More

    ಹುಲೇಕಲ್ ನಾಡಕಚೇರಿಗೆ ಬೇಕಿದೆ ಕಾಯಕಲ್ಪ

    ಶಿರಸಿ: ತಾಲೂಕಿನ ಹುಲೇಕಲ್ ಹೋಬಳಿಯಲ್ಲಿ ಬ್ರಿಟಿಷ್ ಕಾಲಾವಧಿಯಲ್ಲಿ ನಿರ್ವಿುಸಿದ್ದ ನಾಡ ಕಚೇರಿ ಕಟ್ಟಡ ಶಿಥಿಲವಾಗಿ ವರ್ಷಗಳು ಕಳೆದಿವೆ. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜತೆಗೆ ಸಾರ್ವಜನಿಕರೂ ಜೀವ ಭಯದ ನಡುವೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

    ಹುಲೇಕಲ್​ನಲ್ಲಿರುವ ಗ್ರಾಮ ಚಾವಡಿ ಹಲವು ದಶಕಗಳ ಇತಿಹಾಸ ಹೊಂದಿದೆ. ಸದ್ಯ ಇಡೀ ಕಟ್ಟಡ ಶಿಥಿಲಗೊಂಡಿದ್ದು, ಗೋಡೆಗಳು ಬಿರುಕು ಬಿಟ್ಟು ನಿಂತಿವೆ. ಮೇಲ್ಛಾವಣಿ ಗೆದ್ದಲು ತಿಂದು ಸಂಪೂರ್ಣ ಜೀರ್ಣಗೊಂಡಿದೆ. ಸುಣ್ಣ- ಬಣ್ಣ ಕಾಣದೆ ವರ್ಷಗಳು ಕಳೆದಿವೆ. ದುರಸ್ತಿಗಾಗಿ ಸಾಕಷ್ಟು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಈವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ.

    ಎಲ್ಲರಿಗೂ ಜೀವ ಭಯ: ನಾಡಕಚೇರಿಯಲ್ಲಿ ಉಪತಹಸೀಲ್ದಾರ್, ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ವಿವಿಧ ಗ್ರಾಮಗಳ ಲೆಕ್ಕಾಧಿಕಾರಿಗಳು, ಡಿ ದರ್ಜೆ ಸಿಬ್ಬಂದಿ ಸೇರಿ 8 ನೌಕರರು ಕರ್ತವ್ಯ ನಿರ್ವಹಿಸುತ್ತಾರೆ. ಮಳೆಗಾಲದಲ್ಲಿ ಕಚೇರಿಯೊಳಗೆ ನೀರು ಬರುವ ಕಾರಣ ದಾಖಲೆ ಪತ್ರಗಳನ್ನು ಭದ್ರವಾಗಿಡಲು ಸಿಬ್ಬಂದಿ ಹರಸಾಹಸಪಡುತ್ತಾರೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವೊಮ್ಮೆ ಛಾವಣಿಯ ಮಣ್ಣು ಬಿದ್ದರೆ ಸಾಕು ಭಯದಿಂದ ಮೇಲೆ ನೋಡುವ ಸ್ಥಿತಿಯಿದೆ. ನಿತ್ಯ ನೂರಾರು ಜನರು ವಿವಿಧ ಕಾರ್ಯಗಳಿಗೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಶಿಥಿಲಾವಸ್ಥೆಯ ಈ ಕಟ್ಟಡದಲ್ಲಿ ಸಿಬ್ಬಂದಿಯೇ ಜೀವ ಕೈಯಲ್ಲಿ ಹಿಡಿದು ಕಾರ್ಯ ನಿರ್ವಹಿಸುತ್ತಿರುವಾಗ ಸಾರ್ವಜನಿಕರಿಗೆ ಒಳಬರುವ ಧೈರ್ಯ ಇಲ್ಲ. ಹೀಗಾಗಿ ಕಚೇರಿ ಹೊರಗಡೆಯೇ ಒಪ್ಪತ್ತು ನಿಂತಾದರೂ ತಮ್ಮ ಕೆಲಸ ಮಾಡಿಸಿಕೊಂಡು ತೆರಳುತ್ತಾರೆ. ಇದರಿಂದ ವಯಸ್ಸಾದವರು, ಅನಾರೋಗ್ಯಕ್ಕೊಳಗಾದ ಸಾರ್ವಜನಿಕರ ಸಂಕಷ್ಟ ಹೆಚ್ಚಿದೆ ಎನ್ನುತ್ತಾರೆ ಕೃಷಿಕ ರಾಮಕೃಷ್ಣ ಭಟ್ಟ ಹುಲೇಕಲ್.

    ನಾಡಕಚೇರಿ ವ್ಯಾಪ್ತಿಗೆ 10 ಪಂಚಾಯಿತಿ: ಹುಲೇಕಲ್, ಸೋಂದಾ, ವಾನಳ್ಳಿ, ಕೋಡ್ನಗದ್ದೆ, ಮೇಲಿನ ಓಣಿಕೇರಿ, ಸಾಲಕಣಿ ಸೇರಿ 10 ಪಂಚಾಯಿತಿಗಳು ನಾಡಕಚೇರಿ ವ್ಯಾಪ್ತಿಗೊಳಪಡುತ್ತವೆ. ಹೋಬಳಿ ಕೇಂದ್ರದಲ್ಲಿ ದೊರೆಯುವ ಸೇವೆಗಳಾದ ಇ- ನಕ್ಷೆ, ಇ- ಸ್ವತ್ತು, ಪೋಡಿ, ಹದ್ದುಬಸ್ತ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ್, ಚಿಕ್ಕ ಹಿಡುವಳಿದಾರ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ, ಮೈತ್ರಿ, ಮನಸ್ವಿನಿ, ಅನುಕಂಪದ ಆಧಾರದ ಮೇಲೆ ನೌಕರಿಗೆ ಸಂಬಂಧಿಸಿದ ಪ್ರಮಾಣಪತ್ರ, ವಾರಸಾ, ವಾಸ್ತವ್ಯ, ಭೂ ಹಿಡುವಳಿದಾರ, ಬೋನೋಫೈಡ್ ಸೇರಿ ಇತರ ಕಾರ್ಯಗಳಿಗಾಗಿ ಸಾರ್ವಜನಿಕರು ನಿತ್ಯ ನಾಡಕಚೇರಿಗೆ ಬರುತ್ತಾರೆ.

    ಶೌಚಗೃಹವಿಲ್ಲ: ವಿಧವಾ ವೇತನ ಸೇರಿ ವಿವಿಧ ಕಾರ್ಯಗಳಿಗೆ ಬರುವ ಮಹಿಳೆಯರು, ವಿವಿಧ ಕೆಲಸ, ಪ್ರಮಾಣಪತ್ರ ಪಡೆಯಲು ಆಗಮಿಸುವ ಸಾರ್ವಜನಿಕರು, ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗೆ ಇಲ್ಲಿ ಶೌಚಗೃಹದ ವ್ಯವಸ್ಥೆಯಿಲ್ಲ. ದೂರದಲ್ಲಿರುವ ಗ್ರಾಮ ಪಂಚಾಯಿತಿ ನಿರ್ವಿುಸಿದ ಸಾರ್ವಜನಿಕ ಮೂತ್ರಿಖಾನೆಗೆ ತೆರಳಬೇಕು.

    ಹುಲೇಕಲ್​ನಲ್ಲಿರುವ ನಾಡಕಚೇರಿ ಕಟ್ಟಡ ದುರಸ್ತಿಗೆ ಸಂಬಂಧಿಸಿ ಈಗಾಗಲೇ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ನೀಡಲಾಗಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ. ಅಷ್ಟರೊಳಗೆ ತೀರಾ ಅನನುಕೂಲವಾದಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುವುದು.
    | ಎಂ.ಆರ್. ಕುಲಕರ್ಣಿ ತಹಸೀಲ್ದಾರ್

    ಹುಲೇಕಲ್ ನಾಡಕಚೇರಿಯು ಅಧಿಕಾರಿಗಳು ಮತ್ತು ಜನರು ದಿನಪೂರ್ತಿ ಓಡಾಟವಿರುವ ಕಚೇರಿಯಾಗಿದೆ. ಹಲವು ವರ್ಷಗಳ ಹಿಂದೆ ಒಮ್ಮೆ ದುರಸ್ತಿ ಕಾರ್ಯವಾಗಿದ್ದರೂ ಈಗ ಇಡೀ ಕಟ್ಟಡ ಶಿಥಿಲಗೊಂಡಿದೆ. ಇಲ್ಲಿ ಪ್ರವೇಶಿಸಲು ಇಲಾಖೆ ಸಿಬ್ಬಂದಿ ಜತೆಗೆ ಸಾರ್ವಜನಿಕರಿಗೂ ಭಯವಾಗುತ್ತದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಎಲ್ಲರ ಸುರಕ್ಷತೆ ದೃಷ್ಟಿಯಿಂದ ಇದರ ಮರುನಿರ್ವಣದ ಬೇಡಿಕೆಗೆ ಸ್ಪಂದಿಸಬೇಕು.
    | ಗುರುಪ್ರಸಾದ ಹೆಗಡೆ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts