More

    ಹೆಸರು, ಸಜ್ಜೆ ಬಿತ್ತನೆಯತ್ತ ರೈತರ ಚಿತ್ತ

    ರೋಣ: ತಾಲೂಕಿನಾದ್ಯಂತ ಒಂದು ವಾರದಿಂದ ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಕೆಲ ಭಾಗಗಳಲ್ಲಿ ಹೆಸರು ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಿದೆ. ಇದರಿಂದ ರೈತರು ಹರ್ಷಗೊಂಡಿದ್ದು, ಭೂಮಿ ಹದಗೊಳಿಸಿ ಕೃಷಿ ಪರಿಕರಗಳನ್ನು ಸಿದ್ಧ್ದಪಡಿಸಿಕೊಳ್ಳುತ್ತಿದ್ದಾರೆ.

    ಈ ಬಾರಿ ಬಿತ್ತನೆಗೆ ಅನುಕೂಲವಾಗುವಂತೆ ಅಲ್ಪಸ್ವಲ್ಪ ಭರಣಿ ಮಳೆಯಾಗಿದೆ. ಕೃತಿಕಾ ಮಳೆಗೆ ಹೆಸರು, ಸಜ್ಜೆ ಬೀಜ ಬಿತ್ತನೆಗೆ ಮುಂದಾಗುತ್ತೇವೆ. ರೋಹಿಣಿ ಮಳೆಯಾದರೆ ಗೋವಿನಜೋಳ, ತೊಗರಿ ಬೀಜ ಬಿತ್ತಲಾಗುವುದು ಎಂದು ಪಟ್ಟಣದ ರೈತ ಸಂಗಪ್ಪ ವಕ್ರದ ಹೇಳಿದರು.

    ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಗೋವಿನಜೋಳ ಬಿತ್ತನೆ ನಡೆದಿಲ್ಲ. ಈ ಬಾರಿ ಉತ್ತಮ ಮಳೆಯಾದರೆ ಮಾತ್ರ ಗೋವಿನಜೋಳ ಬಿತ್ತನೆ ಮಾಡುತ್ತೇವೆ. ಹೊಟ್ಟೆಗೆ ಹಿಡಿಕಾಳು ಬರದಿದ್ದರೂ ದನಕರುಗಳಿಗೆ ಮೇವು ಬೆಳಿತೈತ್ರೀ ಎಂಬುದು ರೈತರ ಅಭಿಪ್ರಾಯ.

    ಲಾಕ್​ಡೌನ್ ಸಂಕಷ್ಟ ಇದ್ದರೂ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಲೆ ಪರಿಹರಿಸುವಂತೆ ಮೇಲಧಿಕಾರಿಗಳ ನಿರ್ದೇಶನವಿದೆ. ಅದರಂತೆ ಮುಂಗಾರು ಹಂಗಾಮಿನಲ್ಲಿ 150 ಕ್ವಿಂಟಾಲ್ ಹೆಸರು, 180 ಕ್ವಿಂಟಾಲ್ ಶೇಂಗಾ, 601 ಕ್ವಿಂಟಾಲ್ ಮೆಕ್ಕೆಜೋಳ, 85 ಕ್ವಿಂಟಾಲ್ ಸೂರ್ಯಕಾಂತಿ ಸೇರಿ ಅಗತ್ಯ ಗೊಬ್ಬರ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದೆ. ಈವರೆಗೆ ತಾಲೂಕಿನಲ್ಲಿ 88 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 48 ಮಿ.ಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ಹೇಳಿದರು.

    ಕೇಂದ್ರ ಸರ್ಕಾರ 6,000 ರೂ., ರಾಜ್ಯ ಸರ್ಕಾರ 4,000 ಸೇರಿ ಒಟ್ಟು 10,000 ರೂ.ಗಳನ್ನು ಆಯಾ ರೈತರ ಖಾತೆಗೆ ನೇರವಾಗಿ ವರ್ಗಾಯಿಸುವ ಪಿಎಂ ಕಿಸಾನ್ ಯೋಜನೆ ಜಾರಿಯಲ್ಲಿದೆ. ಇದುವರೆಗೆ ತಾಲೂಕಿನಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 39,729 ರೈತರು ಸೌಲಭ್ಯ ಪಡೆದಿದ್ದಾರೆ.

    | ರವೀಂದ್ರಗೌಡ ಪಾಟೀಲ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts