More

    ಹುಬ್ಬಳ್ಳಿಯಲ್ಲಿ ಇಬ್ಬರ ಬರ್ಬರ ಕೊಲೆ

    ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಕಬ್ಬಿಣದ ರಾಡ್​ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಲ್ಲಿನ ಗೋಪನಕೊಪ್ಪ ಸಿದ್ಧರಾಮೇಶ್ವರ ನಗರದಲ್ಲಿ ಬುಧವಾರ ರಾತ್ರಿ ನಡೆದಿದ್ದು, ವಾಣಿಜ್ಯ ನಗರಿ ಜನತೆ ಬೆಚ್ಚಿ ಬಿದ್ದಿದ್ದಾರೆ.

    ಸಿದ್ಧರಾಮೇಶ್ವರ ನಗರದ ವರಾದ ನಿಯಾಜ್ ಅಬ್ದುಲ್​ಸಾಬ್ ಜೋರಮ್ಮನವರ (22) ಹಾಗೂ ಮಂಜುನಾಥ ಕಬ್ಬಿನ (30) ಹತ್ಯೆಯಾದವರು.

    ಗೌಂಡಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಹಾಗೂ ನಿಯಾಜ್ ಇಬ್ಬರೂ ಸ್ನೇಹಿತರು. ಅವಿನಾಶ ನರಗುಂದ ಹಾಗೂ ಶ್ರೀನಿವಾಸ ಎಂಬುವರ ಜತೆ ನಿಯಾಜ್ ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದ. ಆಗಾಗ ಗುರಾಯಿಸುವುದು, ಜಗಳವಾಡುವುದು ನಡೆದೇ ಇತ್ತು. ಇದೇ ವಿಚಾರವಾಗಿ ಅವಿನಾಶನು ನಿಯಾಜ್ ಹತ್ಯೆಗೆ ಹೊಂಚು ಹಾಕಿದ್ದ.

    ಬುಧವಾರ ರಾತ್ರಿ 11.30ಕ್ಕೆ ಮಂಜುನಾಥನು ಮನೆಯಲ್ಲಿ ಊಟ ಮಾಡಿ, ಪಾನ್ ತಿನ್ನಲೆಂದು ತಾಯಿಯ ಬಳಿ 10 ರೂ. ಪಡೆದು ಸ್ನೇಹಿತ ನಿಯಾಜ್ ಜತೆ ಸಿದ್ಧರಾಮೇಶ್ವರ ನಗರದ ಮೂರನೇ ಕ್ರಾಸ್ ಬಳಿಗೆ ಹೋಗಿದ್ದನು. ಇದೇ ವೇಳೆ ಅವಿನಾಶ ಮತ್ತು ಇತರ ನಾಲ್ವರು ಬಂದು ನಿಯಾಜ್​ಗೆ ಏಕಾಏಕಿ ರಾಡ್​ನಿಂದ ಹೊಡೆಯತೊಡಗಿದರು. ನಿಯಾಜ್​ನ ರಕ್ಷಣೆಗೆ ಮುಂದಾದ ಮಂಜುನಾಥನಿಗೂ ರಾಡ್​ನಿಂದ ಮನಬಂದಂತೆ ಥಳಿಸಿ ಪರಾರಿಯಾದರು.

    ಪಾನ್ ತಿಂದು ಬರುತ್ತೇನೆಂದು ಹೋದ ಮಗ ಬರಲಿಲ್ಲ ಎಂದು ಮಂಜುನಾಥನ ತಾಯಿ ಸರ್ಕಲ್ ಕಡೆ ಬಂದಾಗ ಮಂಜುನಾಥ ಹಾಗೂ ನಿಯಾಜ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಕೂಡಲೆ ಇಬ್ಬರನ್ನೂ ಕಿಮ್ಸ್​ಗೆ ಕರೆದೊಯ್ಯಲಾಯಿತಾದರೂ ಬದುಕಿಳಿಯಲಿಲ್ಲ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಜುನಾಥ ಹಾಗೂ ನಿಯಾಜ್ ವಿರುದ್ಧ ಈ ಹಿಂದೆ ಸಣ್ಣಪುಟ್ಟ ಕಳ್ಳತನ ಪ್ರಕರಣಗಳಿದ್ದವು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಆರ್. ದಿಲೀಪ, ಕೇಶ್ವಾಪುರ ಠಾಣೆ ಇನ್ಸ್​ಪೆಕ್ಟರ್ ಎಸ್.ಜಿ. ಕುಂಬಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮಾದಕ ದ್ರವ್ಯದ ನಂಟು ?
    ಗೋಪನಕೊಪ್ಪ ಸಿದ್ಧರಾಮ ನಗರದಲ್ಲಿ ನಡೆದ ನಿಯಾಜ್ ಹಾಗೂ ಮಂಜುನಾಥ ಎಂಬುವರ ಹತ್ಯೆ ಘಟನೆ ಹಿಂದೆ ಮಾದಕ ದ್ರವ್ಯದ ನಂಟು ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ನಿಯಾಜ್ ಮದ್ಯ ಸೇವಿಸಿ ಶ್ರೀನಿವಾಸ ಹಾಗೂ ಇತರರೊಂದಿಗೆ ಜಗಳವಾಡುತ್ತಿದ್ದ. ಇದರಲ್ಲಿ ಕೆಲವರು ಮಾದಕ ದ್ರವ್ಯಗಳಾದ ಗಾಂಜಾ, ವೈಟ್ನರ್, ಸಲ್ಯೂಶನ್​ಗಳನ್ನು ಸೇವಿಸುತ್ತಿದ್ದರೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ವಿಷಯವಾಗಿಯೂ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ನಾಲ್ವರ ಬಂಧನ
    ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕೇಶ್ವಾಪುರ ಠಾಣೆ ಇನ್ಸ್​ಪೆಕ್ಟರ್ ಸುರೇಶ ಕುಂಬಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಸಿದ್ಧರಾಮೇಶ್ವರ ನಗರದವರಾದ ಶ್ರೀನಿವಾಸ ಪರಶುರಾಮ ಹಿರೇಕುಂಬಿ (26), ಅವಿನಾಶ ಬಸವರಾಜ ನರಗುಂದ (29), ಸಂಜೀವ ರೇವಣಸಿದ್ದಪ್ಪ ವಡ್ಡರ (28) ಹಾಗೂ ಮಧು ಕಲ್ಮೇಶ ಹಾದಿಮನಿ (25) ಎಂಬುವರು ಬಂಧಿತರು ಎಂದು ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts