More

    ಹೆಸರು ಖರೀದಿ ಕೇಂದ್ರ ಖಾಲಿ

    ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿಗೆ ಜಿಲ್ಲೆಯ ವಿವಿಧೆಡೆ ಆರಂಭಿಸಲಾಗಿರುವ ಖರೀದಿ ಕೇಂದ್ರಗಳತ್ತ ರೈತರು ಸುಳಿಯದ ಪರಿಣಾಮ ಅವು ಖಾಲಿ ಬಿದ್ದಿವೆ.

    ಪ್ರಸಕ್ತ ಮುಂಗಾರಿನ ಮೊದಲ ಬೆಳೆ ಹೆಸರುಕಾಳು ಆಗಸ್ಟ್ ವೇಳೆಗೆ ಕೊಯ್ಲಿಗೆ ಬರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ರೈತ ಸಮುದಾಯದ ಆಗ್ರಹ ಹಾಗೂ ತೀವ್ರ ಹೋರಾಟದ ನಂತರ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಪ್ರತಿ ಕ್ವಿಂಟಾಲ್​ಗೆ 7195 ರೂ.ನಂತೆ ಪ್ರತಿ ರೈತರಿಂದ ನಾಲ್ಕು ಕ್ವಿಂಟಾಲ್ ಖರೀದಿಸಲಾಗುತ್ತಿದೆ.

    ಅದೇ ರೀತಿ ಉದ್ದಿನಕಾಳನ್ನು ಪ್ರತಿ ಕ್ವಿಂಟಾಲ್​ಗೆ 6 ಸಾವಿರ ರೂ.ನಂತೆ ಖರೀದಿಸಲು ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಹೆಬಸೂರ, ಉಪ್ಪಿನಬೆಟಗೇರಿ, ಅಣ್ಣಿಗೇರಿ, ನವಲಗುಂದ, ಮೊರಬ, ಕುಂದಗೋಳ, ಯರಗುಪ್ಪಿ ಸೇರಿ 11 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.

    ಅಕ್ಟೋಬರ್ 15ರ ವರೆಗೆ ಮಾತ್ರ ಇದ್ದ ನೋಂದಣಿ ಕೊನೇ ದಿನಾಂಕವನ್ನು ಸಾಫ್ಟ್​ವೇರ್ ಸಮಸ್ಯೆ ಹಿನ್ನೆಲೆಯಲ್ಲಿ ಮತ್ತೆ ಅಕ್ಟೋಬರ್ 29ರವರೆಗೆ ವಿಸ್ತರಿಸಲಾಗಿದೆ. ಆದರೂ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳತ್ತ ಬರುತ್ತಿಲ್ಲ.

    ಹುಬ್ಬಳ್ಳಿ ಎಪಿಎಂಸಿಯಲ್ಲಿ ನೂಲ್ವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಖರೀದಿ ಏಜೆನ್ಸಿಯಾಗಿದ್ದು, ಈವರೆಗೆ 100 ರೈತರು ಹೆಸರುಕಾಳು ಖರೀದಿ ಕೊಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಂಘದ ಸಿಇಒ ಕಲ್ಲನಗೌಡ್ರ ಮೂಗನ್ನವರ ತಿಳಿಸಿದ್ದಾರೆ.

    ಮಾರುಕಟ್ಟೆಯಲ್ಲೂ ಉತ್ತಮ ಬೆಲೆ
    ಒಂದೆಡೆ ಅತಿವೃಷ್ಟಿ, ನೆರೆಯಿಂದಾಗಿ ಬಹಳಷ್ಟು ಹೆಸರುಕಾಳು ಫಸಲು ಹಾಳಾಗಿದೆ. ಧಾರವಾಡ ಜಿಲ್ಲೆಯಲ್ಲಿ ಈ ವರ್ಷ 44842 ಹೆಕ್ಟೇರ್​ನಲ್ಲಿ ಹೆಸರು ಬಿತ್ತನೆಯಾಗಿತ್ತು. ಸುಮಾರು 3 ಲಕ್ಷ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಅತಿಯಾದ ಮಳೆಗೆ ಬಹುತೇಕ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ದಾಖಲೆ ಹೇಳುತ್ತವೆ. ಇನ್ನೊಂದೆಡೆ ಮಳೆಯ ಮಧ್ಯೆಯೂ ಅಷ್ಟಿಷ್ಟು ಬೆಳೆ ಕೈಗೆ ಬಂದಿದ್ದು, ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ಹೆಸರು ಬೆಲೆ ಉತ್ತಮವಾಗಿರುವುದರಿಂದ ಎಪಿಎಂಸಿಗೆ ರೈತರು ಹೊರಟಿದ್ದಾರೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಬುಧವಾರ ಪ್ರತಿ ಕ್ವಿಂಟಾಲ್ ಹೆಸರಿಗೆ 7700 ರೂ. ಗಡಿ ದಾಟಿತ್ತು. ಈ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಯೋಜನೆಯ ಖರೀದಿ ಕೇಂದ್ರಗಳು ಖಾಲಿ ಹೊಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

    ಗದಗದಲ್ಲೂ ಇದೇ ಸ್ಥಿತಿ
    ರಾಜ್ಯದಲ್ಲಿ ಹೆಸರು ಬೆಳೆಯುವ ಪ್ರಮುಖ ಜಿಲ್ಲೆ ಗದಗದಲ್ಲಿಯೇ ಈ ಬಾರಿ ಕೇವಲ 455 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಗದಗ ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ ಕ್ವಿಂಟಾಲ್​ಗೆ 9 ಸಾವಿರ ರೂ. ವರೆಗೆ ಹೋಗಿರುವುದರಿಂದ ಖರೀದಿ ಕೇಂದ್ರಗಳಿಗೆ ಹೆಚ್ಚಿನ ರೈತರು ಬರುತ್ತಿಲ್ಲ. ಎಷ್ಟು ರೈತರು ನೋಂದಣಿ ಮಾಡಿಕೊಂಡಿದ್ದಾರೋ ಅವರ ಹೆಸರುಕಾಳನ್ನು ನವೆಂಬರ್ ಒಂದರಿಂದ ಖರೀದಿ ಮಾಡುತ್ತೇವೆ ಎಂದು ಗದಗ ಮಾರ್ಕೆಟಿಂಗ್ ಫೆಡರೇಶನ್ ವ್ಯವಸ್ಥಾಪಕ ಸಚಿನ್ ಪಾಟೀಲ್ ವಿಜಯವಾಣಿಗೆ ಪ್ರತಿಕ್ರಿಯಿಸಿದರು.

    ಹೆಸರುಕಾಳು ಖರೀದಿಗಾಗಿ ನೋಂದಣಿ ಮಾಡಿಕೊಳ್ಳಲು ಅ. 29 ಕೊನೇ ದಿನವಾಗಿದೆ. ನವೆಂಬರ್ ಒಂದರಿಂದ ಖರೀದಿ ಆರಂಭವಾಗಲಿದೆ. ಈ ವರೆಗೆ 475 ರೈತರು ಮಾತ್ರ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಉದ್ದು ಮಾರಾಟಕ್ಕೆ ಕೇವಲ 10 ರೈತರು ನೋಂದಣಿ ಮಾಡಿದ್ದಾರೆ.
    |ಗಾಯತ್ರಿ ಪವಾರ, ಮಾರ್ಕೆಟಿಂಗ್ ಫೆಡರೇಶನ್ ವ್ಯವಸ್ಥಾಪಕರು, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts