು 2,208 ಕಾರ್ವಿುಕರು ಬಂದಿದ್ದಾರೆ. ಅವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್​ನಲ್ಲಿಟ್ಟು ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೊರ ರಾಜ್ಯಗಳಿಂದ, ಅದರಲ್ಲೂ ಅತಿಹೆಚ್ಚು ಕರೊನಾ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಿಂದ 638 ಜನ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿಯೂ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಮೂಡಿದೆ. ಅಲ್ಲದೆ, ಜಿಲ್ಲೆಯಲ್ಲಿ ಇದುವರೆಗೆ ಕಾಣಿಸಿಕೊಂಡ 6 ಪಾಸಿಟಿವ್ ಕೇಸ್​ಗಳಿಗೂ ಮುಂಬೈ ನಂಟು ಅಂಟಿದೆ. ಇಬ್ಬರು ಚಾಲಕರು, ಇಬ್ಬರು ಕಾರ್ವಿುಕರು, ಒಬ್ಬರು ವೈದ್ಯಕೀಯ ತರಬೇತಿಗೆ ಹೋದವರು. ಹೀಗಾಗಿ 638 ಜನರನ್ನು ಆದಷ್ಟು ಸುರಕ್ಷಿತವಾಗಿ ಕ್ವಾರಂಟೈನ್ ಮಾಡಿ ಸೋಂಕು ಪರೀಕ್ಷೆ ನಡೆಸಬೇಕು ಎಂಬ ಒತ್ತಾಯ ಜನರದ್ದಾಗಿದೆ.

    ಹೊರರಾಜ್ಯದಿಂದ ಬಂದಿರುವ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಅವರ ಗಂಟಲ ದ್ರವ ಮತ್ತು ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದುವರೆಗೆ ಅರ್ಧಕ್ಕಿಂತ ಹೆಚ್ಚು ಜನರ ವರದಿಗಳು ಬಂದಿದ್ದು, ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ವರದಿ ನೆಗೆಟಿವ್ ಬಂದಿವೆ.

    ಹಾವೇರಿ ತಾಲೂಕಿಗೆ 452, ರಾಣೆಬೆನ್ನೂರು 454, ಬ್ಯಾಡಗಿ 106, ಹಾನಗಲ್ಲ 307, ಹಿರೇಕೆರೂರು 158, ಸವಣೂರು 306, ಶಿಗ್ಗಾಂವಿ ತಾಲೂಕಿಗೆ 249 ಜನರು ಆಗಮಿಸಿದ್ದಾರೆ.

    ವಸತಿ ನಿಲಯಗಳಲ್ಲಿ ಕ್ವಾರಂಟೈನ್: ಹೊರರಾಜ್ಯಗಳಿಂದ ಬಂದವರನ್ನು ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಲ್ಲಿ ಈಗಾಗಲೇ ಅನೇಕರು ಕ್ವಾರಂಟೈನ್ ಅವಧಿ ಪೂರೈಸಿ ಮನೆಗೆ ಹೋಗಿದ್ದು, ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ. ಇನ್ನೂ 441 ಜನರು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ. ಸದ್ಯ 21 ಸರ್ಕಾರಿ ಹಾಸ್ಟೆಲ್​ಗಳಲ್ಲಿ ವಲಸೆ ಕಾರ್ವಿುಕರಿದ್ದಾರೆ. ಅವರಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಇವರಲ್ಲಿ ಸುಮಾರು 25 ಜನರು ಮಾತ್ರ ಸರ್ಕಾರಿ ಕ್ವಾರಂಟೈನ್ ಬಿಟ್ಟು ಹೋಟೆಲ್​ಗಳಲ್ಲಿ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts