More

    ಹೆಸರು ಬೆಳೆದವರಿಗಿಲ್ಲ ಸರ್ಕಾರದ ಬೆಂಬಲ

    ಲಕ್ಷೆ್ಮೕಶ್ವರ: ಮುಂಗಾರಿನ ಪ್ರಮುಖ ಬೆಳೆ ಹೆಸರು ಬಹುತೇಕ ಮಾರಾಟವಾಗುವ ಹಂತ ತಲುಪಿದೆ. ಆದರೆ, ಬೆಂಬಲಬೆಲೆ ಕೇಂದ್ರಗಳು ಪ್ರಾರಂಭವಾಗದ ಕಾರಣ 7196 ರೂ. ಬೆಂಬಲಬೆಲೆ ಘೊಷಣೆಗೆ ಮಾತ್ರ ಸೀಮಿತವಾಗಿದೆ.

    ತಾಲೂಕಿನಲ್ಲಿ ಲಕ್ಷ್ಮೇಶ್ವರ ಸೇರಿ ದೊಡ್ಡೂರ, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯತ್ತಿನಹಳ್ಳಿ, ಹರದಗಟ್ಟಿ, ಆದ್ರಳ್ಳಿ, ಅಕ್ಕಿಗುಂದ, ಸೂರಣಗಿ, ಬಾಲೆಹೊಸೂರ ಸೇರಿ ಒಟ್ಟು 5515 ಹೆಕ್ಟೇರ್​ನಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಮೇ ಮತ್ತು ಜೂನ್ ಮೊದಲ ವಾರದಲ್ಲಿ ಬಿತ್ತನೆಯಾಗಿರುವ ಹೆಸರು ಆಗಸ್ಟ್ ಮೊದಲ ವಾರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಿದೆ. ಪ್ರಾರಂಭದಲ್ಲಿ ಮಾರುಕಟ್ಟೆಗೆ ಬಂದ ಹೆಸರಿಗೆ ಬೆಂಬಲ ಬೆಲೆಗಿಂತ ಹೆಚ್ಚಿನ ದರವೇ ಸಿಕ್ಕಿದೆ. ಆದರೆ, ಫಸಲು ಕೈ ಸೇರುವ ಹಂತದಲ್ಲಿ 15 ದಿನಗಳಿಂದ ಸತತವಾಗಿ ಸುರಿದ ಮಳೆಗೆ ಹೆಸರು ಬುಡ್ಡಿ ಬಿಡಿಸಿ ತಂದು ಒಕ್ಕಲಿ ಮಾಡಲಾಗಿಲ್ಲ. ಸದ್ಯ ಮಳೆ ಕೊಂಚ ಬಿಡುವು ಕೊಟ್ಟಿದ್ದು ಮಾರುಕಟ್ಟೆಗೆ ಹೆಸರು ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದೆ.

    ಈಗಾಗಲೇ ಲಕ್ಷ್ಮೇಶ್ವರ ಎಪಿಎಂಸಿ ಒಂದರಲ್ಲಿಯೇ 10 ಸಾವಿರ ಕ್ವಿಂಟಾಲ್ ಹೆಸರು ಮಾರಾಟವಾಗಿದೆ. ಸೋಮವಾರವಷ್ಟೇ ಪಟ್ಟಣದ ಮಾರ್ಕೆಟ್​ಗೆ 1564 ಚೀಲ ಹೆಸರು ಆವಕವಾಗಿದೆ. ಗರಿಷ್ಠ 7097 ರೂ, ಕನಿಷ್ಠ 2503 ಮತ್ತು ಸರಾಸರಿ 4820 ರೂ.ಗಳಿಗೆ ಹೆಸರು ಮಾರಾಟವಾಗಿದೆ. ಸದ್ಯ ಮಾರ್ಕೆಟ್​ನಲ್ಲಿ ಸರಾಸರಿ 5 ಸಾವಿರ ರೂ. ದರಕ್ಕೆ ಮಾರಾಟವಾಗುತ್ತಿದೆ. ಇದೀಗ ಹೆಸರು ಹೆಚ್ಚು ಆವಕವಾಗುತ್ತಿರುವುದರಿಂದ ಮತ್ತು ಗುಣಮಟ್ಟ ಇರುವುದಿಲ್ಲ ಎಂಬ ಕಾರಣದಿಂದ ದಿನೇದಿನೆ ಬೆಲೆ ಕುಸಿಯುತ್ತಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

    ರೈತರ ಹಿತಕಾಯಲು ಸರ್ಕಾರ ಈ ಕೂಡಲೆ, ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಮತ್ತು ಅತಿಯಾದ ಮಳೆಗೆ ಸಿಕ್ಕು ಹಾಳಾಗಿರುವ ಬೆಳೆಗೆ ಪರಿಹಾರಧನ ನೀಡಬೇಕು. ಎಂದು ರೈತರಾದ ಮಲ್ಲಯ್ಯ ಭಕ್ತಿಮಠ, ಶಿವಾನಂದ ಲಿಂಗಶೆಟ್ಟಿ, ಸುರೇಶ ಬೀರಣ್ಣವರ ಇತರರು ಆಗ್ರಹಿಸಿದ್ದಾರೆ.

    ಈ ಕುರಿತು ಗದಗ ಜಿಲ್ಲಾ ಕರ್ನಾಟಕ ಸಹಕಾರ ಮಾರಾಟ ಮಂಡಳದ ಅಧಿಕಾರಿ ಡಿ.ಬಿ.ಡೊಕ್ಕಣ್ಣವರ ಅವರನ್ನು ಸಂರ್ಪಸಿದಾಗ ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಲು ಈಗಾಗಲೇ ಜಿಲ್ಲಾಧಿಕಾರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ಕೂಡಲೇ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ ಎಂದರು.

    ಗುರಿ ಮೀರಿ ಬಿತ್ತನೆ

    ಮುಂಗಾರಿನ ಪ್ರಾರಂಭದಲ್ಲಿಯೇ ಹೆಸರಿಗೆ 7196 ರೂ. ಬೆಂಬಲ ಬೆಲೆ ಘೊಷಣೆಯಾಗಿದ್ದರಿಂದ ತಾಲೂಕಿನಲ್ಲಿ ಹೆಸರು ಬೆಳೆಯನ್ನು ಗುರಿ ಮೀರಿ ಬಿತ್ತನೆ ಮಾಡಲಾಗಿತ್ತು. ಗೊಬ್ಬರ, ಬೀಜ, ಬಿತ್ತನೆ, ಕ್ರಿಮಿನಾಶಕ ಬಳಕೆ, ಆಳು ಸೇರಿ ಪ್ರತಿ ಎಕರೆ ಹೆಸರು ಬಿತ್ತನೆ ಪ್ರಾರಂಭದಿಂದ ಮಾರುಕಟ್ಟೆಗೆ ಸಾಗಿಸುವರೆಗೂ ಕನಿಷ್ಠ 8 ಸಾವಿರ ರೂ. ಗಳಷ್ಟು ಖರ್ಚಾಗಿದೆ. ಇದೀಗ ಮಾರುಕಟ್ಟೆಯಲ್ಲಿ ಹೆಸರಿನ ಬೆಲೆ ದಿನೇದಿನೆ ಕುಸಿಯುತ್ತಿದ್ದು ಇದೀಗ 4ರಿಂದ 5 ಸಾವಿರ ರೂ.ಗಳವರೆಗೆ ಮಾತ್ರ ಮಾರಾಟವಾಗುತ್ತಿದೆ.

    ಸಮರ್ಪಕ ಯೂರಿಯಾ ಪೂರೈಕೆಗೆ ಆಗ್ರಹ

    ಶಿರಹಟ್ಟಿ: ಅತಿವೃಷ್ಟಿಯ ಮಧ್ಯ ರೈತರು ಕಷ್ಟಪಟ್ಟು ಬೆಳೆದ ಹೆಸರು ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಹಾಗೂ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಬೇಕು ಎಂದು ಸ್ಥಳೀಯ ಕರ್ನಾಟಕ ಪ್ರಜಾಪರ ವೇದಿಕೆ ಕಾರ್ಯಕರ್ತರು ರೈತರೊಂದಿಗೆ ಮಂಗಳವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ರೈತ ಮುಖಂಡ ಎನ್.ವೈ. ಕರಿಗಾರ, ವೇದಿಕೆ ಅಧ್ಯಕ್ಷ ಎಚ್.ಎನ್. ತಹಶೀಲದಾರ ಮಾತನಾಡಿ, ‘ಮುಂಗಾರು ಹಂಗಾಮಿನ ಹೆಸರು ರೈತರ ಪಾಲಿಗೆ ಆರ್ಥಿಕ ಬೆಳೆಯಾಗಿದೆ. ಆದರೆ, ಕಷ್ಟಪಟ್ಟು ಬೆಳೆದ ಬೆಳೆ ಕಟಾವಿಗೆ ಬಂದಿದೆ. ಈ ವೇಳೆ ಸತತವಾಗಿ ಸುರಿದ ಮಳೆಯಿಂದಾಗಿ ಗಿಡದಲ್ಲಿಯೇ ಹೆಸರು ಮೊಳಕೆಯೊಡೆದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಳಿದುಳಿದದ್ದನ್ನು ಒಕ್ಕಣೆ ಮಾಡಿರುವ ಹೆಸರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಬೇಕು ಮತ್ತು ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿದರು.

    ಅಲ್ಲದೆ, ಅತಿವೃಷ್ಟಿಗೆ ತುತ್ತಾಗಿರುವ ಶೇಂಗಾ, ಗೋವಿನಜೋಳ, ಹತ್ತಿ, ಈರುಳ್ಳಿ ಬೆಳೆ ರಕ್ಷಣೆಗೆ ಯೂರಿಯಾ ಗೊಬ್ಬರದ ಅಗತ್ಯವಿದೆ. ಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ಸಮರ್ಪಕ ಗೊಬ್ಬರ ಪೂರೈಸಬೇಕು ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಶಿರಸ್ತೇದಾರ್ ನಾಯಕ ಅವರು ಮನವಿ ಸ್ವೀಕರಿಸಿದರು. ಶಶಿಧರ ದೇಗಾವಿ, ಅರ್ಜುನ ಬಿಡವೆ, ಸುನೀಲ ತಳವಾರ, ಅರುಣ ತೋಡೇಕರ, ಮಂಜುನಾಥ ಬಳಿಗಾರ, ಬಿ.ಎಚ್. ತೋಡೇಕರ, ಯಲ್ಲಪ್ಪ ತಳವಾರ, ಬಸವರಾಜ ರಾಮಗೇರಿ, ದೇವಪ್ಪ ಇಟಗಿ, ಸಂಭಾಜಿ ಪರಬತ, ವಿಠ್ಠಲ ಬಿಡವೆ, ಕೊಟ್ರೇಶ ಸಂಗಟಿ, ತಾನಾಜಿ ಪರಬತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts