More

    ಹುಬ್ಬಳ್ಳಿಯಲ್ಲಿ ಜಗ್ಗಲಗಿ ಹಬ್ಬ ಇಂದು

    ಹುಬ್ಬಳ್ಳಿ: ಹೋಳಿ ಹಬ್ಬದ ಅಂಗವಾಗಿ ಮಾ. 11ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಮೂರುಸಾವಿರ ಮಠದ ಮೈದಾನದಿಂದ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಆಯೋಜಿಸಲಾಗಿದ್ದು, ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದು ಆಯೋಜಕ ಮಹೇಶ ಟೆಂಗಿನಕಾಯಿ ತಿಳಿಸಿದರು.

    ಮೂರುಸಾವಿರ ಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂಸ್ಕೃತಿ, ಸಂಪ್ರದಾಯಗಳ ಮಹತ್ವ ಸಾರುವ ಮತ್ತು ಚರ್ಮವಾದ್ಯ ಪ್ರೋತ್ಸಾಹಿಸುವ ಉದ್ದೇಶದಿಂದ ನಾಲ್ಕನೇ ಬಾರಿಗೆ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಹಮ್ಮಿಕೊಳ್ಳಲಾಗುತ್ತಿದೆ. ಈ ಹಬ್ಬ 2016ರಿಂದ ಆರಂಭವಾಗಿದ್ದು, ಕಳೆದ ವರ್ಷ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಈ ವರ್ಷ ಅದ್ದೂರಿಯಾಗಿ ಮೈಸೂರು ದಸರಾ ಮಾದರಿಯಲ್ಲಿ ಜಗ್ಗಲಗಿ ಹಬ್ಬ ಆಚರಿಸಲಾಗುತ್ತಿದೆ. ಡಿಜೆ ಅಬ್ಬರದ ನಡುವೆಯೂ ಜಗ್ಗಲಗಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಲಿದ್ದಾರೆ ಎಂದರು. ಸ್ಥಳೀಯ 20 ತಂಡಗಳು ಸೇರಿ ಒಟ್ಟು 50 ತಂಡಗಳು ಭಾಗವಹಿಸಲಿವೆ. 412 ಸದಸ್ಯರು ಜಗ್ಗಲಗೆಯೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಭೋಗೇನಾಗರಕೊಪ್ಪ, ಪಾಳೆ, ತಾರಿಹಾಳ, ಶಿವಳ್ಳಿ, ಬೊಮ್ಮಸಮುದ್ರ, ಅಮ್ಮಿನಬಾವಿ ಮತ್ತಿತರ ಗ್ರಾಮಗಳಿಂದ ಜಾನಪದ ಕಲಾವಿದರು, ಸುಳ್ಳ ಗ್ರಾಮದ ದುರ್ಗಾದೇವಿ ಮಹಿಳಾ ಸಂಘದ ಡೊಳ್ಳು ಕುಣಿತ, ಜಗ್ಗಲಗಿ ತಂಡಗಳು ಭಾಗವಹಿಸಲಿವೆ. ಹುಬ್ಬಳ್ಳಿಯ ವಿವಿಧ ಸಂಘ ಸಂಸ್ಥೆಗಳು, ವ್ಯಾಪಾರಸ್ಥರು ಮೆರವಣಿಗೆಯುದ್ದಕ್ಕೂ ಅಲ್ಪೋಪಹಾರ, ತಂಪು ಪಾನೀಯ ವ್ಯವಸ್ಥೆ ಮಾಡಲಿದ್ದಾರೆ ಎಂದರು.

    ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಮಾಜಿ ಸದಸ್ಯ ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ತಿಪ್ಪಣ್ಣ ಮಜ್ಜಗಿ, ಸುಬ್ರಹ್ಮಣ್ಯ ಶಿರಕೋಳ, ರಾಜು ಕೋರ್ಯಾಣಮಠ, ಹನುಮಂತಪ್ಪ ದೊಡ್ಡಮನಿ, ರವಿ ನಾಯಕ, ಕಿರಣ ಉಪ್ಪಾರ ಮತ್ತಿತರರು ಇದ್ದರು.

    ಮೆರವಣಿಗೆ ಮಾರ್ಗಸೂಚಿ

    ಮೂರುಸಾವಿರ ಮಠದಿಂದ ಆರಂಭಗೊಂಡು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬಾನಿ ಓಣಿ, ಸ್ಟೇಷನ್ ರಸ್ತೆ, ಗಣೇಶಪೇಟ ವೃತ್ತ, ಬ್ರಾಡ್​ವೇ, ಷಾ ಬಜಾರ್, ಸೆಟ್ಲಮೆಂಟ್ ಮೂಲಕ ಸಾಗಿ ಗಂಗಾಧರ ನಗರ ಸಮುದಾಯ ಭವನದಲ್ಲಿ ಮುಕ್ತಾಯವಾಗಲಿದೆ.

    ಹಾನಗಲ್ಲದ ತಾರಕೇಶ್ವರ ಯುವಕ ಮಂಡಳದ ಬೇಡರ ವೇಷದ ತಂಡ, ಮಂಗಳೂರಿನ ರಾಧಾಕೃಷ್ಣ ಅಕಾಡೆಮಿಯ ಚಂಡೆ, ಮದ್ದಳೆ ತಂಡ ಹಾಗೂ ಮೈಸೂರಿನ ನಗಾರಿ ಚರ್ಮ ವಾದ್ಯಗಳು ಸೇರಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.

    | ಮಹೇಶ ಟೆಂಗಿನಕಾಯಿ ಆಯೋಜಕ

    =============

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts