More

    ಹೊರಗಿನಿಂದ ಬಂದವರ ತಪಾಸಣೆ ನಡೆಯಲಿಲ್ಲ

    ಸಿದ್ದಾಪುರ: ಕರೊನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ರಾಜ್ಯ ಸರ್ಕಾರ ಲಾಕ್​ಡೌನ್ ಘೊಷಣೆ ಮಾಡಿದೆ. ಆದರೆ ವಿವಿಧ ನಗರಗಳಲ್ಲಿ ಉದ್ಯೋಗದಲ್ಲಿದ್ದ 300ಕ್ಕೂ ಹೆಚ್ಚು ಜನತೆ ಮಂಗಳವಾರ ಬೆಳಗ್ಗೆ ತಾಲೂಕಿಗೆ ಆಗಮಿಸಿದ್ದು, ಅವರನ್ನು ಯಾರೂ ಪರೀಕ್ಷೆ ಮಾಡುವವರಿಲ್ಲದ್ದರಿಂದ ನಿರಾತಂಕವಾಗಿ ಮನೆಯತ್ತ ತೆರಳಿದರು.

    ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಜನರು ಒಂದಕ್ಕೆ ಎರಡು ಪಟ್ಟು ಹಣ ಪಾವತಿಸಿ ಖಾಸಗಿ ಬಸ್, ಕಾರು, ಮ್ಯಾಕ್ಸಿ ಕ್ಯಾಬ್ ಸೇರಿ ದ್ವಿಚಕ್ರ ವಾಹನದಲ್ಲೂ ಆಗಮಿಸಿದ್ದಾರೆ. ಇವರೆಲ್ಲರೂ ಕರೊನಾ ಪೀಡಿತ ಪ್ರದೇಶದಿಂದ ಬರುತ್ತಿದ್ದರೂ ಅವರನ್ನು ಪರೀಕ್ಷಿಸಿ ತಾಲೂಕಿನ ಒಳಬಿಡುವ ಕೆಲಸವನ್ನು ಸ್ಥಳೀಯ ಆಡಳಿತವಾಗಲಿ, ಆರೋಗ್ಯ ಇಲಾಖೆಯಾಗಲಿ ಮಾಡುತ್ತಿಲ್ಲ. ತಾಲೂಕಿನ ಕವಂಚೂರು ಮತ್ತು ಮಾವಿನಗುಂಡಿಯಲ್ಲಿ ಕರೊನಾ ಪರೀಕ್ಷೆಗೆ ಚೆಕ್​ಪೋಸ್ಟ್ ತೆರೆಯಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೆ, ಈ ಕುರಿತು ಬೆಳಗ್ಗೆ 5.30ಕ್ಕೆ ರಿಯಾಲಿಟಿ ಚೆಕ್ ಮಾಡಿದಾಗ ಕವಂಚೂರು ಚೆಕ್​ಪೋಸ್ಟ್​ನಲ್ಲಿ ಆರೋಗ್ಯ ಅಥವಾ ಪೊಲೀಸ್ ಇಲಾಖೆಯವರಾಗಲಿ ಯಾರೂ ಇರಲಿಲ್ಲ. ಪೊಲೀಸ್ ಗೇಟ್ ಕೂಡಾ ಅಲ್ಲಿ ಇರಲಿಲ್ಲ. ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದರು. ಆದರೆ, ಅಲ್ಲಿ ಆರೋಗ್ಯ ಇಲಾಖೆಯವರ ಹೆಲ್ಪ್​ಡೆಸ್ಕ್ ಕೂಡಾ ಇರಲಿಲ್ಲ.

    ಈ ಕುರಿತು ದೂರವಾಣಿ ಮೂಲಕ ಶಿರಸಿ ಉಪವಿಭಾಗಾಧಿಕಾರಿಗಳಿಗೆ ತಿಳಿಸಿದ ನಂತರ ಚೆಕ್ ಪೋಸ್ಟ್​ನಲ್ಲಿ ಸಿಬ್ಬಂದಿ ನಿಯೋಜನೆ ಹಾಗೂ ಪಟ್ಟಣದಲ್ಲಿ ಹೆಲ್ಪ್​ಡೆಸ್ಕ್ ಆರಂಭಿಸಲಾಗಿದೆ. ವಿವಿಧ ಕಡೆಗಳಿಂದ ಆಗಮಿಸಿದ ಜನತೆಯನ್ನು ಕಂಡ ಸ್ಥಳೀಯರು ಆತಂಕ ವ್ಯಕ್ತಪಡಿಸಿ ಮುಂದಿನ ದಿನದಲ್ಲಿ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಹೋಂ ಕ್ವಾರಂಟೈನ್ ಉಲ್ಲಂಘಿಸಿದವನ ವಿರುದ್ಧ ಪ್ರಕರಣ
    ಕಾರವಾರ:
    ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಜೊಯಿಡಾ ತಾಲೂಕಿನ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಜಗಲಬೇಟೆ ನಿವಾಸಿ ಚರಣರಾಜ ಕೇಶವ ಖಾರ್ವಿ (30) ವಿರುದ್ಧ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾ. 13 ರಂದು ಅವರು ಕುವೈತ್​ನಿಂದ ವಾಪಸಾಗಿದ್ದರು. ಕರೊನಾ ಹರಡುವ ಸಾಧ್ಯತೆಗಳನ್ನು ತಡೆಯಲು ಆರೋಗ್ಯ ಸಿಬ್ಬಂದಿ ಅವರನ್ನು 14 ದಿನದವರೆಗೆ ಮನೆಯಲ್ಲೇ ಉಳಿಯಲು ತಿಳಿಸಿದ್ದರು. ಆದರೆ, ಅದನ್ನು ಉಲ್ಲಂಘಿಸಿದ್ದರಿಂದ ಜೊಯಿಡಾ ವೈದ್ಯಾಧಿಕಾರಿಗಳ ದೂರಿನಂತೆ ರಾಮನಗರ ಪಿಎಸ್​ಐ ಕಿರಣ ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts