More

    ಹುಲ್ಲೂರ ಕಾಲೇಜ್ ಸ್ಥಳಾಂತರಕ್ಕೆ ವಿರೋಧ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
    ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಕಾರಣದಿಂದಾಗಿ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿರುವ ವೆಂಕನಗೌಡ ಹನುಮಂತಗೌಡ ಕೆಂಚನಗೌಡ್ರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯವನ್ನು ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಹುದ್ದೆ ಸಹಿತ ಸ್ಥಳಾಂತರಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹುಲ್ಲೂರಿನ ಸರ್ಕಾರಿ ಕಾಲೇಜ್ ಅನ್ನು ಬೇಡಿಕೆ ಹೆಚ್ಚಿರುವ ನರೇಗಲ್ಲನ ಸರ್ಕಾರಿ ಕಾಲೇಜಿಗೆ ಸ್ಥಳಾಂತರಿಸಬೇಕು ಎಂದು ವಿದ್ಯಾರ್ಥಿಗಳ ಪಾಲಕರು, ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.
    ಪಟ್ಟಣದ ಸರ್ಕಾರಿ ಪಿಯು ಕಾಲೇಜ್​ನಲ್ಲಿ ಓದುವ ಉದ್ದೇಶದಿಂದ ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಲಾಖೆ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶವಿಲ್ಲ. ಹೀಗಾಗಿ, ಪ್ರಥಮ ಪಿಯುಸಿಗೆ ಸೀಟು ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸ್ಥಳೀಯವಾಗಿ ಇನ್ನೊಂದು ಸರ್ಕಾರಿ ಪಿಯು ಕಾಲೇಜಿನ ಅಗತ್ಯವಿದೆ. ಹೀಗಾಗಿ, ಹುಲ್ಲೂರಿನ ಸರ್ಕಾರಿ ಪಿಯು ಕಾಲೇಜ್ ಅನ್ನು ನರೇಗಲ್ಲಿಗೆ ಸ್ಥಳಾಂತರಿಸಬೇಕು ಎಂಬ ಕೂಗು ಜನರಿಂದ ಕೇಳಿ ಬಂದಿದೆ.
    ಗುಣಮಟ್ಟದ ಶಿಕ್ಷಣದ ಜತೆಗೆ ಮೂಲಸೌಕರ್ಯ ಇರುವ ಕಾರಣದಿಂದ ನರೇಗಲ್ಲನ ಸರ್ಕಾರಿ ಪಿಯು ಕಾಲೇಜಿಗೆ ನರೇಗಲ್ಲ, ಅಬ್ಬಿಗೇರಿ, ಜಕ್ಕಲಿ, ಕೋಟುಮಚಗಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ಮಲ್ಲಾಪೂರ, ಕೋಚಲಾಪೂರ, ಹೊಸಳ್ಳಿ, ಬೂದಿಹಾಳ, ಮಲ್ಲಾಪೂರ ಸೇರಿ ಕಲ್ಯಾಣ ಕರ್ನಾಟಕ ಭಾಗದ ತೊಂಡಿಹಾಳ, ಬಂಡಿಹಾಳ, ಕರಮುಡಿ, ಬಿನ್ನಾಳ, ಮುಧೋಳ, ಹಂಚಿನಾಳ, ಕುಕನೂರ, ಯಲಬುರ್ಗಾ ಗ್ರಾಮಗಳ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಆದರೆ, ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ನೀಡಲು ಅವಕಾಶ ಇಲ್ಲದ ಕಾರಣ ನೂರಾರು ವಿದ್ಯಾರ್ಥಿಗಳು ಸೀಟು ಸಿಗದೆ ಮರಳಿ ಹೋಗುತ್ತಿದ್ದಾರೆ.
    ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರ ನರಗುಂದ ಮತಕ್ಷೇತ್ರಕ್ಕೆ ಒಳಪಡುವ ಹುಲ್ಲೂರು ಗ್ರಾಮದ ಸರ್ಕಾರಿ ಪಿಯು ಕಾಲೇಜ್ ಅನ್ನು 5 ವರ್ಷಗಳ ಹಿಂದೆ ಸಚಿವರೇ ಉದ್ಘಾಟಿಸಿದ್ದರು. ಆದರೆ, ವಿದ್ಯಾರ್ಥಿಗಳ ಕೊರತೆಯಿಂದ ಕಾಲೇಜ್ ಮುಚ್ಚುವ ಸ್ಥಿತಿಗೆ ಬಂದಿದೆ. ಈ ಹಿಂದೆ ರೋಣ ಪಟ್ಟಣದ ಸರ್ಕಾರಿ ಪದವಿ ಕಾಲೇಜ್ ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆಯಿಂದ ಬಾದಾಮಿ ತಾಲೂಕಿಗೆ ಸ್ಥಳಾಂತರಗೊಂಡಿದೆ. ಹೀಗೆ ಒಂದೊಂದಾಗಿ ಕಾಲೇಜ್​ಗಳು ಸ್ಥಳಾಂತರಗೊಳ್ಳುತ್ತ ಹೋದರೆ ಸರ್ಕಾರಿ ಕಾಲೇಜ್​ಗಳಿಲ್ಲದೆ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಸರ್ಕಾರಿ ಕಾಲೇಜ್​ಗಳನ್ನು ಉಳಿಸಿಕೊಳ್ಳಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.

    ಕಚೇರಿ ಸೇರಿ ಏಳು ಬೋಧನಾ ಕೊಠಡಿಗಳನ್ನು ಹೊಂದಿರುವ ನರೇಗಲ್ಲ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಕ್ಕೆ ಪ್ರಥಮ ಪಿಯುಸಿಗೆ 229 ವಿದ್ಯಾರ್ಥಿಗಳು ಹಾಗೂ ದ್ವಿತೀಯ ವಿಭಾಗದಲ್ಲಿ 135 ವಿದ್ಯಾರ್ಥಿಗಳು ಓದುತ್ತಿದ್ದಾರೆ. 14 ಹುದ್ದೆ ಮಂಜೂರಾಗಿದ್ದು, ಸದ್ಯ ಒಂಬತ್ತು ಸಿಬ್ಬಂದಿ ಇದ್ದಾರೆ. ಇಂಗ್ಲಿಷ್, ಅರ್ಥಶಾಸ್ತ್ರ, ಗಣಿತ ವಿಷಯದ ಹುದ್ದೆಗಳು ಖಾಲಿ ಇವೆ. ಈ ಹಿನ್ನೆಲೆಯಲ್ಲಿ ಹುಲ್ಲೂರ ಸರ್ಕಾರಿ ಪಿಯು ಕಾಲೇಜ್ ಅನ್ನು ಸಿಬ್ಬಂದಿ ಸಹಿತ ನರೇಗಲ್ಲಿಗೆ ಸ್ಥಳಾಂತರ ಮಾಡಿದರೆ ಇಲ್ಲಿನ ಮಕ್ಕಳ ಬೋಧನೆಗೆ ಅನುಕೂಲವಾಗುತ್ತದೆ. ಜತೆಗೆ ಸಿಬ್ಬಂದಿ ಕೊರತೆ ನಿಭಾಯಿಸಿದಂತಾಗುತ್ತದೆ.
    | ಆನಂದ ಕುಲಕರ್ಣಿ
    ನರೇಗಲ್ಲ ಪಿಯು ಕಾಲೇಜ್ ಕಟ್ಟಡಕ್ಕೆ ಭೂಮಿ ನೀಡಿದ ದಾನಿ

    ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರ ಪ್ರಯತ್ನದಿಂದ ಹುಲ್ಲೂರು ಸರ್ಕಾರಿ ಪಿಯು ಕಾಲೇಜ್ ಸ್ಥಳಾಂತರ ಪ್ರಕ್ರಿಯೆ ತಡೆಹಿಡಿಯಲಾಗಿದೆ. ಕಾಲೇಜ್ ಅನ್ನು ಹುಲ್ಲೂರಿನಲ್ಲಿಯೇ ಮುಂದುವರಿಸುವಂತೆ ಅನೇಕ ಸಂಘ- ಸಂಸ್ಥೆಗಳು ಮನವಿ ಸಲ್ಲಿಸಿವೆ. ಅವುಗಳನ್ನು ಪಿಯು ಮಂಡಳಿಗೆ ಕಳುಹಿಸಲಾಗಿದೆ. ಈಗಾಗಲೇ 30 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಸದ್ಯಕ್ಕೆ ಯಾವುದೇ ಆತಂಕವಿಲ್ಲ. ಮುಂದಿನ ವರ್ಷ ಮತ್ತೆ ದಾಖಲಾತಿಯಲ್ಲಿ ವ್ಯತ್ಯಯವಾದರೆ ಕಾಲೇಜ್ ಉಳಿಯುವುದು ಕಷ್ಟಸಾಧ್ಯ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದಲ್ಲಿ, ಕಾಲೇಜ್ ಯಥಾಸ್ಥಿತಿಯಲ್ಲಿ ಹುಲ್ಲೂರಿನಲ್ಲಿ ಉಳಿಯಲಿದೆ.
    | ಎಂ.ಎಂ. ಕಾಂಬಳೆ, ಡಿಡಿಪಿಯು


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts