More

    ಯಗಟಿ ಗ್ರಾಮಕ್ಕೆ ಕೆಪಿಎಸ್ ಮಂಜೂರು ಮಾಡಿಸಲು ಪ್ರಯತ್ನ

    ಕಡೂರು: ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಯಗಟಿ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

    ಯಗಟಿ ಗ್ರಾಮದಲ್ಲಿ ಬುಧವಾರ ಪದವಿಪೂರ್ವ ಕಾಲೇಜುಗಳ ಮೂಲ ಸೌಲಭ್ಯ ಅನುದಾನದ 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
    ಕಾಲೇಜಿಗೆ ಗುಣಮಟ್ಟದ ಕಟ್ಟಡ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಎರಡು ಕಟ್ಟಡ ನಿರ್ಮಾಣದ ಬೇಡಿಕೆ ಈಡೇರಿಸಲಾಗುವುದು. ವಾಣಿಜ್ಯ ವಿಭಾಗ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಕಾಲೇಜುಗಳು ಅಭಿವೃದ್ಧಿ ಆಗಬೇಕಾದರೆ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ನಡುವೆ ಸಮನ್ವಯ ಬಹುಮುಖ್ಯ. ಪ್ರೌಢಶಾಲೆ ದುರಸ್ತಿಗೂ ಅನುದಾನ ನೀಡಲಾಗುವುದು. ಈ ಭಾಗದ ಸಣ್ಣೇನಹಳ್ಳಿ ಗ್ರಾಮ ವ್ಯಾಪ್ತಿಗೆ ಮುರಾರ್ಜಿ ವಸತಿ ಶಾಲೆ ಮಂಜೂರಾಗಿದೆ. ಯಗಟಿ ಭಾಗದ ಮುರಾರ್ಜಿ ಶಾಲೆಯನ್ನು ಸಣ್ಣೇನಹಳ್ಳಿ ಭಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
    ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಸಂಸ್ಕೃತಿಯ ಪರಂಪರೆ ಬೆಳೆಸುತ್ತಿರುವ ಯಗಟಿ ಹೋಬಳಿ ಕೇಂದ್ರದಲ್ಲಿ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಮಾಡಬೇಕಿದೆ. ಶಿಕ್ಷಣಕ್ಕೆ ಪೂರಕವಾಗಿ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಸರ್ಕಾರಿ ಜಾಗದಲ್ಲಿ ಕನಿಷ್ಠ 5 ಎಕರೆಯನ್ನು ಕಾಲೇಜಿನ ಅಭಿವೃದ್ಧಿಗಾಗಿ ಮೀಸಲಿಟ್ಟರೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
    ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮೂಲ ಸೌಲಭ್ಯಗಳ ಜತೆಗೆ ಗುಣಮಟ್ಟದ ಶಿಕ್ಷಣ ದೊರಕಿದಾಗ ಉತ್ತಮ ಕಾಲೇಜು ಎಂಬ ಹೆಗ್ಗಳಿಕೆ ದೊರೆಯಲಿದೆ. ಈ ಹಿಂದಿನ ಎಲ್ಲ ಶಾಸಕರ ಪ್ರಯತ್ನದಿಂದ ಯಗಟಿ ಹೋಬಳಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.
    ಕಾಲೇಜಿನ ಪ್ರಾಚಾರ್ಯ ಜಿ.ರೇವಣ್ಣ ಮಾತನಾಡಿ, ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಹಿತದೃಷ್ಟಿಯಿಂದ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಆರಂಭಿಸಲು ಹೆಚ್ಚುವರಿ ಎರಡು ಕೊಠಡಿ, ಕಾಂಪೌಂಡ್ ಮತ್ತು ಶೌಚಗೃಹ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದರು.
    ಕಡೂರು ಪ್ರತ್ಯೇಕ ಜಿಲ್ಲೆ ಕೂಗು: ಸರ್ಕಾರ ನೀಡುವ ಸೌಲಭ್ಯಗಳಲ್ಲಿ ಹೆಚ್ಚಿನ ಪಾಲು ಜಿಲ್ಲಾ ಕೇಂದ್ರಕ್ಕೆ ಹೋಗುತ್ತದೆ. ಜಿಲ್ಲೆ ಎಂದರೆ ಅದರಲ್ಲಿ ಕಡೂರು ತಾಲೂಕು ಸಹ ಇದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಜಿಲ್ಲಾ ಮಟ್ಟದ ಸಭೆಗಳಲ್ಲಿ ಕೇವಲ ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗುತ್ತವೆ ಎಂದು ಕೆ.ಎಸ್.ಆನಂದ್ ಬೇಸರ ವ್ಯಕ್ತಪಡಿಸಿದರು. ಹಾಗಾಗಿ ಕಡೂರನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂಬ ಕೂಗು ಆರಂಭಿಸಲಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೈ.ಎಸ್.ರವಿಪ್ರಕಾಶ್ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳು ಸಮರ್ಪಕವಾಗಿರಬೇಕು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲು ಬಹುತೇಕ ಹುದ್ದೆಗಳು ಖಾಲಿ ಇವೆ. ಇದರತ್ತ ಶಾಸಕರು ಗಮನ ಹರಿಸಬೇಕು. ಕಡೂರು ಪ್ರತ್ಯೇಕ ಜಿಲ್ಲೆ ಆಗಬೇಕೆಂಬ ಶಾಸಕರ ಆಶಯಕ್ಕೆ ನನ್ನ ಮತ್ತು ಮಾಜಿ ಶಾಸಕ ವೈಎಸ್‌ವಿ ದತ್ತ ಅವರ ಸಹಮತವಿದೆ ಎಂದರು.
    ಯಗಟಿ ಗ್ರಾಪಂ ಅಧ್ಯಕ್ಷೆ ಕಲಾವತಿ ವೆಂಕಟೇಶ್, ಉಪಾಧ್ಯಕ್ಷ ಮೂರ್ತಿ, ಸದಸ್ಯರಾದ ಚನ್ನಪಿಳ್ಳೇ ಗೋವಿಂದಪ್ಪ, ಜ್ಯೋತಿ, ಗಾಯತ್ರಿ, ಮುಖಂಡರಾದ ವೈ.ಕೆರಂಗಪ್ಪ, ರಾಜಪ್ಪ, ಡಿ.ಉಮೇಶ್, ಷಣ್ಮುಖಭೋವಿ, ಪ್ರಾಚಾರ್ಯ ರಾಜಪ್ಪ, ಓಂಕಾರಮೂರ್ತಿ ಪಿಎಸ್‌ಐ ರಂಗನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts