More

    ಹುಬ್ಬಳ್ಳಿ ಫ್ಲೈಓವರ್​ನ ಒಂದು ಕಾಲು ಕಟ್!

    ಹುಬ್ಬಳ್ಳಿ: ಹುಬ್ಬಳ್ಳಿ ಫ್ಲೈ ಓವರ್​ನ 1 ಕಾಲು ಕತ್ತರಿಸಲಾಗಿದೆ. ಅಂದರೆ, ಒಂದು ಮಾರ್ಗದಲ್ಲಿ ಫ್ಲೈಓವರ್ ಇಲ್ಲ…

    ಅರೆ! ಏನಿದು? ಫ್ಲೈ ಓವರ್ ನಿರ್ವಣವಾಗುವ ಮೊದಲೇ ಕಾಲು ಕಟ್ ಮಾಡುವುದೆಂದರೆ…

    ಹೌದು. ಈಗಲೇ ಕತ್ತರಿಸಲಾಗಿದೆ. ಉದ್ದೇಶಿತ ವಿನ್ಯಾಸದಲ್ಲೇ ಬದಲಾವಣೆಯಾಗಿದ್ದು, ಮುಕ್ಕಾಗಿರುವಂಥ ಮೇಲ್ಸೇತುವೆ ರಸ್ತೆ ನಿರ್ಮಾಣ ಬಹುತೇಕ ಖಚಿತವಾಗಿದೆ.

    ಇದಕ್ಕೆ ಕಾರಣ- ದುಡ್ಡಿನ ಕೊರತೆ. ಪರಿಣಾಮ- ಇನ್ಮುಂದೆಯೂ ಇದೇ ಅವ್ಯವಸ್ಥೆ!

    ಹುಬ್ಬಳ್ಳಿ ಚನ್ನಮ್ಮ ವೃತ್ತವನ್ನು ಕೇಂದ್ರ ಬಿಂದು ಮಾಡಿಕೊಂಡು ಫ್ಲೈಓವರ್ ನಿರ್ವಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

    ಚನ್ನಮ್ಮ ವೃತ್ತದಲ್ಲಿಯ ಸಂಚಾರ ದಟ್ಟಣೆ ಗೊತ್ತೇ ಇದೆ. ಅದಕ್ಕೆ ಫ್ಲೈಓವರ್ ನಿರ್ವಿುಸಿ, ವೃತ್ತದಲ್ಲಿ ಸಂಗಮವಾಗುವ ಪ್ರಮುಖ ರಸ್ತೆಗಳನ್ನು ಸಂರ್ಪಸುವುದೇ ಪರಿಹಾರ.ಆಗ, ಚನ್ನಮ್ಮ ವೃತ್ತದ ಬಳಿ ನಿಲ್ಲುವ, ವಿವಿಧ ಮಾರುಕಟ್ಟೆಗೆ ಹೋಗುವ ವಾಹನಗಳನ್ನು ಹೊರತುಪಡಿಸಿ, ಉಳಿದವು ಫ್ಲೈ ಓವರ್​ನಲ್ಲೇ ಸಾಗುವುದರಿಂದ ದಟ್ಟಣೆ, ಅಪಘಾತ ಸಾಧ್ಯತೆ ತಪ್ಪುತ್ತದೆ. ಸಮಯವೂ ಉಳಿಯುತ್ತದೆ.

    ಇದೇ ಕಾರಣಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಗಂಟುಬಿದ್ದು ಫ್ಲೈ ಓವರ್ ಮಂಜೂರಿಯನ್ನೇನೋ ಮಾಡಿಸಿದ್ದಾರೆ. ಸಚಿವ ಶೆಟ್ಟರ್ ಸಹಕಾರ ನೀಡಿದ್ದಾರೆ.

    3 ಕೋಟಿ ರೂ. ಖರ್ಚು ಮಾಡಿ ಖಾಸಗಿ ವಿನ್ಯಾಸಗಾರರಿಂದ ನೀಲಿನಕ್ಷೆ ಮಾಡಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರ ಸವಿವರ ವರದಿ (ಡಿಪಿಆರ್) ಸಲ್ಲಿಸಲಿಕ್ಕೇ ತಡ ಮಾಡಿತ್ತು. ಅಂತೂ ಕೊನೆಗೆ ಸಲ್ಲಿಕೆಯಾಗಿ ಗಡ್ಕರಿಯವರು ಒಪ್ಪಿದ್ದಾರೆ. 294 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ನಿರ್ವಣಕ್ಕೆ ಇ ಟೆಂಡರ್ ಕರೆಯಲು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ.

    ಚನ್ನಮ್ಮ ವೃತ್ತದಲ್ಲಿ ರಿಂಗ್ ರೋಡ್ ನಿರ್ವಿುಸಿ ಸ್ಟೇಶನ್ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತದ ಮೂಲಕ ಮಹಿಳಾ ವಿದ್ಯಾಪೀಠದವರೆಗೆ ಚತುಷ್ಪಥ ಫ್ಲೈ ಓವರ್; ವಿಜಯಪುರ ರಸ್ತೆ ಗಿರಿಯಾಸ್ ಮಳಿಗೆ ಬಳಿಯಿಂದ ಚನ್ನಮ್ಮ ವೃತ್ತದ ರಿಂಗ್ ರಸ್ತೆಗೆ ದ್ವಿಪಥ; ಬೆಂಗಳೂರು ರಸ್ತೆಯಿಂದಲೂ ಚನ್ನಮ್ಮ ವೃತ್ತಕ್ಕೆ ದ್ವಿಪಥ ಸಂಪರ್ಕ…

    ಗಾಳಿ ದುರ್ಗಮ್ಮ ದೇವಸ್ಥಾನ ಬಳಿಯಿಂದ ಕ್ಲರ್ಕ್ ಇನ್ ಹೋಟೆಲ್​ವರೆಗೆ ಮೇಲ್ಸೇತುವೆಯಿಂದ ಗೋಕುಲ ರಸ್ತೆ ಸಂಪರ್ಕ (ಏಕಪಥ); ಗೋಕುಲ ರಸ್ತೆಯಿಂದ ಬಂದು ಸ್ಟೇಶನ್ ರಸ್ತೆ/ ವಿಜಯಪುರ ರಸ್ತೆಗೆ ತೆರಳಲು ಈಜುಗೊಳದ ಬಳಿ ಫ್ಲೈಓವರ್ ಏರಲು ಮಾರ್ಗ (ರ್ಯಾಂಪ್) ನಿರ್ವಣ… ಹೀಗಿದೆ ವಿನ್ಯಾಸ.

    ದುಡ್ಡು ಸಾಕಾಗುತ್ತದೆಯೆ ಎಂದು ಮರುವಿಮರ್ಶೆ ಶುರುವಾಗಿ, ಇಲ್ಲ ಎಂಬ ತೀರ್ವನಕ್ಕೆ ಬರಲಾಗಿದೆ. ಇನ್ನೂ ಹೆಚ್ಚು ಹಣ ಹೊಂದಿಸುವುದೂ ಕಷ್ಟ. ಹೀಗಾಗಿ, ಬೆಂಗಳೂರು ರಸ್ತೆಗೆ ಫ್ಲೈ ಓವರ್ ಕೈ ಬಿಟ್ಟು ನೀಲಿನಕ್ಷೆಯನ್ನು ಮುಕ್ಕಾಗಿಸುವುದು; ಉಳಿದ ಮೇಲ್ಸೇತುವೆಗಳನ್ನು 294 ಕೋಟಿ ರೂ.ಗಳಲ್ಲೇ ನಿರ್ವಿುಸುವುದು…

    ಹೀಗೆ ಪರಿಪೂರ್ಣವಲ್ಲದ ಯೋಜನೆ ಜಾರಿಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

    ಉದ್ದೇಶವೇ ವಿಫಲ

    ಹಳೇ ಪುಣೆ-ಬೆಂಗಳೂರು ರಸ್ತೆಯಲ್ಲಿ ಅತ್ಯಂತ ಹೆಚ್ಚು ದಟ್ಟಣೆಯಿರುತ್ತದೆ. ಹೀಗಾಗಿ, ಚನ್ನಮ್ಮ ವೃತ್ತದಿಂದ ಕಮರಿಪೇಟೆ ಪೊಲೀಸ್ ಠಾಣೆ ಸಮೀಪದವರೆಗೆ ಫ್ಲೈ ಓವರ್ ಮಾಡದಿದ್ದರೆ ಉದ್ದೇಶವೇ ಈಡೇರುವುದಿಲ್ಲ. ಧಾರವಾಡ, ಗೋಕುಲ, ವಿಜಯಪುರ, ಗದಗ ಮಾರ್ಗದಿಂದ ಬೆಂಗಳೂರು ರಸ್ತೆಗೆ ಹೋಗುವ ವಾಹನಗಳೂ ನೆಲ ಮಾರ್ಗದಲ್ಲೇ ಬರಬೇಕಾಗುತ್ತದೆ. ಟ್ರಾಫಿಕ್ ಕಿರಿಕಿರಿ ಹೆಚ್ಚಿ ಹುಬ್ಬಳ್ಳಿ ಹೆಸರಿಗೂ ಕುತ್ತು ಬರಲಿದೆ.

    ಯೋಜನಾ ವೈಫಲ್ಯ

    ಚನ್ನಮ್ಮ ವೃತ್ತದಿಂದ ಗಬ್ಬೂರಿನವರೆಗೂ ಫ್ಲೈ ಓವರ್ ನಿರ್ವಿುಸಿದರೆ ಮಾತ್ರ ದಟ್ಟಣೆ ಪೂರ್ತಿ ಕಡಿಮೆಯಾಗುತ್ತದೆ. ಅದಕ್ಕೆ ಮತ್ತೆ 300-350 ಕೋಟಿ ರೂ. ಬೇಕಾಗಬಹುದು. ಅಷ್ಟೆಲ್ಲ ತರಲು ಸಾಧ್ಯವೇ ಇಲ್ಲ ಎಂದು ಕೆಲ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟು, ನೀಲಿನಕ್ಷೆಯನ್ನೇ ಮುಕ್ಕಾಗಿಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೇ ನಂಬಿ ಜನಪ್ರತಿನಿಧಿಗಳು ತಲೆಯಾಡಿಸುವ ಹಂತದಲ್ಲಿರುವುದರಿಂದ ಫ್ಲೈ ಓವರ್ ಕಾಲು ಕುಂಟಾಗುವ ಅಪಾಯ ಎದುರಾಗಿದೆ. ಈಗಾಗಲೇ ಅನುಮೋದನೆಯಾಗಿರುವ ನೀಲಿನಕ್ಷೆಯಂತೆಯೇ ಜಾರಿ ಮಾಡಲು ಸಚಿವರಿಬ್ಬರು ಪಟ್ಟು ಹಿಡಿಯಬೇಕಿದೆ. ಮಾಜಿ ಮುಖ್ಯಮಂತ್ರಿ, ಕೈಗಾರಿಕಾ ಮಂತ್ರಿಯಾಗಿರುವ ಜಗದೀಶ ಶೆಟ್ಟರ್, ಕೇಂದ್ರದ ಪ್ರಭಾವಿ ಮಂತ್ರಿ ಜೋಶಿಯವರಿಗೆ ಇಷ್ಟು ಹಣ ಹೊಂದಿಸುವ ಸಾಮರ್ಥ್ಯ ಇಲ್ಲವೇ? ಅಥವಾ ಹೇಗೆ ಆಗುತ್ತೋ ಹಾಗೆ ನಡೆಯಲಿ ಎಂಬ ಧೋರಣೆಯೋ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಹಣದ ಕೊರತೆ, ಯೋಜನೆ ಜಾರಿಯಲ್ಲಿನ ಅಪ್ರಬುದ್ಧತೆ ಇತ್ಯಾದಿ ಕಾರಣಗಳಿಗೆ ಧಾರವಾಡ ಜುಬಿಲಿ ವೃತ್ತದಲ್ಲಿ ಅಲ್ಲಿನವರು ಫ್ಲೈಓವರ್ ಬೇಡ ಎಂದು ಹೇಳುವ ಮಟ್ಟಕ್ಕೆ ಹೋಗಿದ್ದಾರೆ.

    ಟೆಂಡರ್ ಆದರೆ ಮುಗಿಯಿತು

    ನೀಲಿನಕ್ಷೆ ಬದಲಿಸಬೇಕು ಎಂಬ ಕಾರಣಕ್ಕಾಗಿಯೇ ಇದುವರೆಗೆ ಟೆಂಡರ್ ಕರೆದಿರಲಿಲ್ಲ. ಈಗ ಬದಲಾವಣೆ ಮಾಡಲಾಗಿದ್ದು, ಟೆಂಡರ್ ಹಂತದಲ್ಲಿದೆ. ಒಮ್ಮೆ ಅಂತಿಮವಾದರೆ ನಂತರ ಬದಲಿಸುವುದು ಇನ್ನೂ ಕಷ್ಟ. ಹೀಗಾಗಿ, ಅತ್ಯಂತ ಶೀಘ್ರದಲ್ಲೇ ಜನಪ್ರತಿನಿಧಿಗಳು ಮಧ್ಯಪ್ರವೇಶ ಮಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts