More

    ಹೆದ್ದಾರಿ ಸಂಚಾರ ತಡೆದು ಆಕ್ರೋಶ

    ಕೊಳ್ಳೇಗಾಲ; ಕೇಂದ್ರ ಮತ್ತು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ರೈತರ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಆರೋಪಿಸಿ ಗುರುವಾರ ಪಟ್ಟಣದಲ್ಲಿ ರೈತ ಸಂಘದ ತಾಲೂಕು ಘಟಕ ವತಿಯಿಂದ ಪ್ರತಿಭಟನೆ ನಡೆಯಿತು.

    ಪಟ್ಟಣದ ಮುಡಿಗುಂಡ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದ ರೈತ ಸಂಘದ ಪದಾಧಿಕಾರಿಗಳು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಗೌಡೇಗೌಡ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಡ್ಯದಲ್ಲಿ ರೈತ ಸಂಘದ ಪದಾಧಿಕಾರಿಗಳು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಪೊಲೀಸ್ ವ್ಯವಸ್ಥೆ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದೆ. ರೈತರು ಬೆಳೆದ ಬೆಳೆ ಹಾಗೂ ಹಾಲಿಗೆ ಸಹಾಯಧನ ನೀಡುವಂತೆ ಒತ್ತಾಯಿಸಿ ಸಮಾಧಾನಚಿತ್ತದಿಂದ 52 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ನಡುವೆ ರೈತ ಸಂಘ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಪುತ್ಥಳಿಗೆ ರಕ್ತದ ಅಭಿಷೇಕ ಮಾಡುವ ವಿನೂತನ ಚಳುವಳಿ ನಡೆಸಿತ್ತು. ಈ ವೇಳೆ ಅಲ್ಲಿದ್ದ ಪೊಲೀಸರು ಏಕಾಏಕಿ ಶಾಮಿಯಾನ, ಬ್ಯಾನರ್ ಕಿತ್ತೊಗಿದ್ದಾರೆ. ಅಲ್ಲದೆ, ಪ್ರತಿಭಟನಾ ಸ್ಥಳದಲ್ಲಿ ಇಡಲಾಗಿದ್ದ ಗಾಂಧೀಜಿ, ಅಂಬೇಡ್ಕರ್, ಪ್ರೊ.ನಂಜುಂಡಸ್ವಾಮಿ ಹಾಗೂ ಪುಟ್ಟಣ ಅವರ ಭಾವಚಿತ್ರ ಬೀಳಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಡ್ಯಕ್ಕೆ ಬರುತ್ತಿರುವುದರಿಂದ ಪೊಲೀಸರು ಪ್ರತಿಭಟನೆ ಹತ್ತಿಕ್ಕಿದ್ದಾರೆ. ರೈತರ ಸಿಟ್ಟು ತೋಳಿಗೆ ಬಂದರೆ ನಿಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. ರೈತ ಸಂಘದ ಜಿಲ್ಲಾ ಗೌರವಧ್ಯಕ್ಷ ಶಿವರಾಂ ಮಾತನಾಡಿದರು.

    ಬೈಕ್ ರ‌್ಯಾಲಿ: ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೈತರ ಸಂಘದ ಪದಾಧಿಕಾರಿಗಳು ಬೈಕ್ ರ‌್ಯಾಲಿ ನಡೆಸಿದರು. ಬಳಿಕ ನೇರವಾಗಿ ಪಟ್ಟಣದ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಮುಂದುವರಿಸಿದ ರೈತರು, ಮಂಡ್ಯದಲ್ಲಿ ರೈತರ ಮೇಲೆ ದೌರ್ಜನ್ಯ ಮಾಡಿದ ಮಂಡ್ಯ ಉಪ ಅಧೀಕ್ಷಕ ಶಿವಮೂರ್ತಿ ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು. ಸ್ಥಳಕ್ಕೆ ಅಗಮಿಸಿದ ಪಿಎಸ್‌ಐ ಮಂಜುನಾಥ್ ರೈತರಿಂದ ಮನವಿ ಪತ್ರ ಪಡೆದರು. ಬಳಿಕ ಪ್ರತಿಭಟನೆ ಅಂತ್ಯವಾಯಿತು.

    ರೈತ ಮುಖಂಡರಾದ ರವಿನಾಯ್ಡು, ಅಮ್ಜಾದ್ ಖಾನ್, ಪಳನಿ ಸ್ವಾಮಿ, ದೊರೆಸ್ವಾಮಿನಾಯ್ಡು, ಶಿವಕುಮಾರ್ , ಮಹದೇವಯ್ಯ, ದೊಡ್ಡಯ್ಯ, ನಾಗರಾಜು, ವೇಲ್ ಸ್ವಾಮಿ ಮತ್ತಿತರಿದ್ದರು.

    ರೈತರ ಹೋರಾಟವನ್ನು ಸರ್ಕಾರ ಮೊಟಕುಗೊಳಿಸುತ್ತಿದೆ. ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದುದು ಸರಿಯಿಲ್ಲ. ರೈತರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು.
    ಹೆಬ್ಬಸೂರು ಬಸವಣ್ಣ ಜಿಲ್ಲಾಧ್ಯಕ್ಷ, ರೈತ ಸಂಘ

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts