More

    ಹುಬ್ಬಳ್ಳಿ-ಧಾರವಾಡ ಅವಳಿನಗರ ರಸ್ತೆಗಳಲ್ಲಿ ಹುಷಾರಾಗಿ ಸಾಗಿ!

    ಹುಬ್ಬಳ್ಳಿ: ಎರಡನೇ ರಾಜಧಾನಿ, ಉತ್ತರ ಕರ್ನಾಟಕದ ಹೆಬ್ಬಾಗಿಲು, ಸಾಂಸ್ಕೃತಿಕ ನಗರಿ, ವಾಣಿಜ್ಯ ನಗರಿ, ಸ್ಮಾರ್ಟ್​ಸಿಟಿ ಎಂದೆಲ್ಲ ಬಿಂಬಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡ ರಸ್ತೆಗಳ ನೈಜ ರೂಪವನ್ನು ಮಳೆಗಾಲದ ನಂತರ ನೋಡಬೇಕು.

    ಪ್ರತಿ ವರ್ಷ ಮಳೆಗಾಲದ ನಂತರ ಅವಳಿ ನಗರದ ರಸ್ತೆಗಳಲ್ಲಿ ನೂರಾರು ಹೊಂಡಗಳು ಕಾಣಿಸುತ್ತಿದ್ದು, ಹೊಂಡಗಳ ಮಧ್ಯೆ ರಸ್ತೆ ಹುಡುಕುವುದು ಸಾಮಾನ್ಯವಾದಂತಾಗಿದೆ. ಪ್ರತಿ ಬಾರಿ ಈ ಸಮಸ್ಯೆ ತಲೆದೋರುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾನಗರ ಪಾಲಿಕೆ ಮುಂದಾಗಿಲ್ಲ.

    ‘ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು’ ಎಂಬಂತೆ ಮೇಲ್ನೋಟಕ್ಕೆ ಸ್ಮಾರ್ಟ್​ಸಿಟಿ ಎಂದು ಬಿಂಬಿಸುತ್ತಿರುವ ಹುಬ್ಬಳ್ಳಿ-ಧಾರವಾಡದ ರಸ್ತೆಗಳು ಕಳೆದ ಸುಮಾರು 1 ತಿಂಗಳಿಂದ ಹದಗೆಟ್ಟಿವೆ. ಆದರೂ ಈ ರಸ್ತೆಗಳನ್ನು ಸುಧಾರಿಸಿ, ಸಮರ್ಪಕ ವಾಹನ ಹಾಗೂ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಂಡಬೇಕೆಂಬ ಇಚ್ಛಾಶಕ್ತಿ ಇಲ್ಲಿನ ಜನಪ್ರತಿನಿಧಿಗಳಿಗಾಗಲಿ ಹಾಗೂ ಅಧಿಕಾರಿಗಳಲ್ಲಾಗಲಿ ತಲೆದೋರುತ್ತಿಲ್ಲ.

    ಕೇಂದ್ರ ರಸ್ತೆ ನಿಧಿಯಡಿ ಪ್ರಮುಖ ಬಡಾವಣೆಗಳಲ್ಲಿ ಸಿಮೆಂಟ್ ರಸ್ತೆ ನಿರ್ವಿುಸಲಾಗುತ್ತಿದೆ. ಆದರೆ, ಒಳ ರಸ್ತೆಗಳಲ್ಲಿರುವ ಡಾಂಬರ್ ರಸ್ತೆಗಳಲ್ಲಿನ ಡಾಂಬರ್ ಮಳೆಯ ರಭಸಕ್ಕೆ ಕಿತ್ತು ಹೋಗಿವೆ.

    ಮಳೆಗಾಲದ ನಂತರ ಹೊಂಡಗಳನ್ನು ಮುಚ್ಚಿ, ತಾತ್ಕಾಲಿಕ ತೇಪೆ ಹಚ್ಚಿ ಕೋಟ್ಯಂತರ ರೂ.ಗಳನ್ನು ವ್ಯಯಿಸುವುದು ಪಾಲಿಕೆಯ ಪ್ರತಿ ವರ್ಷದ ಕೆಲಸವಾದಂತಾಗಿದೆ. ಆದರೆ, ರಸ್ತೆ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಗಟಾರು ನಿರ್ವಿುಸಿ, ರಸ್ತೆ ಕಾಪಾಡಿಕೊಳ್ಳಬೇಕೆಂಬ ಇಚ್ಛಾಶಕ್ತಿ ಅಧಿಕಾರಿಗಳಲ್ಲಿ ಮೂಡದಿರುವುದು ಇಲ್ಲಿನ ನಾಗರಿಕರ ದೌರ್ಭಾಗ್ಯ ಎಂದೇ ಹೇಳಬಹುದು.

    ಬೈಕ್ ಸವಾರರು, ಪಾದಚಾರಿಗಳು ಆಳಗಲದ ಹೊಂಡಗಳಲ್ಲಿ ಬಿದ್ದು ಗಾಯಗೊಳ್ಳುವುದು ಸಹ ಪ್ರತಿ ವರ್ಷದ ಸಾಮಾನ್ಯ ಸಂಗತಿಯಾಗಿದೆ. ಹೊಂಡಗಳನ್ನು ದಾಟಿ ಹೋಗುವುದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸರ್ಕಸ್ ಮಾಡಿದಂತೆ.

    ಹೊಂಡಗಳು ಬೀಳದಂತೆ ಗುಣಮಟ್ಟದ ರಸ್ತೆ ಹಾಗೂ ಗಟಾರುಗಳನ್ನು ನಿರ್ವಿುಸಲು ಇನ್ನಾದರೂ ಮಹಾನಗರ ಪಾಲಿಕೆ ಹಾಗೂ ಇತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ?

    ಮಳೆಯಿಂದಾಗಿ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚಲು ಈಗಾಗಲೇ ಸುಮಾರು 2.20 ಕೋಟಿ ರೂ. ಮೊತ್ತದ ಗುತ್ತಿಗೆ ನೀಡಲಾಗಿದೆ. ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಕಾಮಗಾರಿಗೆ ಅಡ್ಡಿಯಾಗಿದೆ. ಮಳೆ ಪೂರ್ಣಪ್ರಮಾಣದಲ್ಲಿ ನಿಂತ ನಂತರ ಹೊಂಡಗಳನ್ನು ಮುಚ್ಚಲಾಗುವುದು.

    |ಡಾ. ಸುರೇಶ ಇಟ್ನಾಳ ಹು-ಧಾ ಮಹಾನಗರ ಪಾಲಿಕೆ ಆಯುಕ್ತರು

    ಕವಲಗೇರಿ, ಚಂದನಮಟ್ಟಿ, ಕನಕೂರ ರಸ್ತೆ ಹಾಳು: ನಿರಂತರ ಮಳೆಯಿಂದಾಗಿ ಧಾರವಾಡ ತಾಲೂಕಿನ ಪ್ರಮುಖ ಗ್ರಾಮಗಳನ್ನು ಸಂರ್ಪಸುವ ರಸ್ತೆಗಳು ಗುಂಡಿಮಯವಾಗಿವೆ.

    ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರ ಗ್ರಾಮಗಳ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆ 4-5 ಗ್ರಾಮಗಳನ್ನು ಸಂರ್ಪಸುತ್ತಿದ್ದು, ಗುಂಡಿ ಬಿದ್ದ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕಾಗಿದೆ. ಇನ್ನು ಧಾರವಾಡ- ನವಲಗುಂದ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಧಾರವಾಡದಿಂದ ನವಲಗುಂದ ಮೂಲಕ ಹಲವು ಜಿಲ್ಲೆಗಳನ್ನು ಸಂರ್ಪಸುವ ಈ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರ್ ಕಿತ್ತು ಹೋಗಿದ್ದು, ನೀರು ನಿಲ್ಲುತ್ತಿದೆ.

    ಮತ್ತೊಂದೆಡೆ ಸಣ್ಣ ಮಳೆಯಾದರೂ ಹಾರೋಬೆಳವಡಿ ಬಳಿ ಕಿತ್ತು ಹೋಗಿರುವ ಸೇತುವೆ ಪಕ್ಕದ ತಾತ್ಕಾಲಿಕ ರಸ್ತೆ ಜಲಾವೃತವಾಗುತ್ತದೆ. ಧಾರವಾಡ- ಸವದತ್ತಿ ಮಾರ್ಗದ ಸಂಚಾರ ಸ್ಥಗಿತಗೊಳ್ಳುತ್ತದೆ. ಇದಕ್ಕೆ ಬದಲಿ ಮಾರ್ಗವಾಗಿ ಕಮಲಾಪುರ ಮಾರ್ಗವಾಗಿ ಯಾದವಾಡ- ಬೆಟಗೇರಿ ರಸ್ತೆಯನ್ನು ಅವಲಂಬಿಸಬೇಕಾಗುತ್ತದೆ. ಮಳೆಗಾಲ ಆರಂಭವಾದಾಗಿನಿಂದ ಇದೇ ಮಾರ್ಗದಲ್ಲಿ ಹೆಚ್ಚಿನ ವಾಹನಗಳ ಓಡಾಟದಿಂದ ಉತ್ತಮವಾಗಿದ್ದ ರಸ್ತೆ ಅಲ್ಲಲ್ಲಿ ಗುಂಡಿಮಯವಾಗಿದೆ.

    ಮಳೆಗಾಲ ಮುಗಿದ ನಂತರ ತುರ್ತಾಗಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎನ್. ಪಾಟೀಲ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts