More

    ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್; ಕೆಎಸ್​ಸಿಎ ಮುಂದೆ ಬೇಡಿಕೆಯಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಬೆಂಗಳೂರು: ಹುಬ್ಬಳ್ಳಿಯಲ್ಲಿ ಅತ್ಯುತ್ತಮ ಕ್ರೀಡಾಂಗಣ ನಿರ್ವಣವಾಗಿದ್ದು, ಅಲ್ಲಿ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಏರ್ಪಡಿಸುವುದನ್ನು ತಾವು ಎದುರು ನೋಡುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮುಂದೆ ತಮ್ಮ ಅಭಿಲಾಷೆ ಹೊರಹಾಕಿದ್ದಾರೆ. ಜತೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಯೂನಿಪೋಲ್ ಫ್ಲಡ್ ಲೈಟಿಂಗ್ ಟವರ್​ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಯೂರೋಪ್​ನಲ್ಲಿ ಫುಟ್​ಬಾಲ್ ಕ್ರೀಡಾಂಗಣ, ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಶುಲ್ಕ ವಿಧಿಸುವ ಮಾದರಿಯಲ್ಲಿಯೇ ಕೆಎಸ್​ಸಿಎ ಕ್ರೀಡಾಂಗಣ ವೀಕ್ಷಣೆಗೆ ಶುಲ್ಕ ವಿಧಿಸಿದರೆ ಆದಾಯವೂ ಬರುತ್ತದೆ. ಕ್ರೀಡಾಂಗಣವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ನವೀನ ಆಲೋಚನೆಗಳನ್ನು ಕಾರ್ಯಗತಗೊಳಿಸಬಹುದೆಂದು ಸಲಹೆ ನೀಡಿದರು.

    ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾ ಸಂಸ್ಕೃತಿಯನ್ನು ಹುಟ್ಟುಹಾಕುವುದರ ಜತೆಗೆ ಇತರೆ ಕ್ರೀಡೆಗಳಿಗೂ ಆ ಸಂಸ್ಕೃತಿಯನ್ನು ಅನುಷ್ಠಾನಕ್ಕೆ ತರಲು ಪ್ರೇರಣೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಇಷ್ಟು ಅಚ್ಚುಕಟ್ಟಾಗಿ ಇರುವುದನ್ನು ನೋಡಿ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಚ್ಚುಕಟ್ಟುತನದ ಸಂಸ್ಕೃತಿ ಬೆಂಗಳೂರಿನಲ್ಲಿ ಫುಟ್ಬಾಲ್, ಹಾಕಿ ಕ್ರೀಡಾಂಗಣಗಳು ಉತ್ತಮವಾಗಿ ರೂಪುಗೊಳ್ಳಲು ಕಾರಣವಾಗಿವೆ. ಇಡೀ ಕ್ರೀಡಾ ಕ್ಷೇತ್ರದಲ್ಲಿ ಕೆಎಸ್​ಸಿಎ ತನ್ನ ಪ್ರಭಾವವನ್ನು ಬೀರಿದೆ ಎಂದರು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ಗೆ ಭಾರತ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ ವಿಶೇಷ ಸ್ಥಾನವಿದೆ. ಕ್ರಿಕೆಟ್ ದಿಗ್ಗಜರೆಲ್ಲ ಇಲ್ಲಿ ಆಟ ಆಡಿದ್ದಾರೆ. ಇಲ್ಲಿ ಆತ್ಮೀಯತೆ ಇದ್ದು, ಉತ್ತಮ ವಾತಾವರಣವಿದೆ. ಮಾಜಿ ಕ್ರಿಕೆಟಿಗರ ಬಗ್ಗೆ ಗೌರವ, ಮನ್ನಣೆ ಸಹ ಇರುವುದು ಒಂದು ಅತ್ಯುತ್ತಮ ಪರಂಪರೆ ಎಂದು ಹೇಳಿದರು. ಕ್ರೀಡಾ ಮತ್ತು ರೇಷ್ಮೆ ಸಚಿವ ನಾರಾಯಣಗೌಡ, ಸಚಿವ ಮುನಿರತ್ನ, ಕೆಎಸ್​ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಸಂತೋಷ್ ಮೆನನ್, ವಿನಯ ಮೃತ್ಯುಂಜಯ ಮೊದಲಾದವರು ಉಪಸ್ಥಿತರಿದ್ದರು.

    ಹಳೆಯ ನೆನಪಿನಂಗಳಕ್ಕೆ ಇಳಿದ ಸಿಎಂ: ಕ್ರಿಕೆಟ್ ಬಗೆಗಿನ ತಮ್ಮ ಆಸಕ್ತಿ, ಕ್ರಿಕೆಟಿಗರ ಜತೆಗಿನ ಒಡನಾಟ, ಕ್ರಿಕೆಟ್ ದಿಗ್ಗಜರ ಸಾಧನೆಯನ್ನು ಮೆಲುಕು ಹಾಕಿದ ಮುಖ್ಯಮಂತ್ರಿ, ರೋಚಕ ಕ್ರಿಕೆಟ್ ಪಂದ್ಯಗಳನ್ನು ಕೆಎಸ್​ಸಿಎನಲ್ಲಿ ವೀಕ್ಷಿಸಿದ್ದನ್ನು ಸ್ಮರಿಸಿದರು. ರೋಜರ್ ಬಿನ್ನಿ ಸೇರಿ ರಾಜ್ಯದ ಹಲವು ಆಟಗಾರರನ್ನು ಇದೇ ವೇಳೆ ನೆನಪಿಸಿಕೊಂಡರು. ಕ್ರೀಡಾಂಗಣದಲ್ಲಿ ಸರ್ವ ಸೌಲಭ್ಯಗಳೂ ಇವೆ. ಯೂನಿಪೋಲ್ ನಿರ್ವಿುಸಿ ಅಂತಾರಾಷ್ಟ್ರೀಯ ಮಟ್ಟದ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಳೇ ಚಿತ್ರಗಳನ್ನು ಪ್ರದರ್ಶಿಸಿರುವುದು ಕ್ರಿಕೆಟ್ ಚರಿತ್ರೆಯನ್ನು ಸ್ಮರಿಸಿದಂತಾಗುತ್ತದೆ. ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

    ರಾಜ್ಯದ ಬಾಕಿ ಉಳಿದ ಕೆಲಸಗಳನ್ನು ಮುಗಿಸುವ ಸಂಬಂಧ ವಿವಿಧ ಇಲಾಖೆ ಮುಖ್ಯಸ್ಥರ ಜತೆ ಚರ್ಚೆ ಮಾಡಲಾಯಿತು. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ದೆಹಲಿ ಪ್ರವಾಸ ಫಲಪ್ರದವಾಗಿದೆೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್; ಕೆಎಸ್​ಸಿಎ ಮುಂದೆ ಬೇಡಿಕೆಯಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ದೆಹಲಿ ಭೇಟಿ ಫಲಪ್ರದವೆಂದ ಮುಖ್ಯಮಂತ್ರಿ

    ಬೆಂಗಳೂರು: ತಮ್ಮ ದೆಹಲಿ ಭೇಟಿ ಬಗ್ಗೆ ಟೀಕೆ ಟಿಪ್ಪಣಿ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯ ಪರಿಣಾಮಗಳನ್ನು ಮಾಧ್ಯಮಗಳ ಮುಂದೆ ಪಟ್ಟಿ ಮಾಡಿದ್ದಾರೆ. ಎರಡು ದಿನಗಳ ದೆಹಲಿ ಪ್ರವಾಸವು ಬಹಳ ಫಲಪ್ರದವಾಗಿದೆ. ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದನೆ ನೀಡಿದೆ ಎಂದು ತಿಳಿಸಿದರು.

    • ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಬೆಂಗಳೂರು ಉಪನಗರ ರಿಂಗ್ ರಸ್ತೆ ದಾಬಸ್ ಪೇಟೆಯಿಂದ ಮೈಸೂರು ರಸ್ತೆವರೆಗೆ ಆಗಬೇಕಿದ್ದು ಅದನ್ನು ಕ್ಲಿಯರ್ ಮಾಡಿಸಲಾಗಿದೆ.
    • ವಿಜಯಪುರ-ಸಂಕೇಶ್ವರವರೆಗಿನ ರಸ್ತೆ ವಿಸ್ತರಣೆಗೂ ಒಪ್ಪಿಕೊಂಡಿ ದ್ದಾರೆ. ಸಮಗ್ರ ಯೋಜನಾ ವರದಿ ತಯಾರು ಮಾಡುತ್ತಿದ್ದಾರೆ.
    • 4 ಹೈವೇಗಳನ್ನು ಭಾರತ್ ಮಾಲಾ ಯೋಜನೆಯಡಿ ಕೈಗೊಳ್ಳಲು ಒಪ್ಪಿದ್ದಾರೆ. 2ನೇ ಹಂತದಲ್ಲಿ ನಮ್ಮ ಬೇಡಿಕೆ ಪರಿಗಣನೆಯಾಗಲಿದೆ.
    • ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಗ್ರಾಮೀಣ ಕನೆಕ್ಟಿವಿಟಿಗೆ ವಿಶೇಷ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶದ ಡಿಜಿಟಲೈಸೇಷನ್ ಆಪ್ಟಿಕಲ್ ಫೈಬರ್, ಕೇಬಲಿಂಗ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ.
    • ಬೆಂಗಳೂರು ಮತ್ತು ಕೋಲಾರ ನಡುವೆ ಹಾರ್ಡ್​ವೇರ್ ಪಾರ್ಕ್ ಮಾಡಬೇಕೆಂಬ ತಿರ್ವನವಾಗಿದೆ.
    • ರಾಜ್ಯದಲ್ಲಿ ಕೌಶಲ ವಿವಿ ಆರಂಭಿಸಬೇಕೆಂದು ಕೇಂದ್ರ ಬಯಸಿದೆ. ಈ ಬಗ್ಗೆ ಚರ್ಚೆ ಮಾಡಿ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದೇವೆ.
    • ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಜತೆ ಮಾತುಕತೆ ನಡೆಸಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ.
    • ರೈಲ್ವೆ ಸಚಿವರ ಜತೆ ಸಭೆ ನಡೆಸಿ ಸಬ್​ಅರ್ಬನ್ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದ ಕಾಮಗಾರಿ ಕೂಡಲೇ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ತುಮಕೂರಿನಿಂದ ದಾವಣಗೆರೆ, ಹುಬ್ಬಳ್ಳಿಯಿಂದ ಬೆಳಗಾವಿ, ಬೀದರ್ – ಕಲಬುರಗಿ ಮಾರ್ಗಗಳನ್ನು ಆದಷ್ಟು ಬೇಗ ಕಾರ್ಯಗತ ಮಾಡಬೇಕು ಎಂದು ಹೇಳಿದ್ದೇವೆ. ನಮ್ಮ ಕಡೆಯಿಂದ ಭೂಮಿ ಕೊಡಬೇಕು, ಶೇ.50 ವೆಚ್ಚ ಭರಿಸಲು ನಾವು ಸಿದ್ಧರಿದ್ದೇವೆ ಎನ್ನುವ ಮಾಹಿತಿ ತಿಳಿಸಿದ್ದೇವೆ.
    • ಶಿರಾಡಿ ಘಾಟ್ ರಸ್ತೆ ಬಗ್ಗೆಯೂ ಚರ್ಚೆ ನಡೆಸಿದ್ದು, ಈಗ ನಡೆಯು ತ್ತಿರುವ ಕಾಮಗಾರಿಯನ್ನು ಬೇಗ ಮುಗಿಸುವಂತೆ ಕೋರಿದ್ದೇವೆ.
    • ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ನಮ್ಮ ಜಿಎಸ್​ಟಿ ಪರಿಹಾರ 2022ಕ್ಕೆ ಮುಗಿಯುತ್ತಿದ್ದು, ಅದನ್ನು ಮತ್ತೆ ಮುಂದುವರೆಸಬೇಕು ಎಂದು ಮಗದೊಮ್ಮೆ ಮನವಿ ಮಾಡಲಾಯಿತು.
    • ನಬಾರ್ಡ್ ಯೋಜನೆಯನ್ನು ಕರ್ನಾಟಕಕ್ಕೆ ವಿಶೇಷ ಅನುಷ್ಠಾನ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಈ ಸಂಬಂಧ ಒಂದು ಸಭೆ ಮಾಡಲಾಗಿದೆ, ಮತ್ತೊಂದು ಸಭೆಯನ್ನು ನಡೆಸಿ ಅವರೇ ಬಂದು ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ.

    ಸಂಪುಟ ಚರ್ಚೆ ಇಲ್ಲ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಗ್ಯದಲ್ಲಿ ವ್ಯತ್ಯಾಸವಿದ್ದಿದ್ದರಿಂದ ಹೆಚ್ಚು ಮಾತನಾಡಲು ಆಗಲಿಲ್ಲ ಎಂದು ಬೊಮ್ಮಾಯಿ ಹೇಳಿದರು. ಪಕ್ಷದ ಸಂಘಟನೆಗೆ ಒತ್ತು ಕೊಡಬೇಕು. ಮುಂಬರುವ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸ ಬೇಕೆಂದು ಹೇಳಿದ್ದಾರೆ. ಸಂಪುಟ ವಿಚಾರ ಚರ್ಚೆಯಾಗಿಲ್ಲ ಎಂದರು.

    ಭಾರತದಲ್ಲಿ ಇನ್ನು ಈ ಕಾರು ಉತ್ಪಾದನೆ ಆಗುವುದಿಲ್ಲ; ಸದ್ಯಕ್ಕೆ ಇರುವ ದಾಸ್ತಾನಷ್ಟೇ ಮಾರಾಟ!

    ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಪಡೆದು ಮರಳುತ್ತಿದ್ದ ಮೂವರು ಸ್ನೇಹಿತರು ಅಪಘಾತಕ್ಕೆ ಬಲಿ; ಇಬ್ಬರು ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts