More

    ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ

    ಹುಬ್ಬಳ್ಳಿ: ಹುಬ್ಬಳ್ಳಿ ನಗರ ಸೇರಿ ಧಾರವಾಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಭಾರಿ ಮಳೆ ಸುರಿಯಿತು.

    ಬೆಳಗ್ಗೆ ಎಂದಿನಂತೆ ಬಿಸಿಲಿತ್ತು. ಮಧ್ಯಾಹ್ನದ ನಂತರ ಪೂರ್ವ ಮತ್ತು ಪಶ್ಚಿಮ ದಿಕ್ಕಿನಿಂದ ಏಕಕಾಲಕ್ಕೆ ದಿಢೀರನೆ ಮೋಡಗಳು ಮುಸುಕಿಬಂದವು. ಇದರಿಂದ ಮಳೆಯ ಮುನ್ಸೂಚನೆ ಸಿಕ್ಕಿತ್ತು. ಸಂಜೆ 4.15ರ ವೇಳೆಗೆ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. ನಂತರ ತುಂತುರು ಮಳೆ ತಡ ರಾತ್ರಿಯವರೆಗೂ ಸುರಿಯಿತು.

    ಹುಬ್ಬಳ್ಳಿ ನಗರದ ನೃಪತುಂಗಬೆಟ್ಟ, ಉಣಕಲ್, ಕೇಶ್ವಾಪುರ, ಗೋಪನಕೊಪ್ಪ, ನಾಗಶೆಟ್ಟಿಕೊಪ್ಪ, ದುರ್ಗದಬೈಲ್, ಗದಗ ರಸ್ತೆ, ಕಾರವಾರ ರಸ್ತೆ ಇತ್ಯಾದಿ ಕಡೆ ಜೋರಾಗಿ ಮಳೆ ಸುರಿಯಿತು. ವಿಮಾನ ನಿಲ್ದಾಣ, ಗೋಕುಲ, ನವನಗರ ಮತ್ತು ಕೆಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು.

    ಮನೆ, ರಸ್ತೆಗೆ ನುಗ್ಗಿದ ನೀರು: ಮಳೆಯ ರಭಸ ಹೇಗಿತ್ತೆಂದರೆ ನಗರದ ಪ್ರಮುಖ ರಾಜಕಾಲುವೆಗಳು, ಗಟಾರಗಳು ತುಂಬಿ ಹರಿದು, ಅಕ್ಕಪಕ್ಕದ ಮನೆ, ರಸ್ತೆಗಳಿಗೆ ನೀರು ನುಗ್ಗಿತ್ತು. ನ್ಯೂ ಕಾಟನ್ ಮಾರ್ಕೆಟ್ ಸೇರಿ ಕೆಲವು ಭಾಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವಷ್ಟು ಪ್ರಮಾಣದ ನೀರು ರಸ್ತೆಗೆ ನುಗ್ಗಿತ್ತು.

    ವಿಶ್ವೇಶ್ವರ ನಗರ ತೆಗ್ಗಿನ ಶಾಲೆ ಹಿಂಭಾಗದಲ್ಲಿ, ಕೇಶ್ವಾಪುರ, ವಿದ್ಯಾನಗರ, ಹಳೇಹುಬ್ಬಳ್ಳಿ ಅರವಿಂದ ನಗರ, ದಾಜಿಬಾನ್ ಪೇಟೆ ತಗ್ಗು ಪ್ರದೇಶದಲ್ಲಿನ ಅನೇಕ ಮನೆಗಳಿಗೆ ನೀರು ನುಗ್ಗಿ ಒಂದಿಷ್ಟು ಹಾನಿಯಾಗಿದೆ.

    ಅರವಿಂದ ನಗರ, ವಾಳ್ವೇಕರ ಗಲ್ಲಿ ಸೇರಿ ಕೆಲವು ಕಡೆಗಳಲ್ಲಿ ಮರದ ಟೊಂಗೆಗಳು ಮುರಿದುಬಿದ್ದಿವೆ. ಮೇಲಿಂದ ಮೇಲೆ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು.

    ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಮಳೆ ಆಗಾಗ ಬರುವ ಅತಿಥಿಯಂತಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಶನಿವಾರ ಕೂಡ ಬಿಡಿ ಮೋಡಗಳಿಂದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts