More

    ಹೈನುಗಾರಿಕೆಯೇ ಆದಾಯದ ಮೂಲ, ಬಮುಲ್ ನಿರ್ದೇಶಕ ಭಾಸ್ಕರ್ ಅಭಿಮತ, ಡೇರಿ ಸದಸ್ಯರಿಗೆ ತುಪ್ಪ, ಮೃತರ ಕುಟುಂಬಕ್ಕೆ ಸಹಾಯಧನ ವಿತರಣೆ

    ನೆಲಮಂಗಲ: ರಾಜ್ಯಾದ್ಯಂತ ಅತಿಹೆಚ್ಚು ರೈತರು ಆದಾಯ ಮೂಲವಾಗಿ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ ಎಂದು ಬಮುಲ್ ನಿರ್ದೇಶಕ ಜಿ.ಆರ್. ಭಾಸ್ಕರ್ ತಿಳಿಸಿದರು.

    ತಾಲೂಕಿನ ಹಂಚೀಪುರದ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಬಮುಲ್‌ನಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೇರಿ ಸದಸ್ಯರಿಗೆ ತುಪ್ಪ ಹಾಗೂ ಮೃತ ಸದಸ್ಯರ ಕುಟುಂಬದವರಿಗೆ ಧನಸಹಾಯ ಒದಗಿಸಿ ಮಾತನಾಡಿದರು.

    ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಬಮುಲ್ ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕೋವಿಡ್-19 ಹಿನ್ನಲೆಯಲ್ಲಿ ಬೇಡಿಕೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಎಂದರು.

    ಸರ್ಕಾರಕ್ಕೆ ಮನವಿ: ಬಾಂಗ್ಲಾದೇಶಕ್ಕೆ 500 ಟನ್ ಹಾಲಿನ ಪುಡಿ ರ್ತು ಮಾಡಲಾಗುತ್ತಿದೆ. ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಮಕ್ಕಳಿ ಕೊಡಲು 500 ಟನ್ ಹಾಲಿನ ಪೌಡರ್ ಖರೀದಿಯನ್ನು ಕರೊನಾ ಕಾರಣದಿಂದ ಸರ್ಕಾರ ನಿಲ್ಲಿಸಿದೆ. ಹಾಲಿನ ಪುಡಿ ಖರೀದಿಸಿ, ಮಕ್ಕಳ ಮನೆಗಳಿಗೆ ತಲುಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

    ಬಮುಲ್‌ನಿಂದ 5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಡೇರಿಗಳ 1.30 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ತುಪ್ಪ ನೀಡಲಾಗುತ್ತಿದೆ. ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಪ್ರತಿ ಲೀಟರ್‌ಗೆ 30 ರೂ. ಕೊಡುತ್ತಿದ್ದರೂ, ಬಮುಲ್‌ನ ಸಂಕಷ್ಟವನ್ನು ಅರ್ಥ ಮಾಡಿಕೊಂಡು ರೈತರು ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.

    ಉಗ್ರಾಣದಲ್ಲೇ ಉಳಿದ ಬೆಣ್ಣೆ: ಬೆಂಗಳೂರು ಡೇರಿಗೆ ನಿತ್ಯ 19 ಲಕ್ಷ ಲೀಟರ್‌ಗೂ ಹೆಚ್ಚಿನ ಹಾಲು ಪೂರೈಕೆಯಾಗುತ್ತಿದೆ. 9 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದ್ದು, ಉಳಿದ 10 ಲಕ್ಷ ಲೀಟರ್ ಹಾಲನ್ನು ವಿವಿಧ ಉತ್ಪನ್ನಗಳಾಗಿ ಪರಿವರ್ತಿಸಲಾಗುತ್ತದೆ. 7 ಸಾವಿರ ಟನ್ ಹಾಲಿನ ಪೌಡರ್, 4 ಸಾವಿರ ಟನ್ ಬೆಣ್ಣೆ ಮಾರಾಟವಾಗದೆ, ಉಗ್ರಾಣದಲ್ಲೇ ಉಳಿದಿದೆ ಎಂದು ಜಿ.ಆರ್. ಭಾಸ್ಕರ್ ಮಾಹಿತಿ ನೀಡಿದರು.

    ಸಹಾಯಧನ ವಿತರಣೆ: ಇತ್ತೀಚೆಗೆ ನಿಧನರಾದ ಹಂಚೀಪುರ ಹಾಲಿನ ಡೇರಿ ಸದಸ್ಯ ಜವರಯ್ಯ ಅವರ ಕುಟುಂಬದವರಿಗೆ 5 ಸಾವಿರ ರೂ. ಧನಸಹಾಯದ ಚೆಕ್ ನೀಡಲಾಯಿತು. ಜತೆಗೆ ಸಾಂಕೇತಿಕವಾಗಿ ಸಂಘದ 90 ಸದಸ್ಯರಿಗೆ ತುಪ್ಪ ಕೊಡಲಾಯಿತು ಎಂದು ಸಂಘದ ಅಧ್ಯಕ್ಷ ಎಚ್.ಇ. ವಿಜಯ್‌ಕುಮಾರ್ ತಿಳಿಸಿದರು.

    ಗುರುವನಹಳ್ಳಿ ಡೇರಿ ಕಾರ್ಯದರ್ಶಿ ರಾಜುಗೋಪಾಲ್, ಹಂಚೀಪುರ ಡೇರಿ ಉಪಾಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ಅಂಜನಮೂರ್ತಿ, ನಿರ್ದೇಶಕ ಎಚ್.ಎಸ್. ಬೈರೇಗೌಡ, ವಿಸ್ತರಣಾಧಿಕಾರಿ ಅನಿಲ್‌ಕುಮಾರ್, ಬಾವಿಕೆರೆ ಡೇರಿ ಕಾರ್ಯದರ್ಶಿ ನಾಗರತ್ನ, ಬಸವನಗರ ಸಂಘದ ಕಾರ್ಯದರ್ಶಿ ಬಿ.ಎಂ.ರವಿಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts