More

    ಹೆತ್ತವರಿಗೆ ಪೂಜೆ ಸಲ್ಲಿಸಿದ ಮಕ್ಕಳು

    ಕಲಬುರಗಿ: ಸುಂದರ ಸಂಜೆಯಲ್ಲಿ ತಂಪಾದ ಗಾಳಿ ಮಧ್ಯೆ ಮಕ್ಕಳು ತಂದೆ ತಾಯಿಯನ್ನು ಪೂಜಿಸುವ ಭವ್ಯ ಸಂಸ್ಕೃತಿ ನೋಡಲು ಎರಡು ಕಣ್ಣುಗಳು ಸಾಲದಂತಿತ್ತು. ಭಾರತದ ದಿವ್ಯ ಶಕ್ತಿಯ ಭವ್ಯ ಪರಂಪರೆ ಮರುಕಳಿಸುವಂತಿತ್ತು.
    ಮೊಬೈಲ್ ಯುಗದಲ್ಲಿ ಮಾತಾ ಪಿತೃಗಳನ್ನು ಮರೆಯುತ್ತಿರುವ ಈ ದಿನಗಳಲ್ಲಿ ಕೋಟನೂರ ಮಠದಲ್ಲಿರುವ ಸಿದ್ಧಶ್ರೀ ಶಾಲೆಯಲ್ಲಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರು ಮಕ್ಕಳಿಂದ ಮಾತಾಪಿತೃಗಳಿಗೆ ಪಾದಪೂಜೆ ಹಾಗೂ ಮಕ್ಕಳಿಗೆ ಕೈತುತ್ತು ಉಣಿಸುವ ಕಾರ್ಯಕ್ರಮ ಆಯೋಜಿಸಿ ವಾತ್ಸಲ್ಯದ ಪರಿಸರ ಸೃಷ್ಟಿಸಿದರು.
    ವೇದಿಕೆಯಲ್ಲಿ ಶ್ರೀಗಳ ತಂದೆ ತಾಯಿ ಪಾದಪೂಜೆ ನಡೆಯಿತು. ತಂದೆ ತಾಯಿಗಳಿಂದ ಶ್ರೀಗಳಿಗೆ ಕೈತುತ್ತು ಉಣಿಸುವ ನೋಟ ಭಾರತೀಯ ಭವ್ಯ ಸಂಸ್ಕೃತಿ ನೆನೆಪಿಸುವಂತಿತ್ತು. ಶಾಲೆಯ 800 ಮಕ್ಕಳು ತಮ್ಮ ತಂದೆ ತಾಯಿಗಳ ಪಾದಪೂಜೆ ಮಾಡುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.
    ಕಾರ್ಯಕ್ರಮ ಉದ್ಘಾಟಿಸಿದ ಜಮಖಂಡಿಯ ಡಾ.ಈಶ್ವರ ಮಂಟೂರ ಮಾತನಾಡಿ, ನಾನು ತುಂಬ ಮಾತನಾಡಬೇಕು ಎಂದು ದೂರದಿಂದ ಬಂದಿದ್ದೆ, ಆದರೆ ಇಲ್ಲಿ ಮಕಕ್ಕಳು ತಂದೆ-ತಾಯಿ ಪಾದಪೂಜೆ ಮಾಡುವ ಸನ್ನಿವೇಶ ನನ್ನ ಹೃದಯ ತುಂಬಿ ಬಿಟ್ಟಿತು. ಇಲ್ಲಿ ಪಾಲ್ಗೊಂಡ ಎಲ್ಲರ ಹೃದಯ ತುಂಬಿದ್ದರಿಂದ ನನ್ನ ಮಾತು ಯಾರ ಹೃದಯದಲ್ಲೂ ಹಿಡಿಸುವುದಿಲ್ಲ ಎಂದು ಬಣ್ಣಿಸಿದರು.
    ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ 2020ರಲ್ಲಿ ಭಾರತ ಬದಲಾಗಲಿದೆ ಎಂದು ಹೇಳಿದ್ದರು. ಆ ಬದಲಾವಣೆ ಗಾಳಿ ಕೋಟನೂರ ಮಠದಿಂದ ಬೀಸುತ್ತಿದೆ. ಆ ಗಾಳಿ ರಾಷ್ಟ್ರವ್ಯಾಪಿ ಪಸರಿಸಿ ಭವ್ಯ ಭಾರತ ನಿರ್ಮಾಣಕ್ಕೆ ನಾಂದಿ ಹಾಡಲಿದೆ ಎಂದರು.
    ಚಿಕ್ಕೋಡಿ ನೈಜ ಶಾಲೆ ಶಿಕ್ಷಕ ವಿರೇಶ ಪಾಟೀಲ್ ವಿಶೇಷ ಉಪನ್ಯಾಸ ನೀಡಿ, ತಂದೆ ತಾಯಿಗಳ ಪಾದ ಮುಟ್ಟಿ ನಮಸ್ಕಾರ ಮಾಡಿದಾಗ ಸಿಗುವ ಆನಂದ ಮತ್ತೆ ಯಾವುದರಲ್ಲೂ ಸಿಗುವುದಿಲ್ಲ. 10 ಸಾವಿರ ವರ್ಷದಿಂದ ಭಾರತ ಸಂಸ್ಕೃತಿ ಶ್ರೀಮಂತಿಕೆಯಿಂದ ಮೆರೆಯುತ್ತಿದೆ. ಆದರೆ ಇತ್ತೀಚಿಗೆ ಪಾಶ್ಚಾತ್ತ್ಯರ ಹಾಳು ಸಂಸ್ಕೃತಿಗೆ ಮಾರು ಹೋಗಿ ನಮ್ಮತನ ಮರೆಯುತ್ತಿದ್ದೇವೆ. ನಾವು ಮರೆಯುತ್ತಿರುವ ಹಳೇ ಸಂಸ್ಕಾರವನ್ನು ಕೋಟನೂರ ಮಠ ನೆನಪಿಸಿಕೊಡುವ ಪ್ರಯತ್ನ ಮಾಡಿದ್ದನ್ನು ಶ್ಲಾಘಿಸಿದರು.
    ಮುಗಳಖೋಡ, ಜಿಡಗಾ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ, ದಕ್ಷಿಣ ವಲಯ ಬಿಇಒ ವೀರಣ್ಣ ಬಮ್ಮನಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ, ಎಚ್.ಎಂ. ವಿರೂಪಾಕ್ಷಯ್ಯ, ವೀರಣ್ಣ ಎಕಲಾರಕರ್, ಮುರಳೀಧರ, ಯುನೈಟೆಡ್ ಆಸ್ಪತ್ರೆಯ ಡಾ.ವಿಕ್ರಮ ಸಿದ್ದಾರಡ್ಡಿ ಉಪಸ್ಥಿತರಿದ್ದರು. ರುದ್ರಯ್ಯ ಸ್ವಾಮಿ ಸ್ವಾಗತಿಸಿದರು. ಬಸಯ್ಯ ಮಠಪತಿ ವಂದಿಸಿದರು. ಅಮೂಲ್ಯ ನಿರೂಪಣೆ ಮಾಡಿದರು. 

    ಭಾರತೀಯ ಭವ್ಯ ಪರಂಪರೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮಗೆ ಯುಗಾದಿ ಹೊಸ ವರ್ಷ. ಕ್ಯಾಲೆಂಡರ್ ಹೊಸ ವರ್ಷ ಆಚರಿಸಲೇಬೇಕು ಎಂದಿದ್ದರೆ ಮಾತಾ ಪಿತೃರ ಪಾದಪೂಜೆ ಮಾಡಿ ಆಚರಿಸಬೇಕು. ಕುಡಿದು ಕುಪ್ಪಳಿಸಿ ಆಚರಿಸುವ ಹೊಸ ವರ್ಷ ನಮಗೆ ಮಾದರಿಯಾಗಬಾರದು.
    | ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ
    ಪೀಠಾಧಿಪತಿ, ಮುಗಳಖೋಡ-ಜಿಡಗಾ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts