More

    ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೆಸಿಬಿ ಗರ್ಜನೆ

    ಜೊಯಿಡಾ: ಇಲ್ಲಿ ಮರ ಕಡಿಯುವುದು ಹಾಗಿರಲಿ; ಸಹಜವಾಗಿ ಬಿದ್ದ ಮರದ ಕಟ್ಟಿಗೆಯನ್ನೂ ಮುಟ್ಟುವಂತಿಲ್ಲ. ಯಾಕೆಂದರೆ, ಇದು ಮೀಸಲು ಅರಣ್ಯ. ಅದರಲ್ಲೂ ಕಾಳಿ ಹುಲಿ ಸಂರಕ್ಷಿತ ಪ್ರದೇಶ!

    ಆದರೆ, ಇಲ್ಲೊಂದು ವಿಪರ್ಯಾಸ ನಡೆಯುತ್ತಿದೆ. ಸಸಿ ಬೆಳೆಸಿ ಸಂರಕ್ಷಿಸುವ ಅರಣ್ಯ ಇಲಾಖೆಯವರೇ ಮರಗಳನ್ನು ಕಡಿದಿದ್ದಾರೆ. ಜೆಸಿಬಿಗಳು ಗರ್ಜಿಸುತ್ತಿವೆ.

    ಹೌದು! ಕುಳಗಿ ವನ್ಯಜೀವಿ ವಲಯದ ಅರಣ್ಯದ ನಡುವೆ ಇರುವ ಕಾಲುದಾರಿಯನ್ನು ದೊಡ್ಡ ದಾರಿಯಾಗಿ ಪರಿವರ್ತಿಸುವ ಕೆಲಸವನ್ನು ಇಲಾಖೆಯವರು ಮಾಡಿದ್ದಾರೆ. ಎರಡು ದಿನಗಳಿಂದ ಇಲ್ಲಿ ಬೃಹತ್ ಯಂತ್ರ ಬಳಸಿ ರಸ್ತೆ ನಿರ್ವಿುಸುತ್ತಿದ್ದಾರೆ. ಈ ವೇಳೆ 15 ಕ್ಕೂ ಹೆಚ್ಚು ಹಸಿ ಮರಗಳನ್ನು ಮತ್ತು 100ಕ್ಕೂ ಹೆಚ್ಚು ಗಿಡಗಳನ್ನು ಕಿತ್ತು ಹಾಕಲಾಗಿದೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ನಡೆದಿದೆ. ಪೂರ್ಣ ಕಾಮಗಾರಿ ಮುಗಿಯುವ ವೇಳೆಗೆ ನೂರಾರು ಮರಗಳ ಮಾರಣ ಹೋಮ ನಡೆಯಲಿದೆ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.

    ಹುಲಿ ಸಂರಕ್ಷಣಾ ಹೆಸರಿನಲ್ಲಿ ಬರುತ್ತಿರುವ ಕೋಟ್ಯಂತರ ಅನುದಾನವನ್ನು ಪರಿಸರ ರಕ್ಷಣೆಗೆ ಬಳಸುವುದನ್ನು ಬಿಟ್ಟು, ಅರಣ್ಯ ನಾಶ ಮಾಡುತ್ತಿರುವುದರ ಬಗ್ಗೆ ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾಕ್ಷಿ ನಾಶ ಯತ್ನ: ಜೆಸಿಬಿಯಿಂದ ಕಿತ್ತ ಹಸಿ ಮರಗಳು ಜನರಿಗೆ ಕಾಣಬಾರದು ಎಂಬ ಉದ್ದೇಶದಿಂದ ಮಣ್ಣು ಹಾಕಿ ಮುಚ್ಚಿದ್ದಾರೆ. ಜತೆಗೆ, ಅರಣ್ಯ ಇಲಾಖೆಯ ವಾಚರ್​ಗಳನ್ನು ಬಳಸಿ ಈ ಮರಗಳನ್ನು ಕತ್ತರಿಸಿ ಬೇರೆಡೆಗೆ ಸಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಕುಳಗಿ ವಲಯದ ಕಳ್ಳ ಬೇಟೆ ನಿಗ್ರಹ ಕ್ಯಾಂಪ್​ಗಳಿಂದ ವಾಚರ್​ಗಳನ್ನೂ ಸಂಜೆಯ ವೇಳೆಗೆ ಇಲ್ಲಿಗೆ ಕರೆಸಲಾಗುತ್ತಿದೆ. ಈ ಸಂಗತಿಗಳು ಕಣ್ಣಿಗೆ ಗೋಚರಿಸದಂತೆ ಸಾಕ್ಷಿ ನಾಶಕ್ಕೆ ಅರಣ್ಯ ಅಧಿಕಾರಿಗಳು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಹುಲಿ ವಾಸ ಸ್ಥಾನಕ್ಕೆ ಕುತ್ತು: ಹೊಸ ರಸ್ತೆ ಮಾಡಲಾಗುತ್ತಿರುವ ಇಲ್ಲಿ ಈ ಹಿಂದೆ ಕ್ಯಾಮರಾ ಟ್ರಾಪ್​ನಲ್ಲಿ ಹುಲಿ ಸಂಚರಿಸುತ್ತಿರುವ ಚಿತ್ರ ಸೆರೆಯಾಗಿದೆ. ಇಂಥ ಪ್ರದೇಶದಲ್ಲಿ ಅರಣ್ಯ ಇಲಾಖೆ ಹೊಸ ರಸ್ತೆ ನಿರ್ವಿುಸಿ ಪ್ರವಾಸಿಗರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಹುಲಿ ಆವಾಸ ಸ್ಥಾನಕ್ಕೆ ಕುತ್ತು ಬರುತ್ತದೆ. ಹುಲಿ ಸಂರಕ್ಷಿತ ಪ್ರದೇಶದ ಕಾಡಿನ ಸೂಕ್ಷ್ಮ ಪ್ರದೇಶದಲ್ಲಿ (ಕೋರ್ ಏರಿಯಾದಲ್ಲಿ) ಯಾವುದೇ ಬೃಹತ್ ಯಂತ್ರಗಳನ್ನು ಬಳಸಲು ವನ್ಯ ಜೀವಿ ಕಾಯಿದೆಯಲ್ಲಿ ಅವಕಾಶ ಇಲ್ಲ ಎಂಬುದಾಗಿ ಪರಿಸರ ತಜ್ಞರು ಹೇಳುತ್ತಾರೆ.

    ಹಿರಿಯ ಅರಣ್ಯ ಅಧಿಕಾರಿಗಳ ನಿರ್ದೇಶನದ ಮೇಲೆ ಈ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಜೆಸಿಬಿ ಯಂತ್ರವನ್ನು ರಸ್ತೆ ನಿರ್ವಣಕ್ಕೆ ಬಳಸಲು ಅವರೇ ಅನುಮತಿ ನೀಡಿದ್ದಾರೆ. ಸಫಾರಿಗಾಗಿ ಈ ರಸ್ತೆಯನ್ನು ಸರಿಪಡಿಸಲಾಗುತ್ತಿದೆ.

    | ವಿಶ್ವನಾಥ, ಉಪ ವಲಯ ಅರಣ್ಯಾಧಿಕಾರಿ ಕುಳಗಿ ವಲಯ

    ನಮ್ಮ ಸಿಬ್ಬಂದಿಯ ಜತೆ ಜೆಸಿಬಿ ಕೆಲಸ ಮಾಡುತ್ತಿದೆ. ಡಿಸಿಎಫ್ ಅವರ ಮಾರ್ಗದರ್ಶನ ಮತ್ತು ಅವರ ಅನುಮತಿ ಪಡೆದೆ ಈ ರಸ್ತೆ ಕಾಮಗಾರಿಯನ್ನು ಮಾಡುತ್ತಿದ್ದೇವೆ.

    | ಅಭಿಷೇಕ ನಾಯ್ಕ, ವಲಯ ಅರಣ್ಯ ಅಧಿಕಾರಿ ಕುಳಗಿ

    ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವಲಯದ ಅರಣ್ಯದೊಳಗೆ ರಸ್ತೆ ನಿರ್ಮಾಣ ಹಾಗೂ ಮರಗಳ ನಾಶದ ಬಗ್ಗೆ ಕೆಟಿಆರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಂದ ವರದಿ ಪಡೆದು ಕ್ರಮ ಕೈಗೊಳ್ಳುತ್ತೇನೆ.

    | ಸಂಜಯ ಮೋಹನ, ಪಿಸಿಸಿಎಫ್ ಬೆಂಗಳೂರು

    ಇಲ್ಲಿರುವ ಊರಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರೆ ಮೀಸಲು ಅರಣ್ಯದ ಕಾನೂನನ್ನು ಅಧಿಕಾರಿಗಳು ಹೇಳುತ್ತಾರೆ. ಉರುವಲಿಗೆ ಒಣ ಕಟ್ಟಿಗೆಯನ್ನು ತರಲು ಬಿಡುವುದಿಲ್ಲ. ಈಗ ಇವರೇ ಅರಣ್ಯದ ನಡುವೆ ಹೊಸ ರಸ್ತೆಯನ್ನು ಮರ-ಗಿಡ ಕಡಿದು ಮಾಡುತ್ತಿದ್ದಾರೆ. ಕೇಳುವವರು ಯಾರೂ ಇಲ್ಲ.

    | ಸೂರ್ಯಕಾಂತ ನಾಯ್ಕ, ಪಣಸೋಲಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts